ಬೆಂಗಳೂರು: 2018ರ ಚುನಾವಣೆ ವೇಳೆ ಸಲ್ಲಿಸಿರುವ ನಾಮಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ ಆರೋಪದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ದಾಖಲಾಗಿದ್ದ ಖಾಸಗಿ ದೂರುನ್ನು ನಗರದ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ರದ್ದುಗೊಳಿಸಿ ಆದೇಶಿಸಿದೆ.
ವಿಶ್ವಕನ್ನಡ ಸಮಾಜದ ಸಂಸ್ಥಾಪಕ ಎಸ್. ಆನಂದ್ ಎಂಬುವರು ಸಲ್ಲಿಸಿದ್ದ ಖಾಸಗಿ ದೂರು ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಜೆ. ಪ್ರೀತ್ ಅವರು ಈ ಆದೇಶ ಮಾಡಿದ್ದಾರೆ. ನಾಮಪತ್ರದಲ್ಲಿ ಸುಳ್ಳು ಮಾಹಿತಿ ನಿಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು. ಆದರೆ, ಪ್ರತಿವಾದಿ ಎಚ್ ಡಿ ಕುಮಾರಸ್ವಾಮಿ ಅವರು ಮಾಹಿತಿ ಬಹಿರಂಗ ಪಡಿಸಿಲ್ಲ. ಸುಳ್ಳು ಹೇಳುವುದು ಮತ್ತು ಮಾಹಿತಿ ಬಹಿರಂಗ ಪಡಿಸದಿರುವುದು ವಿಭಿನ್ನ ನೆಲೆಗಳಲ್ಲಿ ನಿಂತಿವೆ. ಆದ ಕಾರಣದ ಆರೋಪಿಗಳು ತಪ್ಪೆಸಗಿಲ್ಲ. ಇದು ಐಪಿಸಿ 181ರ ಅಡಿ ಅಪರಾಧವಾಗಿ ಸಾಭೀತಾಗುವುದಿಲ್ಲ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
ಅಲ್ಲದೆ, ಪ್ರತಿವಾದಿಗಳಿಗೆ ರಾಧಿಕಾ ಕುಮಾರಸ್ವಾಮಿ ಅವರು ಎರಡನೇ ಪತ್ನಿ ಎನ್ನುವುದಕ್ಕೆ ಅರ್ಜಿದಾರರು ಯಾವುದೇ ಪುರಾವೆಗಳನ್ನು ನೀಡಿಲ್ಲ. ಆದ್ದರಿಂದ ದೂರುದಾರರ ಹೇಳಿಕೆಗಳನ್ನು ಪರಿಗಣಿಸಿ ಕ್ರಿಮಿನಲ್ ಪ್ರಕರಣ ದಾಖಲಿಸುವುದಕ್ಕೆ ಅವಕಾಶವಿಲ್ಲ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.