ಬೆಂಗಳೂರು: ಕಾಂಗ್ರೆಸ್ ಸದಸ್ಯರ ಅಹೋರಾತ್ರಿ ಧರಣಿಯಿಂದಾಗಿ ಜಂಟಿ ಅಧಿವೇಶನ ಪೂರ್ವ ನಿಗದಿತ ಸಮಯಕ್ಕಿಂತ ಮೊದಲೇ ಕೊನೆಗೊಂಡಿತು.
ಕಾಂಗ್ರೆಸ್ ಶಾಸಕರು ವಿಧಾನಸಭೆಯಲ್ಲಿ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಮಾಡುವಂತೆ ಆಗ್ರಹಿಸಿ ಫೆ.17 ರಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿ ಇಂದು ಸಹ ಮುಂದುವರೆದಿತ್ತು. ಇಂದು ಸದನ ಅರಂಭಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಘೋಷಣೆ ಕೂಗುತ್ತಾ ಧರಣಿ ಮುಂದುವರೆಸಿದರು. ಆಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಧರಣಿ ಕೈಬಿಟ್ಟು ನಿಮ್ಮ ನಿಮ್ಮ ಸ್ಥಾನಗಳಿಗೆ ತೆರಳಿ ಸದನದ ಕಾರ್ಯ ಕಲಾಪ ನಡೆಸಲು ಅವಕಾಶ ನೀಡುವಂತೆ ಮನವಿ ಮಾಡಿದರು. ಸ್ಪೀಕರ್ ಮನವಿಗೆ ಮಣಿಯದೆ ಘೋಷಣೆ ಕೂಗುತ್ತಾ ಕಾಂಗ್ರೆಸ್ ಸದಸ್ಯರು ಗದ್ದಲ ಎಬ್ಬಿಸಿದರು. ಸ್ಪೀಕರ್ ಕಾಗೇರಿ ಪದೇ ಪದೇ ಮನವಿ ಮಾಡಿ ಸುಗಮ ಕಲಾಪಕ್ಕೆ ಅವಕಾಶ ನೀಡುವಂತೆ ಹೇಳಿದರೂ ಅವರ ಮನವಿ ಫಲ ನೀಡಲಿಲ್ಲ.
ಧರಣಿ ಕೈ ಬಿಡುವಂತೆ ಸದನದ ಹೊರಗೂ ಸಹ ಸ್ಪೀಕರ್ ಕಾಂಗ್ರೆಸಿಗರಿಗೆ ಮನವಿ ಮಾಡಿದ್ದರು. ಅದು ಸಹ ಫಲಿಸಲಿಲ್ಲ. ಇದರ ನಡುವೆ ಜೆಡಿಎಸ್ ಶಾಸಕರು ಧರಣಿ ನಿರತರನ್ನು ಅಮಾನತು ಮಾಡಿ ಹೊರಗೆ ಹಾಕಿ ಎಂದು ಆಗ್ರಹಿಸಿದರು. ಆದರೆ, ಈ ಎಲ್ಲದರ ನಡುವೆ ಇಂದು ಸಹ ಧರಣಿ ನಡೆಯಿತು.
ಈ ಧರಣಿ ನಡುವೆಯೇ ಸ್ಪೀಕರ್, ಪ್ರಶ್ನೋತ್ತರ ಕಲಾಪ, ಶಾಸನ ರಚನಾ ಕಲಾಪಕ್ಕೆ ಅನುವು ಮಾಡಿಕೊಟ್ಟರು. ನಂತರ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೂ ಪ್ರತಿಭಟನಾಕಾರರು ಕಿವಿಗೊಡಲಿಲ್ಲ. ಕಾಂಗ್ರೆಸ್ ಶಾಸಕರು ಗೊಂದಲದ ನಡುವೆ ಶಾಸಕರು ಪ್ರಶ್ನೆಗಳನ್ನು ಕೇಳಿ ಸಂಬಂಧಿಸಿದ ಸಚಿವರಿಂದ ಉತ್ತರವನ್ನು ಪಡೆದರು. ಆದರೆ ಕಾಂಗ್ರೆಸ್ ಶಾಸಕರು ತಮ್ಮ ಪಟ್ಟನ್ನು ಸಡಿಲಿಸದೆ ನಿರಂತರವಾಗಿ ಘೋಷಣೆ ಕೂಗುತ್ತಿದ್ದರು. ಇದರಿಂದಾಗಿ ಸದನದಲ್ಲಿ ಗದ್ದಲ ಹೆಚ್ಚಾಗಿತ್ತು. ನಂತರ ರಾಜ್ಯಪಾಲರ ಭಾಷಣದ ಚರ್ಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರ ನೀಡಿದರು.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಾರ್ಯ-ಕಲಾಪವನ್ನು ಮಾರ್ಚ್ 4ರ ಬಜೆಟ್ ಅವೇಶನದವರೆಗೂ ಮುಂದೂಡಿದರು. ರಾಷ್ಟ್ರಗೀತೆಯೊಂದಿಗೆ ಪ್ರಸಕ್ತ ಅಧಿವೇಶನವನ್ನು ಮುಕ್ತಾಯಗೊಳಿಸಲಾಯಿತು.
ಇದನ್ನೂ ಓದಿ:ಹಿಜಾಬ್ ಕೇಸ್ ಈ ವಾರವೇ ಇತ್ಯರ್ಥಪಡಿಸೋಣ ಎಂದ ಹೈಕೋರ್ಟ್: ಸರ್ಕಾರ, ಕಾಲೇಜು ಆಡಳಿತ ಮಂಡಳಿ ವಾದಿಸಿದ್ದೇನು..?