ಕರ್ನಾಟಕ

karnataka

ETV Bharat / state

ಹಿಂದಿ ಹೇರಿಕೆ ಬಗ್ಗೆ ಜೆಡಿಎಸ್‍ ಶಾಸಕರಿಂದ ಸದನದಲ್ಲಿ ಗದ್ದಲ: ಇದೇನು ಜಾತ್ರೆನಾ, ಸಂತೆನಾ?- ಗರಂ ಆದ ಸ್ಪೀಕರ್

ನಾವು ಕನ್ನಡ ಪರ ಇದ್ದೇನೆ. ಕನ್ನಡವನ್ನು ಬೆಳೆಸಲು ಸರ್ಕಾರ ಬದ್ಧವಿದೆ. ಇದರಲ್ಲಿ ಯಾವ ಕಾರಣಕ್ಕೂ ರಾಜಿಯೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

By

Published : Sep 14, 2022, 3:20 PM IST

Updated : Sep 14, 2022, 3:35 PM IST

ಬೆಂಗಳೂರು: ಇದೇನು ಜಾತ್ರೆನಾ, ಸಂತೆನಾ?, ಮಾನಸಿಕ ಆಸ್ಪತ್ರೆಯಲ್ಲಿ ಕಿರುಚಾಡಿದಂತೆ ಏನಿದು..? ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಜೆಡಿಎಸ್‍ ಶಾಸಕರ ಮೇಲೆ ಸಿಟ್ಟಾದ ಘಟನೆ ಇಂದು ವಿಧಾನಸಭೆಯಲ್ಲಿ ನಡೆಯಿತು.

ಪ್ರಶ್ನೋತ್ತರ ಕಲಾಪ ಮುಗಿಯುತ್ತಿದ್ದಂತೆ ಹಿಂದಿ ಭಾಷೆ ಹೇರಿಕೆ ಬಗ್ಗೆ ಜೆಡಿಎಸ್‍ ಶಾಸಕ ಡಾ. ಕೆ ಅನ್ನದಾನಿ ಧ್ವನಿ ಎತ್ತಿದ್ದರು. ಕೇಂದ್ರ ಸರ್ಕಾರ ಕನ್ನಡಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಕನ್ನಡದ ಶಾಲು ಪ್ರದರ್ಶನ ಮಾಡಿ ಜೆಡಿಎಸ್ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು. ಜೆಡಿಎಸ್ ಶಾಸಕರ ವರ್ತನೆಗೆ ಗರಂ ಆದ ಸ್ಪೀಕರ್ ಕಾಗೇರಿ ಅವರು, ಏನಿದು ಜಾತ್ರೆನಾ? ಸಂತೆನಾ? ಜೆಡಿಎಸ್ ಶಾಸಕರಿಗೆ ಹೇಳಿ, ಏನಿದು ಮಾನಸಿಕ ಆಸ್ಪತ್ರೆಯಲ್ಲಿ ಮಾತನಾಡಿದ ಹಾಗೆ ಮಾತನಾಡುತ್ತೀರಿ. ಸಮಾಧಾನದಲ್ಲಿ ಕೇಳಿ ಎಂದು ಸೂಚಿಸಿದರು.

ಶಾಸಕರ ಕೂಗಾಟಕ್ಕೆ ಸಿಟ್ಟಾದ ಸ್ಪೀಕರ್ ಕಾಗೇರಿ, ಇವರು ಒಂದು ನೋಟಿಸ್ ಕೊಟ್ಟಿಲ್ಲ, ಸುಮ್ಮನೆ ಈ ರೀತಿ ಕೂಗಿದ್ರೆ ಹೇಗೆ? ಎಂದು ಪ್ರಶ್ನಿಸಿದರು. ಆಗ ಮಧ್ಯ ಪ್ರವೇಶ ಮಾಡಿದ ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಅವರು, ಹಿಂದಿ ಹೇರಿಕೆ ಬಗ್ಗೆ ನಮ್ಮ ಸದಸ್ಯರು ಸದನದಲ್ಲಿ ಗಮನ ಸೆಳೆಯಲು ಮುಂದಾಗಿದ್ದಾರೆ. ಸದನದ ಕಲಾಪಕ್ಕೆ ಅಡ್ಡಿ ಮಾಡುವ ಉದ್ದೇಶ ಇಲ್ಲ. ನಮ್ಮ ಪಕ್ಷದ ನಿಲುವು ದೇಶದಲ್ಲಿ 56ಕ್ಕೂ‌ ಹೆಚ್ಚು ಭಾಷೆಗಳು ಇವೆ. ಇತ್ತೀಚಿನ ದಿನಗಳಲ್ಲಿ ಒಂದು ರಾಷ್ಟ್ರ ಒಂದು ಭಾಷೆ ಎಂಬ ವಾತಾವರಣ ನಿರ್ಮಾಣ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಭಾಷೆಯ ಬಗ್ಗೆ ಆಯಾ ರಾಜ್ಯಗಳಲ್ಲಿ ಅವರದ್ದೇ ಆದ ಭಾವನಾತ್ಮಕ ಸಂಬಂಧ ಇದೆ. ಬಲವಂತವಾಗಿ ಭಾಷೆಯ ಕತ್ತು ಹಿಸುಕುವ ಕೆಲಸ ಆಗಬಾರದು. ಸದನದ ಮೂಲಕ ಮನವಿ ಸಲ್ಲಿಸುವುದು ನಮ್ಮ ಸದಸ್ಯರ ಅಹವಾಲು ಎಂದು ಹೇಳಿದರು.

ಸದನದಲ್ಲಿ ಸ್ಪೀಕರ್ ಗರಂ.. ಜೆಡಿಎಸ್​ ನಾಯಕರಿಗೆ ಸಿಎಂ ಉತ್ತರ

ಕನ್ನಡ ಕಡ್ಡಾಯಕ್ಕಾಗಿ ಕಾನೂನು ಜಾರಿ:ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ನಾವು ಕನ್ನಡ ಪರ ಇದ್ದೇನೆ. ಕನ್ನಡವನ್ನು ಬೆಳೆಸಲು ಸರ್ಕಾರ ಬದ್ಧವಿದೆ. ಇದರಲ್ಲಿ ಯಾವ ಕಾರಣಕ್ಕೂ ರಾಜಿಯೇ ಇಲ್ಲ. ನೆಲ, ಜಲ, ಭಾಷೆ ವಿಷಯದಲ್ಲಿ ರಾಜಕೀಯ ಮೀರಿ ನಿರ್ಧಾರ ಮಾಡುತ್ತೇವೆ. ಕನ್ನಡ ಅಗ್ರಮಾನ್ಯ ಭಾಷೆ ಆಗಿದೆ. ಕನ್ನಡವನ್ನು ಹೆಚ್ಚು ಬಳಸಲು ಒಂದು ಪ್ರತ್ಯೇಕ ಕಾನೂನು ತರುತ್ತೇವೆ. ಆ ಕಾನೂನು ಕನ್ನಡ ರಕ್ಷಣೆ ಮಾಡುತ್ತದೆ ಎಂದು ಸದನಕ್ಕೆ ತಿಳಿಸಿದರು.

ಹೊಸ ಶಿಕ್ಷಣ ನೀತಿಯಲ್ಲೂ ಸಹ ಕನ್ನಡಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಕನ್ನಡ ಮಾಧ್ಯಮದಲ್ಲೇ ಇಂಜಿನಿಯರಿಂಗ್ ಪದವಿ ಪಡೆಯಲು ಪ್ರೋತ್ಸಾಹ ನೀಡಲಾಗಿದೆ ಎಂದು ಹೇಳಿದರು.

ಓದಿ:ಸದನದಲ್ಲಿ ಪ್ರತಿಪಕ್ಷಗಳ ವಿರುದ್ಧ ಅಗ್ರೆಸ್ಸಿವ್ ಆಗಿ ಅಟ್ಯಾಕ್ ಮಾಡಿ: ಶಾಸಕರಿಗೆ ಸಿಎಂ ಸೂಚನೆ

Last Updated : Sep 14, 2022, 3:35 PM IST

ABOUT THE AUTHOR

...view details