ಬೆಂಗಳೂರು:ನಾಡಪ್ರಭುಗಳ ಹೆಸರಿನಲ್ಲಿರುವ ವಿಮಾನ ನಿಲ್ದಾಣದಲ್ಲಿ 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರಗತಿ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಲೋಕಾರ್ಪಣೆ ಮಾಡಿದ್ದಾರೆ.
ಕೆಂಪೇಗೌಡ ಪ್ರತಿಮೆ ವಿಶೇಷತೆಗಳೇನು?: ರಾಜ್ಯ ಸರ್ಕಾರ ನಿರ್ಮಾಣ ಮಾಡಿರುವ ಕೆಂಪೇಗೌಡರ ಈ ಪ್ರತಿಮೆ ಬೆಂಗಳೂರು ನಿರ್ಮಾತೃಗಳ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವಲ್ಲಭಬಾಯ್ ಪಟೇಲರ ಏಕತಾ ಪ್ರತಿಮೆ ನಿರ್ಮಾಣ ಮಾಡಿದ 'ರಾಮ್ ಸುತಾರ್ ಕ್ರಿಯೇಷನ್ಸ್ ಸಂಸ್ಥೆ' ಕೆಂಪೇಗೌಡರ ಪ್ರತಿಮೆ ವಿನ್ಯಾಸ ಹಾಗೂ ನಿರ್ಮಾಣ ಮಾಡಿದೆ.
ನಾಡಪ್ರಭು ಕೆಂಪೇಗೌಡರ ಪ್ರತಿಮೆಯ ವಿಶೇಷತೆಗಳು ಖಡ್ಗದ ತೂಕ 4 ಸಾವಿರ ಕೆಜಿ: ಕೆಂಪೇಗೌಡರ ಪ್ರತಿಮೆಯ ಖಡ್ಗವೇ 4 ಸಾವಿರ ಕೆಜಿ ತೂಕ ಇದೆ. ಪ್ರತಿಮೆಗೆ ಒಟ್ಟು 65 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. 120 ಟನ್ ಉಕ್ಕು, 98 ಟನ್ ಕಂಚು ಉಪಯೋಗಿಸಲಾಗಿದೆ. ಪ್ರತಿಮೆಯ ಒಟ್ಟು ತೂಕ 218 ಟನ್.
ಥೀಮ್ ಪಾರ್ಕ್: ಪ್ರತಿಮೆಯ ಸುತ್ತ 23 ಎಕರೆಯಲ್ಲಿ ಥೀಮ್ ಪಾರ್ಕ್, ಕೆರೆ ನಿರ್ಮಾಣ ಮಾಡಲಾಗಿದ್ದು, ರಾಜ್ಯದ ಹಲವು ಸ್ಥಳಗಳಿಂದ ಸಂಗ್ರಹಿಸಿರುವ ಮಣ್ಣನ್ನು ಈ ಥೀಮ್ ಪಾರ್ಕಿನಲ್ಲಿ ಬಳಸಿಕೊಳ್ಳಲಾಗಿದೆ.
ವೀರತೆಯ ಪ್ರತೀಕ: ಈ ಪ್ರತಿಮೆ ಬೆಂಗಳೂರಿನಲ್ಲಿಯೇ ಅತಿ ಎತ್ತರದ ಪ್ರತಿಮೆಯಾಗಿದೆ. ಪ್ರತಿಮೆಯು ನಾಯಕತ್ವ, ಧೀರ ಮತ್ತು ಆಡಳಿತಗಾರನಿಗೆ ಇರಬೇಕಾದ ಮೌಲ್ಯ, ವ್ಯಕ್ತಿತ್ವವನ್ನು ಬಿಂಬಿಸುತ್ತದೆ.
2020 ರಲ್ಲೇ ಕಾಮಗಾರಿ ಆರಂಭ : 2020ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ವಿಮಾನ ನಿಲ್ದಾಣದ ಬಳಿ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದರು. 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆ ಮತ್ತು 23 ಎಕರೆ ವಿಸ್ತೀರ್ಣದ ಥೀಮ್ ಪಾರ್ಕ್ ಕಾಮಗಾರಿಗೆ ಅವರು ಭೂಮಿಪೂಜೆ ಸಹ ನೆರವೇರಿಸಿದ್ದರು.
ಪ್ರಧಾನಿಗಳಿಂದ ಶಿಲ್ಪಿ ರಾಮ್ ಸುತಾರ ಅವರಿಗೆ ಅಭಿನಂದನೆ: ಕೆಂಪೇಗೌಡರ ಪ್ರಗತಿ ಪ್ರತಿಮೆಯನ್ನು ನಿರ್ಮಿಸಿದವರು ರಾಮ್ ಸುತಾರ್. ಇವರು ಇಡೀ ಭಾರತದಲ್ಲಿಯೇ ಅತ್ಯಂತ ಶ್ರೇಷ್ಠ ಶಿಲ್ಪಿ ಎಂದು ಖ್ಯಾತರಾಗಿದ್ದಾರೆ. ಅಹಮದಾಬಾದ್‍ನಲ್ಲಿರುವ ವಲ್ಲಭಭಾಯಿ ಪಟೇಲ್ ಅವರ ಐಕ್ಯತಾ ಮೂರ್ತಿ ಹಾಗೂ ಅಂಬೇಡ್ಕರ್ ಅವರ ಅತಿ ಎತ್ತರದ ಮೂರ್ತಿಯನ್ನು ನಿರ್ಮಿಸಿದ ಖ್ಯಾತಿ ಅವರದ್ದು. ಪ್ರಧಾನಿ ನರೇಂದ್ರ ಮೋದಿ, ರಾಮ್ ಸುತಾರ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು-ಮೈಸೂರು-ಚೆನ್ನೈ ವಂದೇ ಭಾರತ್ ವಿಶೇಷ ರೈಲಿನಲ್ಲಿ ಪ್ರಯಾಣಿಸಬೇಕೇ? ಹೀಗಿದೆ ದರ..