ಬೆಂಗಳೂರು : ವಿಧಾನಸಭಾ ಕಲಾಪದಲ್ಲಿ 9 ಸಚಿವರ ಪೈಕಿ ಮೂವರು ಸಚಿವರು ಮಾತ್ರ ಇಂದು ಹಾಜರಿದ್ದರು. ಸಚಿವರ ಗೈರು ಹಾಜರಾತಿ ಬಗ್ಗೆ ಸ್ಪೀಕರ್ ಕಾಗೇರಿ ಪ್ರಸ್ತಾಪ ಮಾಡಿದರು. ಸದನದಲ್ಲಿ ಕೇವಲ ಮೂವರು ಸಚಿವರು ಇದ್ದಾರೆ ಎಂದು ಹೇಳುವ ಮೂಲಕ ಸಚಿವರ ಗೈರುಹಾಜರಿಗೆ ಅವರು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಪಹಣಿ ಸಾಫ್ಟ್‌ವೇರ್ ದೋಷ ಪರಿಹಾರಕ್ಕೆ ಸ್ಪೀಕರ್ ಸಲಹೆ:
ಪಹಣಿ ಸಾಫ್ಟ್ವೇರ್ನಲ್ಲಿರುವ ದೋಷದಿಂದಾಗಿ ಪಹಣಿಯ ಬೆಳೆ ಕಾಲಂನಲ್ಲಿ ಖುಷ್ಕಿ ಎಂದು ಅಧಿಕಾರಿಗಳು ನಮೂನೆ ಮಾಡುತ್ತಿದ್ದು, ರೈತರಿಗೆ ಯಾವುದೇ ರೀತಿಯ ಸಾಲ ಸೌಲಭ್ಯ ಸಿಗುತ್ತಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಅವರ ಮೇಲೆ ಸ್ಪೀಕರ್ ಸೇರಿದಂತೆ ಆಡಳಿತ ಮತ್ತು ಪ್ರತಿಪಕ್ಷದ ಶಾಸಕರು ಅಸಮಾಧಾನ ಹೊರಹಾಕಿದ ಘಟನೆ ವಿಧಾನಸಭೆಯಲ್ಲಿ ನಡೆಯಿತು.
ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಶಾಸಕ ಡಿ.ಪಿ. ರಾಜೇಗೌಡ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಲು ಕಂದಾಯ ಸಚಿವ ಅಶೋಕ್ ಆವರು ಮುಂದಾಗುತ್ತಿದ್ದಂತೆ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕಳೆದ ಎರಡು ವರ್ಷಗಳಿಂದ ಸಾಫ್ಟ್‌ವೇರ್ ದೋಷದಿಂದಾಗಿ ಪಹಣಿಯ ಬೆಳೆ ಕಾಲಂನಲ್ಲಿ ಖುಷ್ಕಿ ಎಂದು ಅಧಿಕಾರಿಗಳು ನಮೂನೆ ಮಾಡುತ್ತಿದ್ದಾರೆ. ಇದರ ಪರಿಣಾಮ ಅಡಿಕೆ, ಕಾಫಿ, ಏಲಕ್ಕಿ, ಬಾಳೆ ಸೇರಿದಂತೆ ವಿವಿಧ ಬೆಳೆಗಳಿಗೆ ಸಹಕಾರಿ ಬ್ಯಾಂಕ್ಗಳು ಸಾಲ ಕೊಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನೀವು ಸಾಫ್ಟ್ ವೇರ್ ಅನ್ನು ಖಾಸಗಿ ಏಜೆನ್ಸಿಗಳಿಗೆ ಕೊಟ್ಟಿರುತ್ತೀರಿ. ಅದನ್ನು ಕಾಲಮಿತಿಯೊಳಗೆ ಸರಿಪಡಿಸದಿದ್ದರೆ ನಿಮ್ಮ ಅಧಿಕಾರಿಗಳೇ ಸರ್ಕಾರದ ಮರ್ಯಾದೆ ಕಳೆಯುತ್ತಾರೆ ಎಂದು ಸ್ಪೀಕರ್ ಕಾಗೇರಿ ಕಿಡಿಕಾರಿದರು. ಮೊದಲು ಈ ಸಮಸ್ಯೆಯನ್ನು ಸರಿಪಡಿಸಿ. ಇದರಿಂದ ಗ್ರಾಮೀಣ ಭಾಗಗಳಲ್ಲಿ ರೈತರು ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ನೀಡುವ ವರದಿಯನ್ನು ಸದನದಲ್ಲಿ ಮಂಡಿಸಬೇಡಿ. ವಾಸ್ತವ ಏನಿದೆ ಎಂಬುದನ್ನು ತಿಳಿದುಕೊಳ್ಳಿ ಎಂದು ಸಲಹೆ ನೀಡಿದರು.