ಕರ್ನಾಟಕ

karnataka

ETV Bharat / state

ಕೇರಳದ ಬಡ ಮಕ್ಕಳಿಗೆ ವಿಧಾನಸೌಧ ವೀಕ್ಷಣೆಗೆ ಅವಕಾಶ ಕಲ್ಪಿಸಿದ ಸ್ಪೀಕರ್ ಯು.ಟಿ.ಖಾದರ್ - ಕೇರಳದ ಕುನ್ನಮಂಗಲಂ ಗ್ರಾಮ ಪಂಚಾಯಿತಿ

ಕರ್ನಾಟಕದ ಶಕ್ತಿಸೌಧ, ಭವ್ಯ ವಿಧಾನಸೌಧ ಕಟ್ಟಡ ವೀಕ್ಷಣೆಗಾಗಿ ಆಗಮಿಸಿದ ಕೇರಳದ ಕುನ್ನಮಂಗಲಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಮಕ್ಕಳು ಹಾಗೂ ಸ್ಥಳೀಯರನ್ನು ಸ್ಪೀಕರ್ ಯು.ಟಿ.ಖಾದರ್ ಆತ್ಮೀಯವಾಗಿ ಬರಮಾಡಿಕೊಂಡರು.

UT Khader allowes to visit vidhan soudha to kerala students
ಮಕ್ಕಳು ಹಾಗೂ ಸ್ಥಳೀಯರೊಂದಿಗೆ ಸ್ಪೀಕರ್ ಯು.ಟಿ ಖಾದರ್

By ETV Bharat Karnataka Team

Published : Sep 26, 2023, 7:03 AM IST

ಬೆಂಗಳೂರು: ವಿಮಾನಯಾನದ ಅನುಭವವನ್ನು ಕಂಡಿರದ ಕೇರಳ ರಾಜ್ಯದ ಕುನ್ನಮಂಗಲಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡ ಮಕ್ಕಳು ಹಾಗೂ ಸ್ಥಳೀಯರಿಗೆ ವಿಧಾನಸೌಧ ವೀಕ್ಷಣೆಗೆ ಸ್ಪೀಕರ್ ಯು.ಟಿ.ಖಾದರ್ ಅವರು ಸೋಮವಾರ ಅನುವು ಮಾಡಿಕೊಟ್ಟರು.

ಈ ವೇಳೆ ಮಾತನಾಡಿದ ಅವರು, "ಕೇರಳ ರಾಜ್ಯದ ಕುನ್ನಮಂಗಲಂ ಗ್ರಾಮ ಪಂಚಾಯಿತಿಯ ಸದಸ್ಯರು, ಬಡ ಮಕ್ಕಳು ಹಾಗೂ ಸ್ಥಳೀಯರಿಗೆ ವಿಧಾನಸೌಧದ ವೀಕ್ಷಣೆಗಾಗಿ ಅನುಮತಿ ಕೋರಿ ಪತ್ರ ಬರೆದಿದ್ದರು. ಕರ್ನಾಟಕ ರಾಜ್ಯದ ಪ್ರಮುಖ ಪ್ರವಾಸ ತಾಣವಾದ ವಿಧಾನಸೌಧದ ವೀಕ್ಷಣೆಯನ್ನು ಪ್ರತಿಯೊಬ್ಬರೂ ಮಾಡಲಿ ಎಂದು ಮುಕ್ತವಾಗಿ ಒಪ್ಪಿ, ಅನುಮತಿ ನೀಡಲಾಯಿತು" ಎಂದರು.

"ವಿಧಾನಸೌಧದ ಇತಿಹಾಸವನ್ನು ಎಲ್ಲರೂ ಅರಿಯಬೇಕು. ಇತರೆ ರಾಜ್ಯಗಳು ಸೇರಿದಂತೆ ವಿದೇಶದಲ್ಲೂ ಈ ಭವ್ಯ ಸೌಧದ ಕುರಿತು ಮಾಹಿತಿ ಪಸರಿಸಬೇಕು. ವಿಧಾನಸೌಧದ ವೀಕ್ಷಣೆಗಾಗಿ ಆಗಮಿಸಿದ ಕೇರಳ ರಾಜ್ಯದ ಈ ಬಡಮಕ್ಕಳು ಹಾಗೂ ಸ್ಥಳೀಯರಿಗೆ ಅನುಕೂಲ ಮಾಡಿಕೊಡಲು ಗೈಡ್ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು. ಮುಂದಿನ ದಿನಗಳಲ್ಲಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು" ಎಂದು ತಿಳಿಸಿದರು.

ಕುನ್ನಮಂಗಲಂ ಗ್ರಾಮ ಪಂಚಾಯಿತಿ ಸದಸ್ಯರುಗಳು ದೇಣಿಗೆಯ ಮೂಲಕ ಸಂಗ್ರಹಿಸಿದ ಹಣ ಸೇರಿದಂತೆ ಇತರೆ ವಿಶೇಷ ಅನುದಾನದಲ್ಲಿ ವಿಮಾನ ಪ್ರಯಾಣವನ್ನು ಮಾಡದಿರುವ 150ಕ್ಕೂ ಹೆಚ್ಚು ಬಡ ಮಕ್ಕಳು ಹಾಗೂ ಸ್ಥಳೀಯರಿಗೆ ವಿಮಾನಯಾನದ ಉಚಿತ ಪ್ರಯಾಣವನ್ನು ಮಾಡಿಸಲಾಗಿದೆ.

ಇದನ್ನೂ ಓದಿ:Vidhana Soudha: ವಿಧಾನಸೌಧ ಜಗಮಗ: ವೀಕ್ಷಿಸಲು ಬರುವ ಸಾರ್ವಜನಿಕರಿಗೆ ಸಂಚಾರಿ ಪೊಲೀಸರ ಸೂಚನೆ

ವಿಧಾನಸೌಧದ ಬಗ್ಗೆ ಒಂದಿಷ್ಟು..:ರಾಜ್ಯದ ಆಡಳಿತದ ಕೇಂದ್ರಬಿಂದು ವಿಧಾನ ಸೌಧ. ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಆಡಳಿತಾವಧಿಯಲ್ಲಿ ಈ ಭವ್ಯ ಕಟ್ಟಡ ನಿರ್ಮಾಣವಾಯಿತು. 1951 ಜುಲೈ 13ರಂದು ಅಂದಿನ ಪ್ರಧಾನಿಯಾಗಿದ್ದ ಜವಾಹರಲಾಲ್‌ ನೆಹರು ಶಂಕುಸ್ಥಾಪನೆ ಮಾಡಿದ್ದರು. 1952ರಲ್ಲಿ ಪ್ರಾರಂಭವಾದ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲು ನಾಲ್ಕು ವರ್ಷ ಬೇಕಾಯಿತು.

5 ಸಾವಿರಕ್ಕೂ ಹೆಚ್ಚು ಕೆಲಸಗಾರರು ನಿರ್ಮಾಣ ಕೆಲಸದಲ್ಲಿ ಪಾಲ್ಗೊಂಡಿದ್ದರು. ರಾಜ್ಯ ಸಾರ್ವಜನಿಕ ಕಾರ್ಯಗಳ ಇಲಾಖೆಯಲ್ಲಿ ಮುಖ್ಯ ಇಂಜಿನಿಯರ್‌ ಹಾಗೂ ವಾಸ್ತುಶಿಲ್ಪಿಯಾಗಿದ್ದ ಮಾಣಿಕ್ಯಂ ಕಟ್ಟಡ ನಿರ್ಮಾಣದ ಉಸ್ತುವಾರಿ ವಹಿಸಿದ್ದರು. ಇದರ ವಾಸ್ತುಶಿಲ್ಪವು ಮೈಸೂರು ದ್ರಾವಿಡ ಶೈಲಿ ಎಂದು ಕೆಲವರು ಕರೆಯುತ್ತಾರೆ. ಆದರೆ ಕಟ್ಟಡದ ವಾಸ್ತುಶೈಲಿಯಲ್ಲಿ ಇಂಡೋ ಸಾರ್ಸೆನಿಕ್ ಮತ್ತು ದ್ರಾವಿಡ ಶೈಲಿಯ ಹಲವಾರು ಅಂಶಗಳು ಆಡಕವಾಗಿದೆ. ಕರ್ನಾಟಕದ ಗೆಜೆಟ್‌ ಪ್ರಕಾರ ಅಂದು ವಿಧಾನಸೌಧ ಕಟ್ಟಲು ತಗುಲಿದ ವೆಚ್ಚ 1.75ಕೋಟಿ ರೂ.

ಕಟ್ಟಡದ ರಚನೆ:ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಭಾಗಗಳಲ್ಲಿ ಪ್ರವೇಶದ್ವಾರಗಳಿದ್ದು ಎತ್ತರವಾದ ಕೆತ್ತನೆಯುಳ್ಳ ಕಂಬಗಳು ಕಟ್ಟಡಕ್ಕೆ ವಿಶೇಷ ಮೆರುಗು ತಂದುಕೊಟ್ಟಿವೆ. ಕಟ್ಟಡದ ಮೇಲ್ಭಾಗದಲ್ಲಿ ಕಣ್ಸೆಳೆವ ಗೋಪುರಗಳೂ ಇವೆ. ಮುಖ್ಯ ಗೋಪುರದ ಮೇಲ್ಭಾಗದಲ್ಲಿ ಚಿತ್ತಾರಗಳ ಮಧ್ಯೆ ಅಶೋಕ ಸ್ತಂಭವನ್ನು ಸ್ಥಾಪಿಸಲಾಗಿದೆ. ಗೋಪುರಗಳು ಇಂಡೋ ಇಸ್ಲಾಮಿಕ್‌ ಅಂಶಗಳನ್ನು ಒಳಗೊಂಡಿದ್ದು ಕಟ್ಟಡದ ಉಳಿದ ಭಾಗಗಳಿಗೆ ಸಂಬಂಧ ಕಲ್ಪಿಸುವಂತೆ ನಾಲ್ಕೂ ಮೂಲೆಯಲ್ಲಿ ಚಿಕ್ಕದಾದ ಗೋಪುರನ್ನು ನಿರ್ಮಿಸಲಾಗಿದೆ. ಆಯತಾಕಾರದಲ್ಲಿ ನಿರ್ಮಿಸಲಾದ ಕಟ್ಟಡದ ಒಳಭಾಗದಲ್ಲಿಯೂ ಸಾಕಷ್ಟು ಗಾಳಿ, ಬೆಳಕು ಇರುವಂತೆ ಗಮನ ಹರಿಸಲಾಗಿದೆ. ವಿಸ್ತಾರವಾದ ಹಜಾರ ಕೂಡ ಇಲ್ಲಿಯ ಆಕರ್ಷಣೆ.

ABOUT THE AUTHOR

...view details