ಕರ್ನಾಟಕ

karnataka

ETV Bharat / state

ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಸ್ಪೀಕರ್: 7 ದಿನ ಜಂಟಿ ಅಧಿವೇಶನದಲ್ಲಿ ಏನೆಲ್ಲಾ ನಡೀತು? - vidhana shabha latest news

ಕಳೆದ ಅಧಿವೇಶನದಲ್ಲಿ ಬಾಕಿ ಇದ್ದ 1 ವಿಧೇಯಕ ಸೇರಿ ಒಟ್ಟು 14 ವಿಧೇಯಕಗಳನ್ನು ಅಂಗೀಕರಿಸಲಾಗಿದೆ. ನಿಯಮ 60ರಡಿಯಲ್ಲಿ ನೀಡಿದ್ದ 1 ನಿಲುವಳಿ ಸೂಚನೆಯನ್ನು ನಿಯಮ 69ಕ್ಕೆ ಪರಿವರ್ತಿಸಿ ಚರ್ಚೆಗೆ ಅವಕಾಶ ನೀಡಲಾಗಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸದನಕ್ಕೆ ಮಾಹಿತಿ ನೀಡಿದರು.

Speaker vishweshwara
ವಿಶ್ವೇಶ್ವರ ಹೆಗಡೆ ಕಾಗೇರಿ

By

Published : Feb 5, 2021, 5:01 PM IST

ಬೆಂಗಳೂರು: ಜನವರಿ 28 ರಿಂದ ಫೆ. 5ರವರೆಗೆ 7 ದಿನಗಳ ಕಾಲ 33 ಗಂಟೆ 50 ನಿಮಿಷಗಳ ಕಾಲ ವಿಧಾನಸಭೆಯ ಕಾರ್ಯಕಲಾಪ ನಡೆಸಲಾಗಿದೆ.

ಈ ಕುರಿತು ಸದನಕ್ಕೆ ಇಂದು ಮಾಹಿತಿ ನೀಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ರಾಜ್ಯಪಾಲರು ವಿಧಾನ ಮಂಡಲದ ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ಜ. 28ರಂದು ಭಾಷಣ ಮಾಡಿದ್ದು, ವಂದನಾ ನಿರ್ಣಯದ ಮೇಲೆ ಎಲ್ಲಾ ಪಕ್ಷಗಳ 20 ಮಂದಿ ಸದಸ್ಯರು 12 ಗಂಟೆ 34 ನಿಮಿಷಗಳ ಕಾಲ ಚರ್ಚಿಸಿ ವಂದನಾ ನಿರ್ಣಯದ ಪ್ರಸ್ತಾಪವನ್ನು ಇಂದು ಅಂಗೀಕರಿಸಲಾಯಿತು ಎಂದು ತಿಳಿಸಿದರು.

ಇನ್ನು ಇತ್ತೀಚೆಗೆ ನಿಧನ ಹೊಂದಿರುವ ವಿಧಾನ ಪರಿಷತ್​ನ ಹಾಲಿ ಉಪ ಸಭಾಪತಿಯಾಗಿದ್ದ ಎಸ್.ಎಲ್.ಧರ್ಮೇಗೌಡ, ಹಾಲಿ ವಿಧಾನಸಭೆ ಸದಸ್ಯರು ಹಾಗೂ ಮಾಜಿ ಸಚಿವ ಮಲ್ಲಪ್ಪ ಚನ್ನವೀರಪ್ಪ ಮನಗೂಳಿ, ಮಾಜಿ ವಿಧಾನಸಭೆ ಸದಸ್ಯರುಗಳಾದ ಶ್ರೀಮತಿ ರೇಣುಕಾ ರಾಜೇಂದ್ರನ್, ಪ್ರೇಮಾನಂದ ಜೈವಂತ ಸುಬ್ರಾಯ, ಬಸವಂತರೆಡ್ಡಿ ಪಾಟೀಲ ಮೋತಕಪಲ್ಲಿ, ಕೇಂದ್ರದ ಮಾಜಿ ಸಚಿವ ಬೂಟಾ ಸಿಂಗ್, ಉದ್ಯಮ ಸಮೂಹಗಳ ಸ್ಥಾಪಕರಾಗಿದ್ದ ಡಾ. ಆರ್.ಎನ್.ಶೆಟ್ಟಿ, ಹಿರಿಯ ತತ್ವಶಾಸ್ತ್ರ ವಿದ್ವಾಂಸರಾಗಿದ್ದ ಡಾ. ಬನ್ನಂಜೆ ಗೋವಿಂದಾಚಾರ್ಯ, ರಾಮಕೃಷ್ಣ ಆಶ್ರಮದ ಅಧ್ಯಕ್ಷರಾಗಿದ್ದ ಶ್ರೀ ಹರ್ಷಾನಂದ ಸ್ವಾಮೀಜಿ ಹಾಗೂ ಖ್ಯಾತ ವೈಮಾನಿಕ ವಿಜ್ಞಾನಿ ಡಾ. ರೊದ್ದಂ ನರಸಿಂಹ ಅವರಿಗೆ ಸಂತಾಪ ಸೂಚನಾ ನಿರ್ಣಯ ಮಂಡಿಸಿ, ಅಂಗೀಕರಿಸಲಾಗಿದೆ ಎಂದು ಸದನಕ್ಕೆ ಹೇಳಿದರು.

ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಜ್ಯದ ಖ್ಯಾತ ವೈದ್ಯ ವಿಜ್ಞಾನಿ, ಹೃದ್ರೋಗ ತಜ್ಞ ಡಾ. ಬಿ.ಎಂ.ಹೆಗಡೆ ಅವರಿಗೆ ಪದ್ಮ ವಿಭೂಷಣ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರಿಗೆ ಪದ್ಮ ಭೂಷಣ ಮತ್ತು ರಾಜ್ಯದ ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಮಂಜಮ್ಮ ಜೋಗತಿ, ವೇದ ವಿಜ್ಞಾನಿ ಡಾ. ಆರ್.ಎಲ್.ಕಶ್ಯಪ್, ಕ್ರೀಡಾಪಟು ಕೆ.ವೈ.ವೆಂಕಟೇಶ್ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಬಗ್ಗೆ ಹಾಗೂ ಖ್ಯಾತ ಹಿನ್ನೆಲೆ ಗಾಯಕ ದಿವಂಗತ ಎಸ್.ಪಿ.ಬಾಲಸುಬ್ರಮಣ್ಯಂ ಅವರಿಗೆ ಮರಣೋತ್ತರ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಿ, ಗೌರವಿಸಲಾಗಿರುವ ಬಗ್ಗೆ ಸದನದ ಪರವಾಗಿ ಅಭಿನಂದನೆ ಸಲ್ಲಿಸಲಾಗಿದೆ ಎಂದರು.

ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಸ್ಪೀಕರ್

ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಬಗ್ಗೆ ಕಾರ್ಯದರ್ಶಿಯವರ ವರದಿಯನ್ನು ಮಂಡಿಸಲಾಗಿದೆ. ಭಾರತ ಸಂವಿಧಾನದ 151(2)ನೇ ಅನುಚ್ಛೇದದ ಮೇರೆಗೆ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರು ನೀಡಿರುವ ಮಾರ್ಚ್ 2019ಕ್ಕೆ ಕೊನೆಗೊಂಡ ವರ್ಷದ ಸಾರ್ವಜನಿಕ ವಲಯ ಉದ್ಯಮಗಳ ಮೇಲಿನ ವರದಿಯನ್ನು ಸದನದಲ್ಲಿ ಮಂಡಿಸಲಾಗಿದೆ. ಅದೇ ರೀತಿ ಕರ್ನಾಟಕ ವಿಧಾನಸಭೆಯ ಭರವಸೆ ಸಮಿತಿಯ 8ನೇ ವರದಿ ಮತ್ತು 11 ಅಧಿಸೂಚನೆಗಳು, 3 ಅಧ್ಯಾದೇಶಗಳು, 42 ವಾರ್ಷಿಕ ವರದಿಗಳು, 20 ಲೆಕ್ಕ ಪರಿಶೋಧನಾ ವರದಿಗಳು, 2 ಅನುಷ್ಠಾನ ವರದಿಗಳು, 2 ತಪಾಸಣಾ ವರದಿಗಳು ಹಾಗೂ 1 ವಿಶೇಷ ವರದಿಯನ್ನು ಮಂಡಿಸಲಾಗಿದೆ. 2 ಅರ್ಜಿಗಳನ್ನು ಒಪ್ಪಿಸಲಾಗಿದೆ ಎಂದು ತಿಳಿಸಿದರು.

ಕಳೆದ ಅಧಿವೇಶನದಲ್ಲಿ ಬಾಕಿ ಇದ್ದ 1 ವಿಧೇಯಕವು ಸೇರಿ ಒಟ್ಟು 14 ವಿಧೇಯಕಗಳನ್ನು ಅಂಗೀಕರಿಸಲಾಗಿದೆ. ನಿಯಮ 60ರಡಿಯಲ್ಲಿ ನೀಡಿದ್ದ 1 ನಿಲುವಳಿ ಸೂಚನೆಯನ್ನು ನಿಯಮ 69ಕ್ಕೆ ಪರಿವರ್ತಿಸಿ ಚರ್ಚೆಗೆ ಅವಕಾಶ ನೀಡಲಾಗಿದೆ.

ಒಟ್ಟು 1320 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಸದನದಲ್ಲಿ ಉತ್ತರಿಸಬೇಕಾಗಿದ್ದ 88 ಪ್ರಶ್ನೆಗಳಿಗೆ ಉತ್ತರಿಸಲಾಗಿದೆ. ನಿಯಮ 351ರಡಿಯಲ್ಲಿ 50 ಸೂಚನೆಗಳನ್ನು ಅಂಗೀಕರಿಸಿದ್ದು, 30 ಸೂಚನೆಗಳ ಉತ್ತರಗಳನ್ನು ಸ್ವೀಕರಿಸಲಾಗಿದೆ. ಗಮನ ಸೆಳೆಯುವ 168 ಸೂಚನೆಗಳ ಪೈಕಿ 69 ಸೂಚನೆಗಳನ್ನು ಚರ್ಚಿಸಲಾಗಿದೆ/ಉತ್ತರಗಳನ್ನು ಮಂಡಿಸಲಾಗಿದೆ.

ಶೂನ್ಯ ವೇಳೆಯಲ್ಲಿ ಒಟ್ಟು 13 ಸೂಚನೆಗಳನ್ನು ಚರ್ಚಿಸಲಾಗಿದೆ. ಈ ಅವಧಿಯಲ್ಲಿ ಸದನವು ಶೇ. 90ಕ್ಕಿಂತ ಹೆಚ್ಚಿನ ಕಾರ್ಯಕಲಾಪಗಳನ್ನು ಪೂರ್ಣಗೊಳಿಸಿರುತ್ತದೆ ಎಂಬುದನ್ನು ತಿಳಿಸಲು ಹರ್ಷವಾಗುತ್ತದೆ ಎಂದರು.

ಸದನ ನಡೆಸಲು ಸಹಕರಿಸಿದ ಸಭಾ ನಾಯಕ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ, ಸಚಿವ ಸಂಪುಟದ ಸದಸ್ಯರಿಗೆ, ಉಪ ಸಭಾಧ್ಯಕ್ಷರಿಗೆ, ಸರ್ಕಾರಿ ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕರಿಗೆ, ಎಲ್ಲಾ ಸದಸ್ಯರುಗಳಿಗೆ, ಮಾಧ್ಯಮ ಪ್ರತಿನಿಧಿಗಳಿಗೆ, ಇಲಾಖಾ ಮುಖ್ಯಸ್ಥರು, ಅಧಿಕಾರಿ-ಸಿಬ್ಬಂದಿಯವರಿಗೆ, ವಿಧಾನಸಭೆ ಸಿಬ್ಬಂದಿಯವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ರಾಷ್ಟ್ರಗೀತೆಯೊಂದಿಗೆ ಸದನವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದರು.

For All Latest Updates

ABOUT THE AUTHOR

...view details