ಕರ್ನಾಟಕ

karnataka

ETV Bharat / state

ನಮ್ಮದು ಅತ್ಯಂತ ಜೀವಂತ, ಶ್ರೇಷ್ಠ ಸಂವಿಧಾನ.. ಅಂಬೇಡ್ಕರ್‌ಗೆ ಎಷ್ಟು ಗೌರವ ಸಲ್ಲಿಸಿದರೂ ಸಾಲದು : ಸ್ಪೀಕರ್ ಕಾಗೇರಿ - ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

1949ರ ಜನವರಿ 26ರಂದು ಸಂವಿಧಾನವನ್ನು ಅಂಗೀಕರಿಸಿದರೆ, 1950 ಜನವರಿ 26ರಂದು ಅನುಷ್ಠಾನಕ್ಕೆ ತರಲಾಯಿತು. ಮುಂದುವರೆದ ದೇಶದಲ್ಲೂ ಸಂವಿಧಾನ ಬದಲಾಗಿದೆ. ಪಾಕಿಸ್ತಾನದಲ್ಲೂ ನಾಲ್ಕು ಬಾರಿ ಸಂವಿಧಾನವನ್ನು ಬದಲಾವಣೆ ಮಾಡಲಾಗಿದೆ. ನಮ್ಮದು ಅತ್ಯಂತ ಜೀವಂತ, ಶ್ರೇಷ್ಠ ಸಂವಿಧಾನ. ಹೀಗಾಗಿ, ಬಿ.ಆರ್.ಅಂಬೇಡ್ಕರ್ ಅವರಿಗೆ ಎಷ್ಟೇ ಗೌರವ ಸಲ್ಲಿಸಿದರೂ ಕಡಿಮೆ..

Speaker Vishweshwara Hegde Kageri spoke about importance of our constitution
ಸಂವಿಧಾನದ ಮಹತ್ವದ ಬಗ್ಗೆ ಕಾಗೇರಿ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತು

By

Published : Feb 4, 2022, 8:04 PM IST

ಬೆಂಗಳೂರು : 73 ವರ್ಷವಾದರೂ ನಮಗೆ ಸಂವಿಧಾನ ಬದಲಾಯಿಸಬೇಕೆಂದಿಲ್ಲ. ಕಾಲ ಕಾಲದ ತಿದ್ದುಪಡಿಗೆ ಅವಕಾಶವಿದೆ ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ವಿಧಾನಮಂಡಲದಿಂದ ವಿಧಾನಪರಿಷತ್ ಸದಸ್ಯರಿಗೆ ಇಂದು ಹಮ್ಮಿಕೊಂಡಿದ್ದ ತರಬೇತಿ ಶಿಬಿರದಲ್ಲಿ ಸಂವಿಧಾನದಡಿಯಲ್ಲಿ ಜನರ ನಿರೀಕ್ಷೆ ಹಾಗೂ ಶಾಸಕರ ಜವಾಬ್ದಾರಿ ಕುರಿತು ಉಪನ್ಯಾಸ ನೀಡಿದರು. ಹಲವು ದೇಶಗಳ ವಿವಿಧ ಸಂವಿಧಾನಗಳ ಅಧ್ಯಯನ ಮಾಡಿ ನಮ್ಮ ಸಂವಿಧಾನವನ್ನು ರೂಪಿಸಲಾಗಿದೆ.

1949ರ ಜನವರಿ 26ರಂದು ಸಂವಿಧಾನವನ್ನು ಅಂಗೀಕರಿಸಿದರೆ, 1950 ಜನವರಿ 26ರಂದು ಅನುಷ್ಠಾನಕ್ಕೆ ತರಲಾಯಿತು. ಮುಂದುವರೆದ ದೇಶದಲ್ಲೂ ಸಂವಿಧಾನ ಬದಲಾಗಿದೆ. ಪಾಕಿಸ್ತಾನದಲ್ಲೂ ನಾಲ್ಕು ಬಾರಿ ಸಂವಿಧಾನವನ್ನು ಬದಲಾವಣೆ ಮಾಡಲಾಗಿದೆ. ನಮ್ಮದು ಅತ್ಯಂತ ಜೀವಂತ, ಶ್ರೇಷ್ಠ ಸಂವಿಧಾನ. ಹೀಗಾಗಿ, ಬಿ.ಆರ್.ಅಂಬೇಡ್ಕರ್ ಅವರಿಗೆ ಎಷ್ಟೇ ಗೌರವ ಸಲ್ಲಿಸಿದರೂ ಕಡಿಮೆ ಎಂದರು.

ಸಂವಿಧಾನ ಸ್ವಾತಂತ್ರ್ಯ ನೀಡಿದೆ. ಹಾಗೆಂದ ಮಾತ್ರಕ್ಕೆ ಸ್ವಾತಂತ್ರ್ಯ ಸ್ವೇಚ್ಛಾಚಾರವಾಗಬಾರದು. ಇನ್ನೊಂದು ದೇಶದ ಪರ ಘೋಷಣೆ ಕೂಗಬಾರದು ಎಂದು ಕಾರ್ಯಕ್ರಮವೊಂದರಲ್ಲಿ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ ವಿಚಾರವನ್ನು ಉಲ್ಲೇಖಿಸಿದ್ದರು.

ಕಾರ್ಯಕ್ರಮವೊಂದರಲ್ಲಿ ಯುವತಿಯೊಬ್ಬಳು ಪಾಕಿಸ್ತಾನ ಜಿಂದಾಬಾದ್ ಅಂತಾ ಹೇಳಿದ್ದಳು. ಆಕೆಯನ್ನು ಪೊಲೀಸರು ಬಂಧಿಸಿ ಕರೆದೊಯ್ದರು. ಇದನ್ನು ಕೆಲವರು ಟೀಕಿಸಿದರು. ನಮಗೆ ವಾಕ್ ಸ್ವಾತಂತ್ರ್ಯ ಇಲ್ಲವೇ ಎಂದು ಪ್ರಶ್ನೆ ಮಾಡಿದ್ದರು. ನಮ್ಮ ಸಂವಿಧಾನದಲ್ಲಿ ಅದಕ್ಕೆಲ್ಲ ಅವಕಾಶ ಇಲ್ಲ. ವಾಕ್ ಸ್ವಾತಂತ್ರ್ಯ ಅಂತಾ ಈ ರೀತಿ ಮಾಡಬಾರದು. ಹಾಗೆ ಮಾಡಿದರೆ ಅರಾಜಕತೆ ಉಂಟಾಗಲಿದೆ ಎಂದರು.

ನಮ್ಮದು ಅಂತಹ ಶ್ರೇಷ್ಠವಾದ ಸಂವಿಧಾನ. ಚಿಕ್ಕಪುಟ್ಟ ತಿದ್ದುಪಡಿಗಳನ್ನು ಮಾಡಲಾಗಿದೆ. ಆಯಾ ಕಾಲಕ್ಕೆ ಅನುಗುಣವಾಗಿ ತಿದ್ದುಪಡಿ ಮಾಡಲಾಗಿದೆ. ಭಗವದ್ಗೀತೆ ಶ್ರೇಷ್ಠ ಗ್ರಂಥ. ಅದರಲ್ಲಿ ಸತ್ಯದ ಸಂಗತಿಗಳನ್ನು ತಿಳಿಸುವ ಅಂಶಗಳಿವೆ. ವೇದ,ಉಪನಿಷತ್ ಕೂಡ ಪವಿತ್ರವಾದ ಗ್ರಂಥ. ಅಷ್ಟೇ ಪವಿತ್ರವಾದುದು ನಮ್ಮ ಸಂವಿಧಾನ ಎಂದರು.

ನಾವು ಶಾಸಕಾಂಗದವರು. ಎಷ್ಟೇ ಕಾನೂನು ಬದಲಾವಣೆ ಮಾಡಬಹುದು. ಆದರೆ, ಪ್ರಸ್ತಾವನೆ ಬಹಳ ಮುಖ್ಯ. ನಾವು ಪಾಸ್ ಮಾಡಿದರೆ ಸಾಲದು. ಅದು ರಾಜ್ಯಪಾಲರ ಬಳಿ ಹೋಗಬೇಕು. ರಾಜ್ಯಪಾಲರು ಒಪ್ಪಿದ್ರೂ, ಅದು ಅಂತಿಮವಾಗಿ ರಾಷ್ಟ್ರಪತಿ ಬಳಿ ಹೋಗಬೇಕು. ನಮ್ಮ ನ್ಯಾಯಾಂಗ ವ್ಯವಸ್ಥೆ ಉತ್ತಮವಾಗಿದೆ. ನ್ಯಾಯಾಂಗ ತನ್ನದೇ ಕ್ರಮ ತೆಗೆದುಕೊಳ್ಳಲಿದೆ. ಚುನಾವಣೆ ಸುಧಾರಣೆ ಬಗ್ಗೆ ಜಂಟಿ ಅಧಿವೇಶನದಲ್ಲಿ ಎರಡು ದಿನ ಚರ್ಚೆ ಮಾಡುವುದು ಸೂಕ್ತ ಎಂದರು.

ಅಧಿವೇಶನದ 2ನೇ ವಾರ ಚುನಾವಣೆ ಸುಧಾರಣೆ ಬಗ್ಗೆ ಎರಡು ದಿನ ಚರ್ಚೆಯಾಗುವುದು ಸೂಕ್ತ. ಈ ಬಗ್ಗೆ ವಿಧಾನಪರಿಷತ್ತಿನಲ್ಲೂ ಚರ್ಚೆ ಮಾಡಿ ಎಂದು ಸಭಾಪತಿ ಬಸವರಾಜ ಹೊರಟ್ಟಿಯಲ್ಲಿ ಮನವಿ ಮಾಡಿದರು. ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಹಾಗೂ ಪತ್ರಿಕಾ ರಂಗ ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಬೇಕು.

ಜನಪ್ರತಿನಿಗಳಿಗೆ ಚರ್ಚೆ ಮಾಡುವ ಮನಸ್ಥಿತಿ ಇಲ್ಲ. ವಿವಿಧ ಮಜಲುಗಳ ವಿಶ್ಲೇಷಣಾ ಮನೋಭಾವ ಇರಬೇಕು. ಮೇಲ್ಮನೆಯಲ್ಲಿ ಹೆಚ್ಚು ಚರ್ಚೆಯಾಗಿ ಕೆಳಮನೆಗೆ ನೀತಿ, ನಿರೂಪಣೆ ಮಾಡಲು ಮಾರ್ಗದರ್ಶಕರಾಗಬೇಕು. ವಿಷ ವರ್ತುಲ ವ್ಯವಸ್ಥೆಯಲ್ಲಿ ರಾಜಕಾರಣಿಗಳಷ್ಟೇ ಅಲ್ಲ, ಎಲ್ಲ ರಂಗದವರು ಇದ್ದಾರೆ. ಪಕ್ಷದ ವ್ಯವಸ್ಥೆಗಳಲ್ಲೂ ಸುಧಾರಣೆಯಾಗಬೇಕು.

ಬಜೆಟ್ ಅಂಗೀಕಾರ ಮಾಡುವುದು, ಕಾಯ್ದೆ ಮಾಡುವುದು, ಆಡಳಿತ ವ್ಯವಸ್ಥೆಗೆ ನೀತಿ ನಿರೂಪಣೆ ತುಂಬುವುದು ಶಾಸಕರ ಜವಾಬ್ದಾರಿ. ವ್ಯವಸೆಗೆ ಹೆಚ್ಚು ಶಕ್ತಿ ತುಂಬಲು ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ವಿಧಾನಪರಿಷತ್ತಿನ ಇತ್ತೀಚಿನ ಘಟನೆಗಳು ಗೌರವ ತರುವಂತವುಗಳಾಗಿಲ್ಲ. ಪರಿಷತ್ ಇರಬೇಕೋ, ಬೇಡವೋ ಎಂಬ ಚರ್ಚೆ ಆರಂಭವಾಗಿದೆ. ಆಂತರಿಕ ಶಿಸ್ತು ಬೆಳೆಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ. ಕಾನೂನಿನಿಂದಲೇ ಬದಲಾವಣೆ ಸಾಧ್ಯವಿಲ್ಲ. ಮನಸ್ಥಿತಿಯೂ ಬದಲಾಗಬೇಕು. ಶಿಕ್ಷಣದಲ್ಲಿ ದೇಶ ಮೊದಲು ಎಂಬ ಸಂಸ್ಕಾರವನ್ನು ನೀಡಬೇಕು ಎಂದರು. ಈ ವೇಳೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಬೆಂಗಳೂರಲ್ಲಿ 'ವೈಫ್​ ಗಿವಿಂಗ್​' ದಂಧೆಗೆ ಟ್ವಿಟರ್ ಮೂಲಕ ಆಹ್ವಾನ; ಪತ್ನಿಯ LIVE ವಿಡಿಯೋ ಮಾಡಿ ಶೇರ್​ ಮಾಡ್ತಿದ್ದ ಪತಿ!

ABOUT THE AUTHOR

...view details