ಬೆಂಗಳೂರು:ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸ್ಥಳ ಭೇಟಿಗೆ ತಡೆಯಾಜ್ಞೆ ನೀಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ರಾಜೀನಾಮೆ ನೀಡಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಆಗ್ರಹಿಸಿದ್ದಾರೆ.
ಜಯನಗದ ತಮ್ಮಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪಿಪಿಇ ಕಿಟ್, ಇತರ ಪರಿಕರಗಳನ್ನು ಖರೀದಿಸುವಲ್ಲಿ ಅವ್ಯವಹಾರ ನಡೆದಿದೆ. ಈ ಸಂಬಂಧ ಎಲ್ಲ ಕಡತವನ್ನು ಮುಖ್ಯ ಕಾರ್ಯದರ್ಶಿಯವರ ವಶಕ್ಕೆ ನೀಡಬೇಕು. ಜೊತೆಗೆ ಸಂಬಂಧಿತ ಟಿಪ್ಪಣಿ ಹಾಳೆ, ಪತ್ರ ವ್ಯವಹಾರ, ಕಡತಗಳನ್ನು ಆಯಾ ಇಲಾಖೆಗಳ ವೆಬ್ಸೈಟ್ನಲ್ಲಿ ಸಂಪೂರ್ಣವಾಗಿ ಪ್ರಕಟಿಸಬೇಕು ಎಂದು ಆಗ್ರಹಿಸಿದರು.
ವೈದ್ಯಕೀಯ ಉಪಕರಣ ಉತ್ಪಾದಿಸುವ ಕಂಪನಿಯಿಂದ ಖರೀದಿಸುವ ಉಪಕರಣವನ್ನು ಕೃಷಿ ಉತ್ಪನ್ನ ತಯಾರಿಕಾ ಸಂಸ್ಥೆ, ವೆಬ್ಸೈಟ್ ವಿನ್ಯಾಸಗೊಳಿಸುವ ಸಂಸ್ಥೆಗಳಿಂದ 3 ಕೋಟಿ ರೂ. ಮೌಲ್ಯದ ಪಿಪಿಇ ಕಿಟ್ ಖರೀದಿಸಲಾಗಿದೆ. ಜೊತೆಗೆ ಬಳಸಿದ ವೆಂಟಿಲೇಟರ್ಗಳನ್ನು ಖರೀದಿ ಮಾಡಲಾಗಿದೆ. ದೆಹಲಿಯ ಸಂಸ್ಥೆಯೊಂದರಿಂದ ಈ ಹಳೆ ವೆಂಟಿಲೇಟರ್ಗಳನ್ನು ಈಗಿನ ದರದಲ್ಲಿ ಖರೀದಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಎರಡೂವರೆ ಪಟ್ಟು ಹೆಚ್ಚಿನ ದರಕ್ಕೆ ಸ್ಯಾನಿಟೈಸರ್ನ್ನು ಖರೀದಿ ಮಾಡಲಾಗಿದೆ. ಟೆಂಡರ್ ನಿಯಮ ಉಲ್ಲಂಘಿಸಿದ ಸಂಸ್ಥೆಯಿಂದಲೇ ಪ್ರತಿ 500 ಎಂಎಲ್ ಬಾಟಲಿಗೆ ತಲಾ 250 ರೂ. ದರದಲ್ಲಿ ಮತ್ತೆ ಸ್ಯಾನಿಟೈಸರ್ ಖರೀದಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಈ ಅವ್ಯವಹಾರಗಳ ಸಂಬಂಧ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸ್ಥಳ ಭೇಟಿ ಮಾಡಲು ಸ್ಪೀಕರ್ ತಡೆಯಾಜ್ಞೆ ಹಾಕಿರುವುದು ಕಾನೂನು ಬಾಹಿರ ಎಂದು ತಿಳಿಸಿದರು.