ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಒಂದು ವರ್ಷ ಪೂರ್ಣಗೊಳಿಸುತ್ತಿರುವ ನಿಮಿತ್ತ ದೊಡ್ಡಬಳ್ಳಾಪುರದಲ್ಲಿ ಆಯೋಜಿಸಿರುವ ಜನೋತ್ಸವ ಕಾರ್ಯಕ್ರಮಕ್ಕೆ ವಿಶೇಷ ಲೋಗೋ ಸಿದ್ದಪಡಿಸಲಾಗಿದೆ. ಬಿಜೆಪಿ ಸರ್ಕಾರ ಮೂರು ವರ್ಷ ಪೂರ್ಣಗೊಳಿಸುತ್ತಿರುವ ಮತ್ತು ಬೊಮ್ಮಾಯಿ ಒಂದು ವರ್ಷದ ಅವಧಿ ಪೂರೈಸುತ್ತಿರುವ ಎರಡು ವಿಷಯಗಳನ್ನು ಸೂಚಕವಾಗಿಸುವ ರೀತಿಯಲ್ಲಿ ಕಾರ್ಯಕ್ರಮದ ಲೋಗೋ ವಿನ್ಯಾಸಗೊಳಿಸಲಾಗಿದೆ.
ಜುಲೈ 28ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸರ್ವರ ವಿಕಾಸಕ್ಕೆ ಸಮೃದ್ಧ ಕರ್ನಾಟಕ ಎಂಬ ಶಿರ್ಷಿಕೆಯಲ್ಲಿ ಕಾರ್ಯಕ್ರಮ ಮಾಡಲು ಸರ್ಕಾರ ಸಜ್ಜಾಗಿದೆ. ದೊಡ್ಡಬಳ್ಳಾಪುರದಲ್ಲಿ ಬೃಹತ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಜನೋತ್ಸವದ ಕಾರ್ಯಕ್ರಮಕ್ಕಾಗಿ 3 ಮತ್ತು 1 ಎರಡೂ ಸಂಖ್ಯೆ ಇರುವ ಮಾದರಿಯಲ್ಲಿ ಲೋಗೋ ವಿನ್ಯಾಸ ಮಾಡಲಾಗಿದೆ.