ಕರ್ನಾಟಕ

karnataka

ETV Bharat / state

ವಿಪ್​  ಜಾರಿಗೊಳಿಸುವ ಅಧಿಕಾರವಿದೆ: ರೂಲಿಂಗ್ ನೀಡಿದ ಸ್ಪೀಕರ್ ರಮೇಶ್ ಕುಮಾರ್..! - speaker ramesh kumar

ಅತೃಪ್ತ ಶಾಸಕರಿಗೆ ರಕ್ಷಣೆ ಕೊಡುವ ಜವಾಬ್ದಾರಿ ನನ್ನ ಮೇಲಿದೆ. ಅವರು ಸದನದಲ್ಲಿ ಭಾಗವಹಿಸಬಹುದು, ಅಥವಾ ಭಾಗವಹಿಸದಿರಬಹುದು, ಅವರ ಮೇಲೆ ಯಾವುದೇ ಒತ್ತಡ ಇಲ್ಲ ಹಾಗೂ ನನ್ನ ಯಾವುದೇ ಹಕ್ಕು ಉಲ್ಲಂಘನೆಯಾಗಿಲ್ಲ, ನನ್ನ ಯಾವುದೇ ಹಕ್ಕನ್ನು ಸುಪ್ರೀಂಕೋರ್ಟ್ ಉಲ್ಲಂಘಿಸಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟಪಡಿಸಿದರು.

ರೂಲಿಂಗ್ ನೀಡಿದ ಸ್ಪೀಕರ್ ರಮೇಶ್ ಕುಮಾರ್..!

By

Published : Jul 22, 2019, 4:20 PM IST

ಬೆಂಗಳೂರು:ಶಾಸಕಾಂಗ ಪಕ್ಷದ ನಾಯಕನಿಗೆ ತಮ್ಮ ಪಕ್ಷದ ಶಾಸಕರು ಸದನಕ್ಕೆ ಹಾಜರಾಗುವಂತೆ ಸೂಚಿಸುವ ಅಧಿಕಾರವಿದೆ. ಸಂವಿಧಾನದ ಶೆಡ್ಯೂಲ್ 10ರಲ್ಲಿ ಇರುವ ಈ ಜವಾಬ್ದಾರಿಯನ್ನು ಮೊಟಕುಗೊಳಿಸುವುದಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ರೂಲಿಂಗ್ ನೀಡಿದ್ದಾರೆ.

ವಿಧಾನಸಭೆಯಲ್ಲಿ ಇಂದು ಬೆಳಗ್ಗೆ ಕಲಾಪ ಆರಂಭದ ವೇಳೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಇತ್ತೀಚೆಗೆ ನೀಡಿದ್ದ ಆದೇಶದಲ್ಲಿ ಗೊಂದಲಗಳಿವೆ, ಶಾಸಕಾಂಗ ಪಕ್ಷದ ನಾಯಕನ ಅಧಿಕಾರವನ್ನು ಮೊಟಕುಗೊಳಿಸಲಾಗಿದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕ್ರಿಯಾಲೋಪವೆತ್ತಿದ್ದರು. ಈ ಬಗ್ಗೆ ತಾವು ಅಡ್ವೊಕೇಟ್ ಜನರಲ್ ಅವರನ್ನು ಕಚೇರಿಗೆ ಕರೆಸಿ ಚರ್ಚೆ ನಡೆಸಿದ್ದೇನೆ, ಇದೊಂದು ವಿಚಿತ್ರ ಸನ್ನಿವೇಶ, ಪ್ರತಿವಾದಿಗಳಾಗಿ ಶಾಸಕಾಂಗ ಪಕ್ಷದ ನಾಯಕರು ಇರಲಿಲ್ಲ ಎಂದು ಸ್ಪೀಕರ್ ಹೇಳಿದರು. ಸದನದಲ್ಲಿ ಭಾವಹಿಸುವಂತೆ ತಮ್ಮ ಪಕ್ಷದ ಶಾಸಕರಿಗೆ ವಿಪ್ ಜಾರಿಗೊಳಿಸುವ ಅಧಿಕಾರ ಶಾಸಕಾಂಗ ಪಕ್ಷದ ನಾಯಕರಿಗಿದೆ. ಇದನ್ನು ಸಂವಿಧಾನದ ಶೆಡ್ಯೂಲ್ 10ರಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಜವಾಬ್ದಾರಿಯನ್ನು ಮೊಟಕುಗೊಳಿಸುವುದಿಲ್ಲ ಎಂದು ಹೇಳುವ ಮೂಲಕ ಎಲ್ಲಾ ಶಾಸಕರಿಗೂ ವಿಪ್ ಜಾರಿಗೊಳಿಸಬಹುದು ಎಂದು ಪರೋಕ್ಷವಾಗಿ ಹೇಳಿದರು.

ಅತೃಪ್ತ ಶಾಸಕರಿಗೆ ರಕ್ಷಣೆ ಕೊಡುವ ಜವಾಬ್ದಾರಿ ನನ್ನ ಮೇಲಿದೆ. ಅವರು ಸದನದಲ್ಲಿ ಭಾಗವಹಿಸಬಹುದು, ಅಥವಾ ಭಾಗವಹಿಸದಿರಬಹುದು, ಅವರ ಮೇಲೆ ಯಾವುದೇ ಒತ್ತಡ ಇಲ್ಲ ಹಾಗೂ ನನ್ನ ಯಾವುದೇ ಹಕ್ಕು ಉಲ್ಲಂಘನೆಯಾಗಿಲ್ಲ, ನನ್ನ ಯಾವುದೇ ಹಕ್ಕನ್ನು ಸುಪ್ರೀಂಕೋರ್ಟ್ ಉಲ್ಲಂಘಿಸಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟಪಡಿಸಿದರು.

ವಿಪ್ ಕೊಡುವುದು, ಬಿಡುವುದು ಶಾಸಕಾಂಗ ಪಕ್ಷದ ನಾಯಕರ ವಿವೇಚನೆಗೆ ಬಿಟ್ಟು ವಿಚಾರ, ಅದನ್ನು ಉಲ್ಲಂಘಿಸುವುದು ಬಿಡುವುದು ಅತೃಪ್ತ ಶಾಸಕರಿಗೆ ಬಿಟ್ಟ ವಿಚಾರ. ಆದರೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ದೂರು ಬಂದರೆ ಅದನ್ನು ನಾನು ಕಾನೂನು ಪ್ರಕಾರ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳುತ್ತೇನೆ, ನಾನು ವಿವೇಚನೆ ಬಳಸುವುದಿಲ್ಲ, ಕಾನೂನು ಪ್ರಕಾರ ಮುನ್ನಡೆಯುತ್ತೇನೆ ಎಂದು ಸ್ಪೀಕರ್ ಹೇಳಿದರು.

ಅತೃಪ್ತ ಶಾಸಕರು ಸಂಪರ್ಕದಲ್ಲಿದ್ದಾರೆ, ಅವರೆಲ್ಲರೂ ಸಂತೋಷದಲ್ಲಿದ್ದಾರೆ ಎಂದು ವಿರೋಧ ಪಕ್ಷದ ನಾಯಕರು ಹಾಗೂ ಬಿಜೆಪಿ ಶಾಸಕ ಸಿ.ಎಂ.ಉದಾಸಿ ಇದೇ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಹಾಗಾದರೆ ಅತೃಪ್ತ ಶಾಸಕರನ್ನು ಮುಂಬೈಗೆ ಕರೆದೊಯ್ದದ್ದು ಯಾರು ? ಎಂದು ಕೇಳಿದರು. ರಾಜೀನಾಮೆ ಕೊಡಲು ಯಾವುದೇ ಶಾಸಕರಿಗೆ ಅಧಿಕಾರವಿದೆ. ಆದರೆ ಅದು ನೈಜವೇ ಮತ್ತು ಸ್ವಯಂಪ್ರೇರಣೆಯಿಂದ ಆಗಿದೆಯೇ ಎಂಬುದನ್ನು ಸ್ಪೀಕರ್ ಖಾತರಿಪಡಿಸಿಕೊಳ್ಳಬೇಕು, ಓರ್ವ ಶಾಸಕ ಇತ್ತೀಚೆಗೆ ಮಾಧ್ಯಮಗಳೊಂದಿಗೆ ಇನ್ನೊಬ್ಬ ಶಾಸಕನ ನಿರ್ಧಾರ ನೋಡಿಕೊಂಡು ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದರು. ಇದು ಸ್ವಯಂ ಪ್ರೇರಣೆಯ ರಾಜೀನಾಮೆಯೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಶಾಸಕರು ವಿಮಾನದಲ್ಲಿ ಹೋಗುವಾಗ ಅವರೊಂದಿಗೆ ಯಾರಿದ್ದರು ಎಂಬುದು ಎಲ್ಲರಿಗೂ ಗೊತ್ತು. ಮಾಧ್ಯಮಗಳು ಈ ವಿಷಯವನ್ನು ಚಿತ್ರ ಸಹಿತ ಪ್ರಕಟಿಸಿವೆ. ಎಂಟಿಬಿ ನಾಗರಾಜ್ ಅವರನ್ನು ಬಿಜೆಪಿ ಮುಖಂಡ ಆರ್. ಅಶೋಕ್ ವಿಮಾನ ನಿಲ್ದಾಣಕ್ಕೆ ಬಿಟ್ಟು ಬಂದಿದ್ದಾರೆ. ಅತೃಪ್ತ ಶಾಸಕರನ್ನು ಕರೆದೊಯ್ದ ವಿಮಾನ ಬಿಜೆಪಿಯ ಮುಖಂಡರೊಬ್ಬರಿಗೆ ಸೇರಿದ್ದು. ಹಾಗಾದರೆ ಶಾಸಕರು ರಾಜೀನಾಮೆ ನೀಡಿರುವುದರ ಹಿಂದೆ ಸಂಚು ಇಲ್ಲವೇ ? ಇದಕ್ಕೂ ಬಿಜೆಪಿಗೂ ಸಂಬಂಧವಿಲ್ಲವೇ ?, ಒಮ್ಮೆಲೇ 13- 14 ಶಾಸಕರು ರಾಜಿನಾಮೆ ನೀಡುವುದು ಎಂದರೆ ಏನರ್ಥ ? ಇವೆಲ್ಲಾ ಆಕಸ್ಮಿಕವೇ ? ಎಂದರು.

ಈ ಮಧ್ಯೆ ಬಿಜೆಪಿ ಶಾಸಕ ಜಗದೀಶ್ ಶೆಟ್ಟರ್ ಮಾತನಾಡಿ, ನೀವು ಯಾವುದೇ ವ್ಯಕ್ತಿಯ ಬಗ್ಗೆ ಆರೋಪ ಮಾಡುವುದಾದರೆ ಮೊದಲು ನೋಟಿಸ್ ಕೊಟ್ಟು ಸೂಕ್ತ ದಾಖಲೆಗಳನ್ನು ಕೊಡಬೇಕಾಗುತ್ತದೆ. ಮೇಲಾಗಿ ಬಿ.ಸಿ.ಪಾಟೀಲ್ ಅವರು ಈಗ ಸದನದಲ್ಲಿ ಇಲ್ಲ. ತಮ್ಮನ್ನು ಸಮರ್ಥಿಸಿಕೊಳ್ಳಲು ಅವರಿಗೆ ಸಾಧ್ಯವಿಲ್ಲ. ಹಾಗಾಗಿ ಇಂತಹ ಆರೋಪಗಳಿಗೆ ಅವಕಾಶ ನೀಡಬಾರದು ಎಂದು ಸ್ಪೀಕರ್ ಅವರನ್ನು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಸ್ಪೀಕರ್, ನೋಟಿಸ್ ಕೊಡಬೇಕು ಎಂಬ ನಿಯಮಾವಳಿ ಇದೆ. ಆದರೆ ಇಲ್ಲಿ ಅವರು ಗೈರು ಹಾಜರಾಗಿರುವುದು ನಿಜ. ಅವರನ್ನು ಜನ ಆರಿಸಿ ಕಳಿಸಿರುವುದು ಇಲ್ಲಿ ಬಂದು ಕೂತು ಚರ್ಚೆ ನಡೆಸಲಿ ಎಂಬ ಉದ್ದೇಶದಿಂದ, ಅವರಿಗೆ ಸದನಕ್ಕೆ ಬರುವ ಹಕ್ಕು ಇದೆ. ಅವರನ್ನು ಯಾರೂ ತಡೆದಿಲ್ಲ ಎಂದು ಸ್ಪಷ್ಟಪಡಿಸಿದರು. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಯಾವ ಸಭಾಧ್ಯಕ್ಷರಿಗೂ ನನಗೆ ಬಂದಂತಹ ದಯನೀಯ ಸ್ಥಿತಿ ಬಂದಿಲ್ಲ. ಅವರು ರಾಜಿನಾಮೆ ಕೊಟ್ಟಿದ್ದಾರೆ, ಅಂಗೀಕಾರವಾಗಿಲ್ಲ, ಇಲ್ಲಿಗೆ ಬರಬೇಕು, ಅವರು ಬರುತ್ತಿಲ್ಲ, ಜನ ಅನಾಥರಾಗುತ್ತಿದ್ದಾರೆ, ಅರ್ಥ ಮಾಡಿಕೊಳ್ಳಿ ಎಂದು ಬಹಳ ಬೇಸರದಿಂದ ರಮೇಶ್ ಕುಮಾರ್ ಹೇಳಿದರು.

ABOUT THE AUTHOR

...view details