ಕರ್ನಾಟಕ

karnataka

ETV Bharat / state

ಬಿಜೆಪಿ ವತಿಯಿಂದ ವಿಶೇಷವಾಗಿ 76ನೇ ಸ್ವಾತಂತ್ರ್ಯೋತ್ಸವ ಆಚರಣೆ: ಎನ್.ರವಿಕುಮಾರ್ - ಈಟಿವಿ ಭಾರತ್​ ಕನ್ನಡ ನ್ಯೂಸ್

Independence Day: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಸ್ವಾತಂತ್ರ್ಯೋತ್ಸವವನ್ನು ವಿಶೇಷವಾಗಿ ಆಚರಿಸಲು ಕರೆ ಕೊಟ್ಟಿದ್ದಾರೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದ್ದಾರೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್

By

Published : Aug 13, 2023, 8:39 PM IST

ಬೆಂಗಳೂರು : ಪಂಜಿನ ಮೆರವಣಿಗೆ, ದೇಶ ಇಬ್ಭಾಗದ ನಾಟಕ, ಸ್ವಾತಂತ್ರ್ಯ ಹೋರಾಟ ನಡೆದ ಸ್ಥಳದಿಂದ ಮಣ್ಣು ಸಂಗ್ರಹದಂತಹ ಕಾರ್ಯಕ್ರಮಗಳ ಮೂಲಕ 76ನೇ ಸ್ವಾತಂತ್ರ್ಯೋತ್ಸವವನ್ನು ಬಿಜೆಪಿ ವಿಶೇಷವಾಗಿ ಆಚರಿಸಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ತಿಳಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 6 ಲಕ್ಷ ಪಂಚಾಯತ್‌ಗಳು ಸೇರಿದಂತೆ ಕಿತ್ತೂರು, ಬಾಗೆವಾಡಿ, ಬಸವಕಲ್ಯಾಣ, ಮೈಸೂರು, ಚಿತ್ರದುರ್ಗದ ರೀತಿ ದೇಶದ 7,500 ಸ್ವಾತಂತ್ರ್ಯ ಹೋರಾಟ ನಡೆದ ಸ್ಥಳಗಳಿಂದ ಮಣ್ಣು ಸಂಗ್ರಹ ಮಾಡುತ್ತೇವೆ. ಇದೆಲ್ಲವನ್ನೂ ಕರ್ತವ್ಯ ಪಥದಲ್ಲಿರುವ ವಾಟಿಕಾ ಪಾರ್ಕ್‌ನಲ್ಲಿ ಸಂಗ್ರಹಿಸಿಡಲಾಗುತ್ತದೆ. ಇದು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೀಡಿರುವ ಕರೆ. ಆಗಸ್ಟ್ 15ರಿಂದ ಸಂಗ್ರಹ ಆರಂಭಗೊಂಡು ಆಗಸ್ಟ್ 31ರಂದು ನವದೆಹಲಿಯಲ್ಲಿ ಸಮಾರೋಪಗೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ ಎಂದರು.

ದೇಶ ವಿಭಜನೆಯ‌ ದುರಂತ ಕಥೆ ಪ್ರದರ್ಶನ: ಜಿಲ್ಲೆ, ತಾಲೂಕುಗಳಲ್ಲಿ ಕಾರ್ಯಕರ್ತರು ರಾಷ್ಟ್ರಧ್ವಜ ಹಾರಿಸುವ ಮೂಲಕ ವಿಶಿಷ್ಟವಾಗಿ ಆಚರಿಸುತ್ತೇವೆ. ದೇಶಕ್ಕೆ ಪ್ರಾಣಾರ್ಪಣೆ ಮಾಡಿದವರನ್ನು ನೆನೆಯುತ್ತೇವೆ. ನಳಿನ್ ಕುಮಾರ್ ಕಟೀಲ್ ಬೆಂಗಳೂರಿನಲ್ಲಿ ಧ್ವಜಾರೋಹಣ ಮಾಡುತ್ತಾರೆ. ಆಗಸ್ಟ್ 14ರಂದು ಪಂಜಿನ ಮೆರವಣಿಗೆ ಇರಲಿದೆ.

ಸ್ವಾತಂತ್ರ್ಯದ ಸಂತೋಷದ ಜತೆಗೆ ದುಃಖವೂ ಆಯಿತು. ಆಗಸ್ಟ್ 14ರಂದು ದೇಶ ವಿಭಜನೆಗೊಂಡು ನಮ್ಮ ಲಕ್ಷಾಂತರ ತಾಯಂದಿರು ಸಂಕಷ್ಟ ಅನುಭವಿಸಿದರು. ಅಖಂಡ ಭಾರತದಲ್ಲಿ ಸೋದರರಂತೆ ಜೀವನ ನಡೆಸುತ್ತಿದ್ದ ದೇಶ ಇಬ್ಭಾಗ ಆಯಿತು. ಈ ಚರಿತ್ರೆಯನ್ನು ನಾವು ಮರೆಯಬಾರದು. ಇದರ ಇತಿಹಾಸವೂ ಈಗಿನ ಪೀಳಿಗೆಗೆ ಗೊತ್ತಾಗಬೇಕು. ರಾಜ್ಯ ಹಾಗೂ ದೇಶದ ಎಲ್ಲ ಕಡೆ ದೇಶ ವಿಭಜನೆಯ‌ ದುರಂತ ಕಥೆ ಪ್ರದರ್ಶನ ಆಗಲಿದೆ. ಬೆಂಗಳೂರಿನಲ್ಲಿ ಪ್ರದರ್ಶನವನ್ನು ಆಗಸ್ಟ್ 14ರಂದು ಪದ್ಮಶ್ರೀ ಹಾಜಬ್ಬ ಉದ್ಘಾಟನೆ ಮಾಡಲಿದ್ದು, ಅಂದು ಸಂಜೆ ಪಂಜಿನ ಮೆರವಣಿಗೆ ನಡೆಯಲಿದೆ ಎಂದು ರವಿಕುಮಾರ್​ ಮಾಹಿತಿ ನೀಡಿದರು.

ಕಾಂಗ್ರೆಸ್​ ವಿರುದ್ದ ವಾಗ್ದಾಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದರೆ ಬಂಗಾರದ ಕಾಲ ಬರುತ್ತದೆ ಎಂದು ಜನರು ತಿಳಿದಿದ್ದರು. ಈಗ ನೋಡಿದರೆ ಮೂವತ್ತಮೂರು ಶಾಸಕರೇ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕರ್ನಾಟಕದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ, ವರ್ಗಾವಣೆಯಲ್ಲಿ ವಿಪರೀತ ಭ್ರಷ್ಟಾಚಾರ ನಡೆದಿದೆ ಎಂದು ಹಿರಿಯ ಸಚಿವ ಬಸವರಾಜ ರಾಯರಡ್ಡಿ ಅವರೇ ಹೇಳಿದ್ದಾರೆ. ಇದು ಕಮಿಷನ್ ಸರ್ಕಾರ ಎಂದು ಕಾಂಟ್ರ್ಯಾಕ್ಟರ್‌ಗಳು ಹೇಳಿದ್ದಾರೆ.

ಚುನಾವಣೆಗಾಗಿ ಲಕ್ಷಾಂತರ ಕೋಟಿ ರೂ. ಸಂಗ್ರಹ ಮಾಡುವ ಕೆಲಸ ನಡೆಯುತ್ತಿದೆ. ಇದನ್ನು ಕೇಳಿದರೆ ನನ್ನನ್ನು ಹೆದರಿಸಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಮತ್ತೊಂದು ಕಡೆ 6-8 ಲಕ್ಷ ರೂ. ಲಂಚ ಕೇಳುತ್ತಿದ್ದಾರೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಆರೋಪಿಸಿದ್ದಾರೆ. ಭ್ರಷ್ಟಾಚಾರದ ಬಗ್ಗೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹೇಳಿದ್ದಾರೆ. ಆದರೆ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಕುರಿತು ಇವರ ನಿಲುವು ಏನಿದೆ? ಇದರ ಬಗ್ಗೆ ಸ್ಪಷ್ಟಪಡಿಸಲಿ ಕಾಂಟ್ರ್ಯಾಕ್ಟರ್‌ಗಳು ಲಂಚದ ಆರೋಪ ಮಾಡಿದ್ದಾರೆ, ಇದರ ಬಗ್ಗೆ ಕ್ರಮ ಏನು? ಎಂದು ರವಿಕುಮಾರ್​ ಪ್ರಶ್ನಿಸಿದರು.

ಗುತ್ತಿಗೆದಾರರು ಹಾಗೂ ವರ್ಗಾವಣೆ ವಿಚಾರ ಕುರಿತು ಆಗಸ್ಟ್ 16ರ ನಂತರ ದೊಡ್ಡ ಹೋರಾಟದ ಪ್ಲಾನ್ ಮಾಡಲಿದ್ದೇವೆ. ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿದಂತೆ ನಮ್ಮ ಎಲ್ಲಾ ಶಾಸಕರ ಸಭೆ ನಡೆಸಲಿದ್ದೇವೆ. ಸಭೆಯಲ್ಲಿ ಸರ್ಕಾರದ ವಿರುದ್ಧ ಯಾವ ರೀತಿ ಪ್ರತಿಭಟನೆ ನಡೆಸಬೇಕು ಎಂಬುವುದರ ಬಗ್ಗೆ ಚರ್ಚೆ ಮಾಡಲಿದ್ದೇವೆ ಎಂದರು.

ಇದನ್ನೂ ಓದಿ :ಕೆ.ಜೆ ಹಳ್ಳಿ, ಡಿ.ಜೆ ಹಳ್ಳಿ ಕೇಸ್; ಗುತ್ತಿಗೆದಾರರಿಗೆ ಕಮಿಷನ್ ಬೇಡಿಕೆ ವಿರುದ್ಧ ಬಿಜೆಪಿ ಹೋರಾಟ: ಅಶ್ವತ್ಥ್​ ನಾರಾಯಣ್

ABOUT THE AUTHOR

...view details