ಕರ್ನಾಟಕ

karnataka

ETV Bharat / state

ಭಾವಿ ಪತ್ರಕರ್ತರು ಪರಿಷ್ಕರಣೆಗೊಳಗಾಗಲಿ: ವಿಧಾನಸಭಾಧ್ಯಕ್ಷ ಯು ಟಿ ಖಾದರ್ - ಮಾಮ್ ಇನ್‌ಸ್ಪೈರ್ ಪ್ರಶಸ್ತಿ ಪ್ರದಾನ ಸಮಾರಂಭ

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮೀಡಿಯಾ ಅಸೋಸಿಯೇಷನ್ ಆಫ್ ಮಂಗಳ ಗಂಗೋತ್ರಿ ವತಿಯಿಂದ ಮಾಮ್ ಇನ್‌ಸ್ಪೈರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

speaker-ut-khader-attenteded-the-maam-inspire-award-program-in-bengaluru
ಭಾವೀ ಪತ್ರಕರ್ತರು ಪರಿಷ್ಕರಣೆಗೊಳಗಾಗಲಿ: ವಿಧಾನಸಭಾಧ್ಯಕ್ಷ ಯು.ಟಿ. ಖಾದರ್

By ETV Bharat Karnataka Team

Published : Sep 10, 2023, 10:35 PM IST

ಬೆಂಗಳೂರು: ಸಮಾಜದಲ್ಲಿ ಮಾಧ್ಯಮವು ಅತ್ಯಂತ ಆದರಣೀಯ ಕ್ಷೇತ್ರ. ಈ ಕ್ಷೇತ್ರದಲ್ಲಿ ಬರುವ ಹೊಸಬರನ್ನು ಪರಿಷ್ಕರಣೆಗೊಳಪಡಿಸುವ ನಿಟ್ಟಿನಲ್ಲಿ 'ಮಾಮ್' ಸಂಸ್ಥೆ ತೊಡಗಿಕೊಳ್ಳಲಿ ಎಂದು ವಿಧಾನಸಭೆಯ ಸಭಾಧ್ಯಕ್ಷ ಯು ಟಿ ಖಾದರ್ ಹೇಳಿದರು.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಮೀಡಿಯಾ ಅಸೋಸಿಯೇಷನ್ ಆಫ್ ಮಂಗಳ ಗಂಗೋತ್ರಿ (ಮಾಮ್- ಮಂಗಳೂರು ವಿವಿ ಪತ್ರಿಕೋದ್ಯಮ ವಿಭಾಗದ ಹಳೆ ವಿದ್ಯಾರ್ಥಿಗಳ ಸಂಘಟನೆ) ವತಿಯಿಂದ, ಕರ್ನಾಟಕ ಮಹಿಳಾ ಯಕ್ಷಗಾನ (ರಿ) ಬೆಂಗಳೂರು ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಮಾಮ್ ಇನ್‌ಸ್ಪೈರ್ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸಮಾಜದ ಬೆಳವಣಿಗೆಯಲ್ಲಿ ಪತ್ರಿಕಾ ಕ್ಷೇತ್ರ ಮತ್ತು ಮಾಧ್ಯಮ ತನ್ನದೇ ಆದ ವಿಶಿಷ್ಟ ಸೇವೆಯನ್ನು ಸಲ್ಲಿಸುತ್ತಿದೆ. 24 ವರ್ಷಗಳ ಹಿಂದೆ ತಮ್ಮ ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಆಸರೆಯಾಗಬೇಕೆಂಬ ದೂರದೃಷ್ಟಿ ಇಟ್ಟುಕೊಂಡು ಬೆಳೆದು ಬಂದ ಮಾದರಿ ಸಂಘಟನೆ 'ಮಾಮ್'. ಇಲ್ಲಿ ವಿದ್ಯಾರ್ಥಿಗಳಿಗೆ ನೀಡಿದ ಪ್ರಶಸ್ತಿ ಅವರ ಸಾಧನೆಗೆ ಒಂದು ಗರಿ. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ "ಮಾಮ್" ಕಾರ್ಯಕ್ರಮಗಳಿಗೆ 30 ಸಾವಿರ ರೂಪಾಯಿ ನೆರವು ನೀಡುವುದಾಗಿ ಘೋಷಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕನ್ನಡಪ್ರಭ -ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿ, ಇಂದಿನ ಮಾಧ್ಯಮ ಕ್ಷೇತ್ರದಲ್ಲಿ ಸ್ಫೂರ್ತಿದಾಯಕ ಅಂಶಗಳು ಕಡಿಮೆಯಾಗುತ್ತಿವೆ. ಒಂದು ಕಡೆ ವಿಪರೀತ ವ್ಯಾಪಾರೀಕರಣ, ಮತ್ತೊಂದು ಕಡೆಗೆ ಸೈದ್ಧಾಂತಿಕ ಬದ್ಧತೆ ಉಳಿಸಿಕೊಳ್ಳುವ ಸವಾಲು ಇದೆ. ಕೆಲವು ಸಾಮಾಜಿಕ ಜಾಲತಾಣಗಳಿಂದ ಬರುವ ಸುಳ್ಳು ಸುದ್ದಿ ಮತ್ತು ಬೇಡದ ವಿಚಾರಗಳ ವೈಭವೀಕರಣದಿಂದ ಮಾಧ್ಯಮ ಕ್ಷೇತ್ರ ಇಕ್ಕಟ್ಟಿನಲ್ಲಿದೆ. ಮಾಧ್ಯಮ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಹೊಸ ಪರಂಪರೆಯನ್ನು ಹುಟ್ಟುಹಾಕುತ್ತಿದೆ. ಅದರಿಂದ ಪತ್ರಕರ್ತ ಬರೀ ಕೆಲಸ ಕಳೆದುಕೊಳ್ಳುವುದು ಮಾತ್ರವಲ್ಲ, ಪತ್ರಕರ್ತನ ಕ್ರಿಯಾಶೀಲತೆ, ಬರೆಯುವ ಶಕ್ತಿ, ಬುದ್ಧಿಮತ್ತೆಯನ್ನು, ಸ್ಮರಣಾ ಸಾಮರ್ಥ್ಯವನ್ನು ತಂತ್ರಜ್ಞಾನ ಕಿತ್ತುಕೊಳ್ಳುತ್ತಿದೆ. ಆದರೆ, ಅದು ಆಗದೇ ಇರುವ ರೀತಿಯಲ್ಲಿ ನಮ್ಮ ಕಾರ್ಯಪಡೆ ಮತ್ತು ಶಿಕ್ಷಣವನ್ನು ರೂಪಿಸಬೇಕಾಗಿದೆ ಎಂದರು.

ಮಾಮ್‌ನ ಗೌರವಾಧ್ಯಕ್ಷ ವೇಣು ಶರ್ಮಾ ಮಾತನಾಡಿ, ಕೆಲವು ಸಮಾನ ಮನಸ್ಕರೆಲ್ಲ ಸೇರಿಕೊಂಡು ಮಾಮ್ ಸಂಸ್ಥೆಯನ್ನು ಕಟ್ಟಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಸಹಾಯವನ್ನು ಮಾಡುತ್ತಿದೆ. 24 ವರ್ಷಗಳನ್ನು ಮುಗಿಸಿ ಮುಂದಿನ ವರ್ಷ ಅತೀ ದೊಡ್ಡ ಕಾರ್ಯಕ್ರಮವನ್ನು ಮಾಡುವ ಸಂಕಲ್ಪ ಹೊಂದಿದ್ದೇವೆ ಎಂದರು.

ಕೆ.ಆರ್.ಪುರ ಕಾಲೇಜಿನ ಪ್ರಾಂಶುಪಾಲರಾದ ಪ್ರತಿಭಾ ಪಾರ್ಶ್ವನಾಥ್ ಮಾತನಾಡಿ, ಮಾಮ್ ಸಂಸ್ಥೆ ಬರೀ ಮಂಗಳೂರು ವಿಶ್ವವಿದ್ಯಾನಿಲಯಕ್ಕಷ್ಟೇ ಸೀಮಿತವಾಗಿರದೇ ಕರ್ನಾಟಕದ ಎಲ್ಲ ಕಾಲೇಜು, ವಿದ್ಯಾಸಂಸ್ಥೆಗಳನ್ನು ಒಳಗೊಂಡು ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು. ಯೂನಿವರ್ಸಲ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಆರ್. ಉಪೇಂದ್ರ ಶೆಟ್ಟಿ ವಿವಿ ಪತ್ರಿಕೋದ್ಯಮ ಅಧ್ಯಯನದ ದಿನಗಳನ್ನು ನೆನಪಿಸಿಕೊಂಡರು. ಕಾರ್ಯಕ್ರಮದಲ್ಲಿ ಕರ್ನಾಟಕ ಕಲಾದರ್ಶಿನಿ ನಿರ್ದೇಶಕ ಶ್ರೀನಿವಾಸ್ ಸಾಸ್ತಾನ, ಮಾಮ್ ಅಧ್ಯಕ್ಷ ನವೀನ್ ಅಮ್ಮೆಂಬಳ, ನವಿತಾ ಜೈನ್, ಶರತ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ :'ಬಿಲ್ಡರ್​ಗಳಿಂದ ₹2,000 ಕೋಟಿ ರೂ. ಸುಲಿಗೆಗೆ ಟಾರ್ಗೆಟ್​': ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹೆಚ್​ಡಿಕೆ ಗಂಭೀರ ಆರೋಪ

ABOUT THE AUTHOR

...view details