ಬೆಂಗಳೂರು:ಬಿಜೆಪಿ ಮುಖಂಡ ಅನಂತರಾಜು ಸಾವಿನ ಪ್ರಕರಣವನ್ನ ಒಂದೆಡೆ ಪೊಲೀಸರು ತನಿಖೆ ನಡೆಸುತ್ತಿದ್ದರೆ, ಮತ್ತೊಂದೆಡೆ ಸುಮಾ ಮತ್ತು ರೇಖಾ ನಡುವಿನ ಪರಸ್ಪರ ಆರೋಪ- ಪ್ರತ್ಯಾರೋಪ ಮುಂದುವರೆದಿದೆ. ಜೀವ ಬೆದರಿಕೆ ಇರುವುದಾಗಿ ಆರೋಪಿಸಿ ರೇಖಾ ದೂರು ನೀಡಿದ್ದರು. ಆದರೆ ಈ ಆರೋಪವನ್ನು ಅನಂತರಾಜು ಪತ್ನಿ ಸುಮಾ ಅಲ್ಲಗೆಳೆದಿದ್ದಾರೆ.
ಶುಕ್ರವಾರ ತಮ್ಮ ಸ್ವಗೃಹದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿರುವ ಮೃತ ಅನಂತರಾಜು ಪತ್ನಿ ಸುಮಾ, ರೇಖಾ ಹಾಗೂ ಪತಿ ಅನಂತರಾಜು ನಡುವಿನ ಆರು ವರ್ಷಗಳ ಸಂಬಂಧ ಕಳೆದ ಮಾರ್ಚ್ 22 ರಂದು ನನಗೆ ಗೊತ್ತಾಗಿತ್ತು. ಬಳಿಕ ಆಕೆಗೆ ಫೋನ್ ಮಾಡಿ ಕೋಪದಲ್ಲಿ ಬೈದಿದ್ದು ನಿಜ. ಅವಳು ಭಯ ಬೀಳಲೆಂದು ಗಂಡನ ಕೈ ಮುರಿದಿರುವುದಾಗಿ ಸುಳ್ಳು ಹೇಳಿದ್ದೆ. ಇದರಿಂದ ಭಯಬಿದ್ದು ಪತಿಯಿಂದ ದೂರು ಉಳಿಯುವುದಾಗಿ ಭಾವಿಸಿದ್ದೆ. ಆದರೆ, ಅವಳು ಹೆದರದೇ ನನ್ನನ್ನೇ ಬ್ಲ್ಯಾಕ್ ಮೇಲ್ ಮಾಡಿದ್ದಾಳೆ. ಹಣ ನೀಡದೆ ಹೋದರೆ ನನ್ನ ಬಳಿಯಿರುವ ವಿಡಿಯೋ ಬಹಿರಂಗ ಮಾಡುವೆ ಎಂದು ಬೆದರಿಸಿದ್ದಳು ಎಂದಿದ್ದಾರೆ.