ಕರ್ನಾಟಕ

karnataka

ETV Bharat / state

'ಪೋಕ್ಸೋ ಕಾಯಿದೆಯಡಿ ಅಪರಾಧಿಗೆ ಶಿಕ್ಷೆ ಕಡಿಮೆ ಮಾಡಲು ವಿಶೇಷ ನ್ಯಾಯಾಲಯಕ್ಕೆ ಅಧಿಕಾರವಿಲ್ಲ'

ಪೋಕ್ಸೋ ಕಾಯ್ದೆಯಡಿ ಆರೋಪ ಸಾಬೀತಾದರೆ, ಕಾಯ್ದೆಯಲ್ಲಿ ನಿಗದಿಪಡಿಸಿರುವ ಶಿಕ್ಷೆ ಕಡಿಮೆ ಮಾಡಲು ವಿಶೇಷ ನ್ಯಾಯಾಲಯಗಳಿಗೆ ಅಧಿಕಾರ ಇಲ್ಲ ಎಂದು ಹೈಕೋರ್ಟ್ ಹೇಳಿದೆ.

special-court-has-no-power-to-reduce-punishment-under-pocso-act-hc
'ಫೋಕ್ಸೋ ಕಾಯಿದೆಯಡಿ ಅಪರಾಧಿಗೆ ಶಿಕ್ಷೆ ಕಡಿಮೆ ಮಾಡಲು ವಿಶೇಷ ನ್ಯಾಯಾಲಯಕ್ಕೆ ಅಧಿಕಾರವಿಲ್ಲ'

By

Published : Jan 19, 2023, 8:24 PM IST

Updated : Jan 19, 2023, 8:31 PM IST

ಬೆಂಗಳೂರು : ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯಡಿ ಆರೋಪ ಸಾಬೀತಾದಲ್ಲಿ ಕಾಯ್ದೆಯಲ್ಲಿ ನಿಗದಿಪಡಿಸಿರುವ ಶಿಕ್ಷೆಯನ್ನು ಕಡಿಮೆ ಮಾಡಲು ವಿಶೇಷ ನ್ಯಾಯಾಲಯಗಳಿಗೆ ಯಾವುದೇ ಅಧಿಕಾರ ಇರುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅಪ್ರಾಪ್ತೆಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನ ಕಾಲವಾಡಿ ನಿವಾಸಿ ಶೇಖ್ ರೌಫ್ ಎಂಬಾತನಿಗೆ ಸ್ಥಳೀಯ ಪೋಕ್ಸೋ ವಿಶೇಷ ನ್ಯಾಯಾಲಯವು 7 ವರ್ಷದ ಬದಲಾಗಿ 5 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

ಈ ಆದೇಶವನ್ನು ಪ್ರಶ್ನಿಸಿ ಪ್ರಶ್ನಿಸಿ ಬಾಲ್ಕಿ ಟೌನ್ ಠಾಣೆ ಪೊಲೀಸರು (ರಾಜ್ಯ ಸರ್ಕಾರ) ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಷಾನಂದ ಅವರಿದ್ದ ನ್ಯಾಯಪೀಠ, ಅರ್ಜಿಯನ್ನು ಪುರಸ್ಕರಿಸಿದೆ. ಅಲ್ಲದೇ, ಪ್ರಕರಣದಲ್ಲಿ ಆರೋಪಿ ಶೇಖ್ ರೌಫ್ ಅನ್ನು ದೋಷಿಯಾಗಿ ತೀರ್ಮಾನಿಸಿರುವ ಪೋಕ್ಸೋ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದಿದ್ದು, ಐದು ವರ್ಷ ಜೈಲು ಶಿಕ್ಷೆಯನ್ನು ಏಳು ವರ್ಷಕ್ಕೆ ಹೆಚ್ಚಿಸಿ ಆದೇಶಿಸಿದೆ.

ಜತೆಗೆ, ಪೋಕ್ಸೋ ಕಾಯ್ದೆಯ ಸೆಕ್ಷನ್ 4 ಅಡಿಯಲ್ಲಿ ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಅಪರಾಧ ಕೃತ್ಯಕ್ಕೆ ಕನಿಷ್ಠ ಏಳು ವರ್ಷ ಜೈಲು ಶಿಕ್ಷೆ ನಿಗದಿಪಡಿಸಲಾಗಿದೆ. ಈ ಅಂಶಗಳನ್ನು ನಿರ್ಲಕ್ಷಿಸಿ ವಿಶೇಷ ನ್ಯಾಯಾಲಯ ಆರೋಪಿಗೆ ಕೇವಲ ಐದು ವರ್ಷ ಜೈಲು ಶಿಕ್ಷೆ ವಿಧಿಸಿರುವ ಕಾನೂನು ಬಾಹಿರ. ಈ ಆದೇಶದಲ್ಲಿ ಹೈಕೋರ್ಟ್ ಮಧ್ಯಪ್ರವೇಶಿಸುವ ಅಗತ್ಯ ಕಂಡುಬರುತ್ತಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಕರಣದ ಹಿನ್ನೆಲೆ ಏನು ?:12 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಶೇಖರ್ ರೌಪ್ ಅನ್ನು ಅಪರಾಧಿಯಾಗಿ ಪರಿಗಣಿಸಿದ್ದ ಪೋಕ್ಸೋ ವಿಶೇಷ ನ್ಯಾಯಾಲಯ, ಆತನಿಗೆ ಐದು ವರ್ಷ ಸಾಧಾರಣ ಜೈಲು ಶಿಕ್ಷೆ ವಿಧಿಸಿ 2015ರ ಸೆಪ್ಟೆಂಬರ್​ 7ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಬಾಲ್ಕಿ ಟೌನ್ ಪೊಲೀಸರು ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ:ಕದ್ದ ಚಿನ್ನ ಖರೀದಿ ಆರೋಪ: ಅಟ್ಟಿಕಾ ಗೋಲ್ಡ್​ ಸಿಬ್ಬಂದಿ ವಿರುದ್ದದ ಪ್ರಕರಣ ರದ್ದು

ಸರ್ಕಾರದ ವಿಶೇಷ ಅಭೀಯೋಜಕರು ವಾದ ಮಂಡಿಸಿ, ಶೇಖ್ ರೌಫ್ ಎಸಗಿರುವ ಅಪರಾಧ ಕೃತ್ಯವನ್ನು ಪ್ರಾಸಿಕ್ಯೂಷನ್ ಎಲ್ಲ ಸಾಕ್ಷ್ಯಾಧಾರಗಳ ಸಹಿತ ಸಾಬೀತುಪಡಿಸಿತ್ತು. ಅದನ್ನು ಪರಿಗಣಿಸಿದ ಪೋಕ್ಸೋ ನ್ಯಾಯಾಲಯವು ಶೇಖರ್ ರೌಫ್ ಅನ್ನು ದೋಷಿಯಾಗಿ ತೀರ್ಮಾನಿಸಿದೆ. ಹೀಗಿದ್ದರೂ ಅಪರಾಧಿಗೆ ಶಿಕ್ಷೆ ಮತ್ತು ದಂಡ ಮೊತ್ತವನ್ನು ಕಾಯ್ದೆಯಡಿ ನಿಗದಿಪಡಿಸಿರುವ ಪ್ರಮಾಣಕ್ಕಿಂತ ಕಡಿಮೆ ವಿಧಿಸಿರುವುದು ಸರಿಯಲ್ಲ. ಈ ರೀತಿ ಶಿಕ್ಷೆ ಪ್ರಮಾಣವನ್ನು ಕಡಿಮೆ ಮಾಡಲು ವಿಶೇಷ ನ್ಯಾಯಾಲಯಕ್ಕೆ ಯಾವುದೇ ವಿವೇಚನಾತ್ಮಕ ಅಧಿಕಾರ ಇಲ್ಲ ಎಂದು ವಾದ ಮಂಡಿಸಿದ್ದರು.

ಜೊತೆಗೆ, ಆರೋಪಿಯು 12 ವರ್ಷದ ಬಾಲಕಿ ಮೇಲೆ ಹೀನ ಕೃತ್ಯ ಎಸಗಿ ಆಕೆಯ ಭವಿಷ್ಯವನ್ನೇ ಹಾಳು ಮಾಡಿದ್ದಾನೆ. ಸಮಾಜದಲ್ಲಿ ಆಕೆಯ ಮರ್ಯಾದೆ, ಗೌರವಕ್ಕೆ ಧಕ್ಕೆ ತಂದಿದ್ದಾನೆ. ಆದ್ದರಿಂದ ವಿಶೇಷ ನ್ಯಾಯಾಲಯವು ವಿಧಿಸಿರುವ ಜೈಲು ಶಿಕ್ಷೆ ಮತ್ತು ದಂಡದ ಪ್ರಮಾಣ ತುಂಬಾ ಕಡಿಮೆಯಿದ್ದು, ಅದನ್ನು ಹೆಚ್ಚಿಸಬೇಕು ಎಂದು ಕೋರಿದ್ದರು.

ಇದನ್ನೂ ಓದಿ:ದೇವರಾಜ ಅರಸು ಶಿಕ್ಷಣ ಟ್ರಸ್ಟ್‌​ನ ಕಾರ್ಯದರ್ಶಿ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್

Last Updated : Jan 19, 2023, 8:31 PM IST

ABOUT THE AUTHOR

...view details