ಬೆಂಗಳೂರು: ಗರ್ಭಿಣಿ ಹಾಗೂ ಬಾಣಂತಿಯರಿಗೆ ರೂಪಿಸಿರುವ ಅವೈಜ್ಞಾನಿಕ ನಿಯಮಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ ವ್ಯಕ್ತಪಡಿಸಿದರು. ಅಂಗನವಾಡಿಗೆ ಹೋಗಿ ಮಧ್ಯಾಹ್ನದ ಪೌಷ್ಠಿಕ ಬಿಸಿಯೂಟ ಮಾಡಬೇಕೆಂಬ ಈ ನಿಯಮವನ್ನು ಸರಿಪಡಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಿಗೆ ಸೂಚಿಸಿದರು. ವಿಧಾನಸಭೆ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಪ್ರಶ್ನೆಗೆ ಸಚಿವ ಹಾಲಪ್ಪ ಆಚಾರ್ ಉತ್ತರಿಸುತ್ತಿದ್ದಾಗ ಸ್ಪೀಕರ್ ಮಧ್ಯಪ್ರವೇಶಿಸಿದರು.
2017ರಲ್ಲಿ ಈ ನಿಯಮ ಜಾರಿ ಮಾಡಲಾಗಿದೆ. ಇದು ಅವೈಜ್ಞಾನಿಕವಾಗಿದ್ದು ಸರಿಪಡಿಸಿ. ಕೇಂದ್ರದ ಮಾರ್ಗಸೂಚಿ ಏನಾದರೂ ಇದ್ದರೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಸರಿಪಡಿಸಿ ಎಂದು ಬೇಸರದಿಂದಲೇ ನುಡಿದರು.
ಅಧಿಕಾರಿಗಳು ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅವರನ್ನು ಬದಲಾಯಿಸಿ. ಇಲ್ಲದಿದ್ದರೆ ರಾಜ್ಯದ ಜನತೆ ನಿಂದಿಸುತ್ತಾರೆ. ಗರ್ಭಿಣಿ, ಬಾಣಂತಿಯರು ಅಂಗನವಾಡಿಗೆ ಹೋಗಿ ಊಟ ಮಾಡಬೇಕು ಎಂದರೆ ಹೇಗೆ?. ಬಿಸಿಯೂಟವನ್ನು ಮನೆಗೆ ಕೊಟ್ಟಿದ್ದೇ ಆದರೆ ಗಂಡ, ಅತ್ತೆ, ಮಾವ ಊಟ ಮಾಡುತ್ತಾರೆ ಎಂಬುದು ಅಧಿಕಾರಿಗಳ ಮನಸ್ಸಿನಲ್ಲಿರಬೇಕು. ಆಯಾ ಕಾಲಕ್ಕೆ ತಕ್ಕಂತೆ ಅಧಿಕಾರಿಗಳು ವರದಿ ಕೊಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕಿಯರಿಂದಲೂ ಒತ್ತಾಯ:ಈ ವೇಳೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾತನಾಡಿ, ನಿಮ್ಮ ನಿಲುವಿಗೆ ಅಭಿನಂದಿಸುತ್ತೇನೆ. ಮಾನವೀಯತೆಯಿಂದ ಅನುಕೂಲ ಮಾಡಿಕೊಡಬೇಕು. ಅಧಿಕಾರಿಗಳು ಕಸಾಯಿಖಾನೆ ರೀತಿ ವರ್ತಿಸುತ್ತಾರೆ. ಇವರಿಗಿಂತ ಕಸಾಯಿಖಾನೆಯವರೇ ಉತ್ತಮ ಎಂದು ಕಿಡಿಕಾರಿದರು. ಇದೇ ಸಂದರ್ಭದಲ್ಲಿ ಶಾಸಕಿಯರಾದ ಅಂಜಲಿ ಲಿಂಬಾಳ್ಕರ್, ರೂಪಕಲಾ, ಗರ್ಭಿಣಿ ಮತ್ತು ಬಾಣಂತಿಯರಿಗೆ ನೀಡುವ ಪೌಷ್ಟಿಕ ಆಹಾರದ ನ್ಯೂನತೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿದರು.