ಬೆಂಗಳೂರು:''ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರ ಇಡೀ ವಿಶ್ವದಲ್ಲಿ ಇನ್ನೊಂದಿಲ್ಲ. ಆದರೆ, ಬರಬರುತ್ತಾ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗು ಪತ್ರಿಕಾ ರಂಗದ ಜೊತೆಗೆ ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಆದರ್ಶ, ಮೌಲ್ಯಗಳು ಕುಸಿಯುತ್ತಿವೆ'' ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಶ್ರಮಿಸಿ:''ಸಭಾಧ್ಯಕ್ಷ ಸ್ಥಾನವನ್ನು ಸಮರ್ಥವಾಗಿ ನಡೆಸಲು ಸಹಕಾರ ನೀಡಿದ ಮುಖ್ಯಮಂತ್ರಿಗಳು, ಸಚಿವರು ಹಾಗೂ ಪ್ರತಿಪಕ್ಷ ನಾಯಕರು ಸೇರಿದಂತೆ ಎಲ್ಲ ಸದಸ್ಯರಿಗೂ ಕಾಗೇರಿ ಅಭಿನಂದನೆ ಸಲ್ಲಿಸಿದರು. ದೇಶ ಮೊದಲು ಎನ್ನುವ ಜಾಗೃತಿ ಎಲ್ಲರಲ್ಲೂ ಮೂಡಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಎಲ್ಲರೂ ಒಟ್ಟಾಗಿ ಶ್ರಮಿಸಬೇಕು'' ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
''ವಿಧಾನಸಭೆಯ ಕಾರ್ಯ ಕಲಾಪಗಳ ಜೊತೆಗೆ ಸಭಾಧ್ಯಕ್ಷರ ಸ್ಥಾನದಲ್ಲಿ ಕೂತು ನಾನು ದೇಶದ ವಿವಿಧ ರಾಜ್ಯ ಹಾಗೂ ಕಾಮನ್‌ವೆಲ್ತ್ ಸಭೆ ಸೇರಿದಂತೆ ಬೇರೆ ಬೇರೆ ದೇಶಗಳನ್ನು ಸುತ್ತಿ ಅನೇಕ ತಜ್ಞರು, ರಾಜಕೀಯ ನಾಯಕರೊಂದಿಗೆ ಹಲವು ಸಭೆಗಳಲ್ಲಿ ಭಾಗವಹಿಸಿದ್ದೇನೆ. ಆದರೆ, ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರ ಇಡೀ ವಿಶ್ವದಲ್ಲಿ ಇನ್ನೊಂದಿಲ್ಲ."
"ಆದರೆ, ಇಂದು ದೇಶದ ಪ್ರಮುಖ ಅಂಗಗಳ ಜೊತೆಗೆ ಯಾವ ಕ್ಷೇತ್ರಗಳೂ ಹೊರತಾಗಿಲ್ಲದಂತೆ ಆದರ್ಶ, ಮೌಲ್ಯಗಳು ಕುಸಿದಿವೆ. ಕನಿಷ್ಠ ಪಕ್ಷ ಶಾಸಕರಿಗೆ ಐದು ವರ್ಷಕ್ಕೊಮ್ಮೆ ಜನರ ಮೌಲ್ಯಮಾಪನವಿದೆ. ಬೇರೆಯವರಿಗೆ ಅದೂ ಇಲ್ಲ'' ಎಂದು ಬೇಸರ ವ್ಯಕ್ತಪಡಿಸಿದರು.
ರಾಜಕೀಯ ಪಕ್ಷಗಳ ಮೇಲಿದೆ ಹೊಣೆಗಾರಿಕೆ:''ಹರಿದು ಹಂಚಿ ಹೋಗಿದ್ದ ದೇಶವನ್ನು ಒಟ್ಟುಗೂಡಿಸಿ ಸುದೀರ್ಘವಾಗಿ ಐಕ್ಯತೆ ಕಾಯ್ದುಕೊಂಡು ಬರುವುದು ಸುಲಭದ ಕೆಲಸವಲ್ಲ. ಭಾರತಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಕೊಟ್ಟ ಶ್ರೇಷ್ಠ ಸಂವಿಧಾನ, ಮಹಾತ್ಮ ಗಾಂಧಿ ಆದಿಯಾಗಿ ಅನೇಕ ಮಹಾನ್ ನಾಯಕರ ತ್ಯಾಗ ಬಲಿದಾನ, ನಂತರ ರಾಷ್ಟ್ರವನ್ನು ಆಳಿದ ನಾಯಕರು ಹಾಕಿದ ಭದ್ರ ಬುನಾದಿಗಳಿಂದ ಇದು ಸಾಧ್ಯವಾಗಿದೆ. ಅವರ ಆದರ್ಶ, ಮೌಲ್ಯಗಳನ್ನು ಪಾಲಿಸಿಕೊಂಡು ಪ್ರಜಾಪ್ರಭುತ್ವವನ್ನು ಇನ್ನಷ್ಟು ಶಕ್ತಿಯುತಗೊಳಿಸುವ ಕೆಲಸ ನಮ್ಮೆಲ್ಲರ ಮೇಲಿದೆ."