ಬೆಂಗಳೂರು: ಟ್ರೋಲ್ ಮಾಡುತ್ತಾರೆಂಬ ಹಿಂಜರಿಕೆ, ಅಳಕು ಇಲ್ಲದೇ ಹೊಸ ಸದಸ್ಯರು ಮುಕ್ತವಾಗಿ ಮಾತನಾಡಿ ಎಂದು ಸಭಾಧ್ಯಕ್ಷ ಯು ಟಿ ಖಾದರ್ ಅವರು ವಿಧಾನಸಭೆಯಲ್ಲಿ ಧೈರ್ಯ ತುಂಬಿದರು. ಇಂದು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಆಡಳಿತ ಪಕ್ಷದ ಶಾಸಕ ಪ್ರದೀಪ್ ಈಶ್ವರ್ ಮಾತನಾಡುತ್ತಿದ್ದ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಭಾಧ್ಯಕ್ಷರು, ಟ್ರೋಲ್ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ನಾನು ಈ ಸ್ಪೀಕರ್ ಸ್ಥಾನದಲ್ಲಿ ಕೂರಲು ಟ್ರೋಲ್ ಮಾಡಿದವರು ಕಾರಣ. ಅವರು ನಮ್ಮ ಬೆಳವಣಿಗೆಗೆ ಕಾರಣ ಆಗ್ತಾರೆ. ಹೊಸದಾಗಿ ಶಾಸಕರಾದಾಗ ಮಾತನಾಡುವುದು ಸಹಜ. ಹೆದರಿಕೆ ಬೇಡ ಧೈರ್ಯವಾಗಿ ಮಾತನಾಡಿ ಎಂದು ನೂತನ ಶಾಸಕ ಪ್ರದೀಪ್ ಈಶ್ವರ್ ಅವರನ್ನು ಹುರಿದುಂಬಿಸಿದರು.
ಆತ್ಮವಿಶ್ವಾಸದಿಂದ ಮಾತನಾಡಿ, ಸಂವಿಧಾನ ಬದ್ಧವಾಗಿ ಮಾತನಾಡಿ ಅಷ್ಟೇ. ಹೆಚ್ಚು ಕಡಿಮೆ ಆದರೆ ಏನೂ ತೊಂದರೆ ಇಲ್ಲ. ಇದು ಪರೀಕ್ಷೆ ಹಾಲ್ ಅಥವಾ ನ್ಯಾಯಾಲಯ ಅಲ್ಲ. ಫ್ರೀ ಆಫ್ ಮೈಂಡ್ ಅಲ್ಲಿ ಮಾತನಾಡಿ ಎಂದು ಸಲಹೆ ನೀಡಿದರು. ಆಗ ಸಭಾಧ್ಯಕ್ಷರ ಸಲಹೆಯನ್ನು ಸ್ವೀಕರಿಸಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, ಸರ್ಕಾರಿ ಕನ್ನಡ ಮಾಧ್ಯಮದ ಶಾಲೆಗಳನ್ನು ಬಲಪಡಿಸಬೇಕು ಹಾಗೂ 1 ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿರುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ವ್ಯಾಸಂಗದ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಮನವಿ ಮಾಡಿದರು.
ಸರ್ಕಾರಿ ಶಾಲೆಗಳ ಶಿಕ್ಷಕರು ಹೆಚ್ಚು ಗುಣಮಟ್ಟ ಹೊಂದಿದ್ದಾರೆ: ಸಿದ್ಧಗಂಗಾ ಮಠದ ಡಾ ಶಿವಕುಮಾರ ಸ್ವಾಮೀಜಿಯವರನ್ನು ಸ್ಮರಿಸಿದ ಅವರು, 1 ರಿಂದ 10ನೇ ತರಗತಿಯಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರಿಗೆ ರಾಜ್ಯ ಸರ್ಕಾರ ಉನ್ನತ ಶಿಕ್ಷಣದ ವೆಚ್ಚ ಭರಿಸಬೇಕು. ಆ ಮೂಲಕ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಬಹುದು. ಎಂಬಿಬಿಎಸ್ ಕೋರ್ಸ್ಗೆ ಸರ್ಕಾರ 59,000 ರೂ. ಶುಲ್ಕ ನಿಗದಿ ಮಾಡಿದೆ. ಕೂಲಿ ಕೆಲಸ ಮಾಡುವವರ ಮಕ್ಕಳು ಈ ಹಣವನ್ನು ಭರಿಸಲಾಗುವುದಿಲ್ಲ. 7ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದವರು 8 ರಿಂದ ಆಂಗ್ಲ ಮಾಧ್ಯಮ ಶಾಲೆಗಳಿಗೆ ತೆರಳುತ್ತಿದ್ದಾರೆ. ಉನ್ನತ ಶಿಕ್ಷಣ ವೆಚ್ಚವನ್ನು ಸರ್ಕಾರ ಭರಿಸಿದರೆ ಇದು ತಪ್ಪಲಿದೆ. ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳ ಶಿಕ್ಷಕರು ಹೆಚ್ಚು ಗುಣಮಟ್ಟ ಹೊಂದಿದ್ದಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.
ಸರ್ಕಾರಿ ಆಸ್ಪತ್ರೆಗಳನ್ನು ಕೂಡ ಬಲಗೊಳಿಸಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ದೊರೆಯದೇ ನನ್ನ ತಂದೆ-ತಾಯಿಯನ್ನು ಕಳೆದುಕೊಂಡೆ. ನಮ್ಮ ಕ್ಷೇತ್ರದಲ್ಲಿ ಇಂದು ಬೆಳಗ್ಗೆ ಟ್ರ್ಯಾಕ್ಟರ್ ಅಪಘಾತವಾಗಿದ್ದು, 7 ಜನರ ಪರಿಸ್ಥಿತಿ ಗಂಭೀರವಾಗಿದೆ. ಅವರಿಗೆ ತುರ್ತು ಚಿಕಿತ್ಸೆ ಒದಗಿಸಲಾಗಿದೆ ಎಂದರು.