ಬೆಂಗಳೂರು:ಕನ್ನಡ ರಾಜ್ಯೋತ್ಸವ ನಿಮಿತ್ತ ಇಂದು ವಿಧಾನಸೌಧದಲ್ಲಿ ಕೋಟಿ ಕಂಠ ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ. ಅಲ್ಲದೇ ರಾಜ್ಯಾದ್ಯಂತ ಈ ಕಾರ್ಯಕ್ರಮ ಇರಲಿದ್ದು, ಎಲ್ಲ ಅಧಿಕಾರಿಗಳು ತಪ್ಪದೇ ಭಾಗವಹಿಸುವಂತೆ ಸರ್ಕಾರದಿಂದ ಸೂಚನೆ ನೀಡಲಾಗಿದೆ.
ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸುತ್ತೋಲೆ ಹೊರಡಿಸಿದೆ. ಕೋಟಿ ಕಂಠ ಗೀತ ಗಾಯನ ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದ ಆಯೋಜಿಸಲಾಗುತ್ತಿದ್ದು, ಕನ್ನಡ ನಾಡು-ನುಡಿಯ ಶ್ರೇಷ್ಠತೆಯನ್ನು ಸಾರುವ ನನ್ನ ನಾಡು - ನನ್ನ ಹಾಡು ಸಮೂಹ ಗೀತ ಗಾಯನ, ನಾಡಗೀತೆ, ಹುಯಿಲಗೋಳ ನಾರಾಯಣರಾಯರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ರಾಷ್ಟ್ರಕವಿ ಕುವೆಂಪುರವರ ಬಾರಿಸು ಕನ್ನಡ ಡಿಂಡಿಮವ, ಡಾ: ಡಿ.ಎಸ್ ಕರ್ಕಿಯವರ ಹಚ್ಚೇವು ಕನ್ನಡದ ದೀಪ, ನಾಡೋಜ ಡಾ: ಚೆನ್ನವೀರ ಕಣವಿಯವರ ವಿಶ್ವವಿನೂತನ ವಿದ್ಯಾಚೇತನ ಹಾಗೂ ಡಾ: ಹಂಸಲೇಖರವರ ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು ಎಂಬ ಈ ಗೀತೆಗಳನ್ನು ಇಂದು ಬೆಳಗ್ಗೆ 12 ಗಂಟೆಗೆ ರಾಜ್ಯಾದ್ಯಂತ ಏಕಕಾಲದಲ್ಲಿ ಹಾಡಲಾಗುತ್ತಿದೆ.