ಬೆಂಗಳೂರು: ವಸತಿ ಯೋಜನೆಗಳನ್ನು ಪದೇ ಪದೆ ಮುಂದೂಡುತ್ತಾ ಅನುದಾನ ಬಿಡುಗಡೆ ಮಾಡದಿರುವುದು ಸರಿಯಲ್ಲ ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಸದಸ್ಯ ಯು.ಟಿ.ಖಾದರ್ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸುತ್ತಿದ್ದ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸ್ಪೀಕರ್, ಫಲಾನುಭವಿಗಳನ್ನು ಆಯ್ಕೆ ಮಾಡಿ ಹಲವು ವರ್ಷಗಳೇ ಕಳೆದಿವೆ. ಆದರೆ, ಅವರಿಗೆ ಮನೆ ಮಂಜೂರು ಮಾಡದಿರುವುದು ಸರಿಯಾದ ಕ್ರಮವಲ್ಲ. ಈ ಬಗ್ಗೆ ಎಲ್ಲರೂ ಗಮನಹರಿಸಬೇಕು ಎಂದು ಸಲಹೆ ಮಾಡಿದರು.
2018-19ರಲ್ಲಿ ಮೀನುಗಾರರಿಗೆ ಮನೆ ಕಟ್ಟಿಸಿಕೊಡುವುದಾಗಿ ಘೋಷಣೆ ಮಾಡಲಾಗಿದೆ. ತಾಂತ್ರಿಕ ಕಾರಣಗಳನ್ನು ವೊಡ್ಡಿ ಮನೆಗಳನ್ನೇ ಮಂಜೂರು ಮಾಡಿಲ್ಲ. ನಮಗೆ ಒಂದು ಮನೆ ಸಿಗುತ್ತದೆ ಎಂದು ಆಸೆ ಇಟ್ಟುಕೊಂಡಿರುತ್ತಾರೆ. ಈ ಬಗ್ಗೆ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಸಚಿವರು ಗಮನಹರಿಸಬೇಕೆಂದು ಸೂಚನೆ ನೀಡಿದರು.
ಆಗ ವಸತಿ ಸಚಿವ ಸೋಮಣ್ಣ ಮಾತನಾಡಿ, ವಸತಿ ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡುವ ಅಧಿಕಾರ ಇಲಾಖೆಗೆ ಇರುವುದಿಲ್ಲ. ಆಯಾ ಕ್ಷೇತ್ರಗಳ ಶಾಸಕರು ಸಭೆ ನಡೆಸಿ ಫಲಾನುಭವಿಗಳ ಪಟ್ಟಿಯನ್ನು ಆಯ್ಕೆ ಮಾಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಬೇಕು. ನಾನು ಈ ಸದನದ ಮೂಲಕ ಮನವಿ ಮಾಡುತ್ತೇನೆ. ತಕ್ಷಣವೇ ಎಲ್ಲ ಶಾಸಕರು ನಿಮ್ಮ ವ್ಯಾಪ್ತಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿದರೆ ಕಾಲಮಿತಿಯೊಳಗೆ ಅನುದಾನವನ್ನು ಅನುಷ್ಠಾನ ಮಾಡುತ್ತೇವೆ ಎಂದು ಹೇಳಿದರು.
ಪಟ್ಟಿಯನ್ನು ಕಳುಹಿಸಿದ ಬಳಿಕ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ, ತಾಲೂಕು ಮಟ್ಟದಲ್ಲಿ ಇಒ, ಪಿಡಿಒಗಳು ಸೇರಿದಂತೆ ಕೆಳಹಂತದ ಅಧಿಕಾರಿಗಳು ಇದನ್ನು ಮುತುವರ್ಜಿ ವಹಿಸಬೇಕು. ಆದರೆ, ನಮ್ಮ ಅಧಿಕಾರಿಗಳು ಎಷ್ಟು ಬಾರಿ ಸೂಚಿಸಿದರೂ ನಿರ್ಲಕ್ಷ್ಯ ತೋರುತ್ತಾರೆ. ಹೀಗಾಗಿ, ಯೋಜನೆ ವಿಳಂಬವಾಗಿದೆ ಎಂದರು.
ನಾವು ಬಡವರಿಗೆ ಮನೆ ಕಟ್ಟಿಸಿಕೊಡುತ್ತೇವೆ ಎಂದು ಆಶ್ವಾಸನೆ ಕೊಡುತ್ತೇವೆ. ಅವರು ಕೂಡ ಆಸೆ ಇಟ್ಟುಕೊಂಡಿರುತ್ತಾರೆ. ಆದರೆ, ಯಾರೋ ಮಾಡುವ ತಪ್ಪಿನಿಂದ ವಿಳಂಬವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕಾಂಗ್ರೆಸ್ ಸದಸ್ಯ ಯು.ಟಿ.ಖಾದರ್ ಮಾತನಾಡಿ, 2018-19ನೇ ಸಾಲಿನಲ್ಲಿ ಮಸ್ತ್ಯಾಶ್ರಯ ಯೋಜನೆಯಡಿ ಮಂಗಳೂರು ಕ್ಷೇತ್ರಕ್ಕೆ 29 ಮನೆಗಳನ್ನು ಮಂಜೂರು ಮಾಡುವುದಾಗಿ ಸರ್ಕಾರ ಭರವಸೆ ಕೊಟ್ಟಿತ್ತು. ಮೂರು ವರ್ಷಗಳಾದರೂ ಬಿಡುಗಡೆಯಾಗಿಲ್ಲ. ಮೀನುಗಾರರು ಬಡವರು. ತಮಗೊಂದು ಮನೆ ಸಿಗುತ್ತದೆ ಎಂದು ಆಸೆಗಣ್ಣಿನಿಂದ ನೋಡುತ್ತಾರೆ. ಎರಡು ಮೂರು ವರ್ಷಗಳಾದರೂ ಮನೆ ಸಿಗಲಿಲ್ಲ ಎಂದರೆ ಹೇಗೆ? ಎಂದು ಪ್ರಶ್ನಿಸಿದರು.
ಸಚಿವ ಅಂಗಾರ ಪರವಾಗಿ ಉತ್ತರಿಸಿದ ಸಚಿವೆ ಶಶಿಕಲಾ ಜೊಲ್ಲೆ ಅವರು, ಮತ್ಸ್ಯಾಶ್ರಯ ಯೋಜನೆಯಡಿ ಮೀನುಗಾರರಿಗೆ ಮನೆ ಕಲ್ಪಿಸಿಕೊಡುವುದು ನಮ್ಮ ಸರ್ಕಾರದ ಕರ್ತವ್ಯ. ಕೆಲವು ತಾಂತ್ರಿಕ ಕಾರಣಗಳಿಂದ ವಿಳಂಬವಾಗಿರಬಹುದು. ಸಂಬಂಧಪಟ್ಟ ಎಲ್ಲ ಸಚಿವರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದರು.
ವಸತಿ ಯೋಜನೆಗಳನ್ನು ಆರಂಭಿಸಿದರೆ ಕಂದಾಯ ಇಲಾಖೆ ಎಷ್ಟು ಬೇಕಾದರೂ ಜಮೀನು ಕೊಡಲು ಸಿದ್ದ: ಬೆಂಗಳೂರಿನಲ್ಲಿ ವಸತಿ ಯೋಜನೆಗೆ ಎಷ್ಟು ಬೇಕಾದರೂ ಭೂಮಿಯನ್ನು ಒದಗಿಸಲು ಕಂದಾಯ ಇಲಾಖೆ ಸಿದ್ದವಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ವಿಧಾನಸಭೆಯಲ್ಲಿ ಜೆಡಿಎಸ್ ಸದಸ್ಯ ಮಂಜುನಾಥ್. ಆರ್ ಅವರ ಪ್ರಶ್ನೆಗೆ ಉತ್ತರಿಸಿದರು.
ವಸತಿ ಯೋಜನೆಗಳನ್ನು ಆರಂಭಿಸಿದರೆ ಎಷ್ಟು ಬೇಕಾದರೂ ಜಮೀನು ಕೊಡಲು ಸಿದ್ದ. ಪ್ರತಿಯೊಬ್ಬರಿಗೂ ಸೂರು ಒದಗಿಸಿಕೊಡಲು ನಮ್ಮ ಸರ್ಕಾರ ಬದ್ದವಿದೆ ಎಂದ ಅವರು, ಬೆಂಗಳೂರು ನಗರ ಜಿಲ್ಲೆ ಉತ್ತರ ತಾಲೂಕು ಯಶವಂತಪುರ ಕೆರೆಗುಡ್ಡದಹಳ್ಳಿ ಗ್ರಾಮದಲ್ಲಿ ಶಿಕ್ಷಣ ಸಂಸ್ಥೆಗೆ ನೀಡಿದ್ದ 6.14 ಗುಂಟೆ ಜಮೀನನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
2004ರಲ್ಲಿ ಅಂದಿನ ಸರ್ಕಾರ 1969ರ ನಿಯಮ 19ರಲ್ಲಿನ ಷರತ್ತುಗಳನ್ನು ವಿಸಿ ಎಕರೆವೊಂದಕ್ಕೆ ವಾರ್ಷಿಕ 1 ಸಾವಿರ ರೂ. ಗುತ್ತಿಗೆ ದರ ವಿಸಿ 30 ವರ್ಷಗಳ ಅವಧಿಗೆ ಶ್ರೀ ಬಾಲಾಜಿ ಎಜುಕೇಷನ್ ಟ್ರಸ್ಟ್ ಅವರಿಗೆ ನೀಡಲಾಗಿದೆ. ಈ ಹಿಂದೆಯೂ ಅನೇಕ ಸರ್ಕಾರಗಳು ಶಿಕ್ಷಣ ಸಂಸ್ಥೆಗೆ ಜಮೀನು ಮಂಜೂರು ಮಾಡಿದ್ದಾರೆ. ಹೀಗಾಗಿ, ಹಿಂಪಡೆಯುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಪುನರುಚ್ಚರಿಸಿದರು.
ಶಿಕ್ಷಣ ಸಂಸ್ಥೆಗೆ ಖಾಯಂ ಆಗಿ ನೀಡಲು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 69ಎ ಹಾಗೂ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22ಎ ತಿದ್ದುಪಡಿ ಮಾಡಲಾಗಿದೆ. ಸರ್ವೇ ನಂ. 8ರಲ್ಲಿ 4 ಎಕರೆ ಜಮೀನನ್ನು ಮಾರ್ಗಸೂಚಿ ದರ ಹಾಗೂ ಇತರೆ ಶಾಸನಬದ್ದ ಶುಲ್ಕ ವಿಸಿ ಗುತ್ತಿಗೆ ನೀಡಲಾಗಿದೆ. ನಿಯಮಗಳ ಪ್ರಕಾರ ನೀಡಿರುವುದರಿಂದ ಜಮೀನು ಹಿಂಪಡೆಯಲಾಗುವುದಿಲ್ಲ ಎಂದು ಹೇಳಿದರು.
ಖಾಲಿ ಇರುವ ಹುದ್ದೆ ಶೀಘ್ರ ಭರ್ತಿ: ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಯನ್ನು ಶೀಘ್ರದಲ್ಲೇ ಭರ್ತಿ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ಶಾಸಕ ಸಂಗಮೇಶ್ ಅವರ ಪ್ರಶ್ನೆಗೆ ಉತ್ತರಿಸಿದರು.
ಭದ್ರಾವತಿ ತಾಲೂಕಿನಲ್ಲಿ ಖಾಲಿ ಇರುವ ಕೆಲವು ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಸರ್ಕಾರ ಕಾರ್ಯೋನ್ಮುಖವಾಗಿದೆ. ಯಾವ ಯಾವ ಹುದ್ದೆಗಳು ಖಾಲಿ ಇವೆಯೋ ಅವುಗಳನ್ನು ಭರ್ತಿ ಮಾಡಿಕೊಳ್ಳಲು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಅವರು ಹೇಳಿದರು.
ಭದ್ರಾವತಿಗೆ ತಹಶೀಲ್ದಾರ್ ಗ್ರೇಡ್-1 ಒಂದು, ತಹಶೀಲ್ದಾರ್ ಗ್ರೇಡ್-2 ಒಂದು, ಶಿರಸ್ತೇದಾರ್ 7, ಪ್ರಥಮ ದರ್ಜೆ ಸಹಾಯಕರು/ಕಂದಾಯ ನಿರೀಕ್ಷಕರ 9 ಹುದ್ದೆಗಳಲ್ಲಿ 6, ದ್ವಿತೀಯ ದರ್ಜೆ ಸಹಾಯಕರಲ್ಲಿ 11ರಲ್ಲಿ 10 ಭರ್ತಿ, ಗ್ರಾಮಲೆಕ್ಕರಲ್ಲಿ 47ರಲ್ಲಿ 34 ಹುದ್ದೆಗಳು ಭರ್ತಿಯಾಗಿವೆ.
ವಾಹನ ಚಾಲಕರು-1, ಬೆರಳಚ್ಚುಗಾರರು 3, ಗ್ರೂಪ್ ಡಿ 13 ಸೇರಿದಂತೆ ಇಲ್ಲಿ 24 ಹುದ್ದೆಗಳು ಖಾಲಿ ಇವೆ. ಈಗಾಗಲೇ ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ನೇರ ನೇಮಕಾತಿ ಮಾಡಿಕೊಳ್ಳಲು ಡಿಸಿಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಕೌನ್ಸಿಲ್ ಕೂಡ ನಡೆದಿದೆ. ಉಳಿದಿರುವ ಖಾಲಿ ಇರುವ ಇತರೆ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ:ಆದ್ಯತೆಯ ಮೇಲೆ ನೀರಾವರಿ ಇಲಾಖೆ ಬಾಕಿ ಬಿಲ್ಗಳ ಪಾವತಿ: ಸಚಿವ ಕಾರಜೋಳ