ಬೆಂಗಳೂರು:ನಾಡಹಬ್ಬ ಮೈಸೂರು ದಸರಾ ಹಾಗು ದಸರಾ ರಜೆ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ 2,000ಕ್ಕೂ ಹೆಚ್ಚು ಬಸ್‌ಗಳ ವಿಶೇಷ ಸಾರಿಗೆ ವ್ಯವಸ್ಥೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್‌ಆರ್‌ಟಿಸಿ) ಕಲ್ಪಿಸಿದ್ದು, ನಿಗಮದ ಎಲ್ಲಾ ವಿಭಾಗಗಳಲ್ಲಿ ದಸರಾ ವಿಶೇಷ ಕಾರ್ಯಾಚರಣೆಗೆ ವಿಧ್ಯುಕ್ತವಾಗಿ ಬಸ್ಗಳಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.
ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಮೈಸೂರು ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ದಸರಾ ವಿಶೇಷ ಕಾರ್ಯಾಚರಣೆ ಅಂಗವಾಗಿ ಅಲಂಕೃತ ವಾಹನಗಳಿಗೆ ಪೂಜೆ ಸಲ್ಲಿಸಿ ಕಾರ್ಯಾಚರಣೆ ಪ್ರಾರಂಭಿಸಲಾಯಿತು. ಚಾಲಕ, ನಿರ್ವಾಹಕರಿಗೆ ಸಿಹಿ ಹಂಚಿ ಶುಭ ಕೋರಲಾಯಿತು. ಕೇಂದ್ರ ಕಚೇರಿಯ ಹಿರಿಯ ಅಧಿಕಾರಿಗಳು, ಕೇಂದ್ರೀಯ ವಿಭಾಗದ ಅಧಿಕಾರಿಗಳು, ಕೆಂಪೇಗೌಡ ಬಸ್ ನಿಲ್ದಾಣದ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.
ರಾಜ್ಯ ಹಾಗೂ ದೇಶದ ವಿವಿಧೆಡೆಗಳಿಂದ ದಸರಾ ವೀಕ್ಷಣೆಗೆ ಮೈಸೂರು ನಗರಕ್ಕೆ ಬರುವ ಪ್ರವಾಸಿಗರ ಹಾಗೂ ರಜೆಗಳ ಪ್ರಯುಕ್ತ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ, ಪ್ರಸ್ತುತ ಕಾರ್ಯಾಚರಣೆ ಮಾಡಲಾಗುತ್ತಿರುವ ಕರ್ನಾಟಕ ಸಾರಿಗೆ (ವೇಗದೂತ) ರಾಜಹಂಸ, ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್ (ಮಲ್ಟಿ ಆ್ಯಕ್ಸಲ್) ಇ.ವಿ ಪವರ್ ಪ್ಲಸ್, ಅಂಬಾರಿ ಕ್ಲಬ್ ಕ್ಲಾಸ್, ಅಂಬಾರಿ ಉತ್ಸವ್ ಹಾಗೂ ಪಲ್ಲಕ್ಕಿ ಸಾರಿಗೆ ಸೇವೆಗಳ ಜತೆಗೆ ಹೆಚ್ಚುವರಿ ಬಸ್‌ಗಳ ವಿಶೇಷ ಸಾರಿಗೆ ಸೇವೆಗಳ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.