ಬೆಂಗಳೂರು :ಕಾಲ ಸರಿದಂತೆ ಇಂದು ನಮ್ಮೆಲ್ಲರ ಅನುಕೂಲ ಸಿಂಧು ರಾಜಕಾರಣ ನಮ್ಮನ್ನು ತಲೆತಗ್ಗಿಸುವಂತೆ ಮಾಡುತ್ತಿವೆ. ಸದನಗಳು ಆರೋಪ-ಪ್ರತ್ಯಾರೋಪಗಳ ಅಖಾಡಗಳಾಗಿವೆ. ಭಿನ್ನತೆಯೆಂಬುದು ವಿರೋಧ ಎಂಬ ಅರ್ಥಕ್ಕೆ ಎಡೆಮಾಡಿಕೊಡುತ್ತಿರುವುದು ವಿಷಾದನೀಯ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಇಂದು ಹಮ್ಮಿಕೊಂಡಿದ್ದ ಪ್ರಜಾಪ್ರಭುತ್ವ ಸಂಸದೀಯ ಮೌಲ್ಯಗಳ ರಕ್ಷಣೆ ಕುರಿತು ಉಭಯ ಸದನಗಳ ಸದಸ್ಯರುಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ಹೊಸ ಸಂಪ್ರದಾಯಕ್ಕೆ ನಾಂದಿ :ಚರ್ಚೆಗಳಿಗೆ ಅವಕಾಶವೇ ಇಲ್ಲದಂತೆ ವಿಧೇಯಕಗಳು ಮಂಡನೆಯಾಗಿ ಅನುಮೋದನೆ ಪಡೆಯುತ್ತಿವೆ. ವಿಧೇಯಕಗಳ ಮಂಡನೆಗೆ ಬಹುಮುಖ್ಯವಾಗಿ ಅಗತ್ಯವಾದ ಯಾವ ಕಾರ್ಯ ವಿಧಾನವನ್ನು ಪಾಲಿಸದೆ ಅವುಗಳನ್ನು ಏಕಾಏಕಿ ಜಾರಿಗೆ ತರಲಾಗುತ್ತಿದೆ.
ಜನರಿಂದ ಆಯ್ಕೆಯಾಗಿ ಬಂದ ನಾವು ಹೇಳಿದ ಕೂಡಲೇ ಎಲ್ಲಾ ಕಾರ್ಯಗಳು ನಡೆದು ಬಿಡಬೇಕು ಎಂಬ ಧೋರಣೆ ಕಡಿವಾಣವಿಲ್ಲದ ಕುದುರೆಯಂತೆ ಓಡುತ್ತಲೇ ಇದೆ. ಒಂದು ವೇಳೆ ಅಧಿವೇಶನದಲ್ಲಿ ಮಂಡನೆಯಾಗದ ವಿಧೇಯಕಗಳನ್ನು ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಅನುಷ್ಠಾನಗೊಳಿಸುತ್ತಿರುವ ಪರಿಪಾಠವಂತೂ ಅತ್ಯಂತ ನಿರಾಶಾದಾಯಕ ಸಂಪ್ರದಾಯಕ್ಕೆ ನಾಂದಿ ಹಾಡಿಬಿಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವಿಷಮತೆಯೇ ಕಾರಣ :ಸುಗ್ರೀವಾಜ್ಞೆಯನ್ನು ರಾಷ್ಟ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಅತ್ಯಂತ ತುರ್ತಾಗಿ ಶಾಸನಗಳ ಅನಿವಾರ್ಯತೆಯುಂಟಾದ ಸಂದರ್ಭದಲ್ಲಿ ಮಾತ್ರ ಹೊರಡಿಸುವ ಒಂದು ಕಾಲವೂ ಇತ್ತು ಎಂಬುದನ್ನು ನೆನೆದರೆ, ಪ್ರಸ್ತುತ ಎಂತಹ ವಿಷಮ ಪರಿಸ್ಥಿತಿಯಲ್ಲಿ ನಾವಿದ್ದೇವೆ. ನಮ್ಮೆಲ್ಲರ ಪ್ರಸ್ತುತತೆ ಹೇಗೆ ಕಡಿಮೆಯಾಗುತ್ತಿದೆ ಎಂಬುದು ಅರಿವಾಗುತ್ತದೆ. ಇಂತಹ ಮಾರಕ ವಿಚಾರಗಳಿಗೆ ನಮ್ಮ ಸಮಾಜದಲ್ಲಿ ಬೇರು ಬಿಟ್ಟಿರುವ ವಿಷಮತೆಯೇ ಕಾರಣ ಎಂಬುದನ್ನು ಅರಿಯಬೇಕಿದೆ. ಈ ದಿಶೆಯಲ್ಲಿ ಆಳವಾಗಿ ಚಿಂತಿಸಲು ಆರಂಭಿಸಿದಾಗ ಚುನಾವಣೆಗಳನ್ನು ಹಣ-ಹೆಂಡ-ಸ್ವಜನ ಪಕ್ಷಪಾತಗಳಿಂದ ಮುಕ್ತವಾಗಿಸಿದರೆ ಮಾತ್ರ ಸಮಸ್ಯೆ ಗರಿಷ್ಠ ಪ್ರಮಾಣದಲ್ಲಿ ಕಡಿಮೆಯಾಗುವ ಸಾಧ್ಯತೆಯಿದೆ ಎನಿಸುತ್ತದೆ.
ಸಮಾಜ ತಲೆತಗ್ಗಿಸುವಂತಾಗಿದೆ :ಬದಲಾದ ದಿನಮಾನಗಳಲ್ಲಿ ಚಕ್ರ ಉರುಳುತ್ತಲೇ ಇರುತ್ತದೆ ಎಂಬುದನ್ನು ನಾವೆಲ್ಲರೂ ಹೊಸ ಭರವಸೆಯೊಂದಿಗೆ ಹಾಗೂ ನಿರೀಕ್ಷೆಗಳೊಂದಿಗೆ ಕನಸುಗಳನ್ನು ಕಟ್ಟಿಕೊಳ್ಳೋಣ. ಚಕ್ರ ಉರುಳಿದಂತೆ ಹಳಿತಪ್ಪಿದ ಗಾಲಿಯನ್ನು ಮತ್ತೆ ಹೊಸ ಉತ್ಸಾಹ-ಚೈತನ್ಯಗಳೊಂದಿಗೆ ಹಳಿಗೆ ತರೋಣ. ಯಾಕೆಂದರೆ, ಈ ದೇಶವನ್ನು ತ್ಯಾಗ, ಬಲಿದಾನಗಳಿಂದ,ನಿಸ್ವಾರ್ಥದಿಂದ ನಮ್ಮ ಪೂರ್ವಜರು ಕಟ್ಟಿದ್ದಾರೆ. ಅವುಗಳನ್ನು ನಿರರ್ಥಕ ಮಾಡುವುದು ಬೇಡ.
ಮಹಾತ್ಮ ಗಾಂಧೀಜಿಯವರು ಈ ದೇಶದಲ್ಲಿ ಮಧ್ಯರಾತ್ರಿ ಮಹಿಳೆಯರು ಸುರಕ್ಷಿತವಾಗಿ ಸಂಚರಿಸಿದಾಗ ಮಾತ್ರ ಈ ದೇಶಕ್ಕೆ ವಾಸ್ತವವಾಗಿ ಸ್ವಾತಂತ್ರ್ಯ ಬರುತ್ತದೆಂದು ತುಂಬಾ ಮಾರ್ಮಿಕವಾಗಿ ಹೇಳಿದ್ದರು. ಇಂದು ನಮ್ಮ ಸಮಾಜದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ಸಾಮೂಹಿಕ ಅತ್ಯಾಚಾರ, ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ನಾಗರಿಕ ಸಮಾಜದಲ್ಲಿ ಪ್ರತಿಯೊಬ್ಬರು ತಲೆತಗ್ಗಿಸುವಂತೆ ಮಾಡಿದೆ ಎಂದರು.
ಕಾನೂನು ರಚಿಸಲು ಸದನಕ್ಕೆ ಅಧಿಕಾರ ಇದೆ :ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷಿತ ವಾತಾವರಣ ಹಾಗೂ ಶಿಕ್ಷಣದ ಮೂಲಕ ಘನತೆಯ ಬದುಕಿಗೆ ಪೂರಕ ವಾತಾವರಣವನ್ನು ಕಲ್ಪಿಸಿಕೊಡುವುದು ಸದನಗಳಿಗೆ ಕಷ್ಟಸಾಧ್ಯವೇನಲ್ಲ. ಯಾಕೆಂದರೆ, ಸದನಗಳಿಗೆ ತಮ್ಮದೆ ಆದ ಮಹತ್ವವಿದೆ. ಸದನಗಳ ಮೌಲ್ಯಗಳ ಪರಿಧಿಯಲ್ಲಿಯೇ ಕಾನೂನುಗಳನ್ನು ರಚಿಸುವ ಹಾಗೂ ಬದಲಾಯಿಸುವ, ಮಾರ್ಪಾಡು ಮಾಡುವ ಹಾಗೂ ರದ್ದುಪಡಿಸುವ ಸರ್ವಸ್ವತಂತ್ರ ಅಧಿಕಾರ ಇದೆ. ಇದೊಂದು ಸಮಾಜವನ್ನು ಹೊಸ ದಿಕ್ಕಿನೆಡೆಗೆ ಕರೆದೊಯ್ಯಲು ಇರುವ ಮಂತ್ರದಂಡವೆಂದು ಅತ್ಯಂತ ಜವಾಬ್ದಾರಿಯಿಂದ ಆಲೋಚಿಸಬೇಕಾಗುತ್ತದೆ. ನಾವೆಲ್ಲರೂ ಹಾಗೆಯೇ ಚಿಂತಿಸೋಣ ಎನ್ನುವುದು ನನ್ನ ಅನಿಸಿಕೆ ಎಂದರು.
ಪಕ್ಷಬೇಧ ಮರೆತು ವಿಶ್ವಾಸಾರ್ಹತೆಯಿಂದ ವರ್ತಿಸಬೇಕು :ಈ ಸದನಕ್ಕೆ ನಾವೆಲ್ಲರೂ ಜಾತಿ, ಧರ್ಮ, ಲಿಂಗಗಳ ಬೇಧವಿಲ್ಲದೆ ಆರಿಸಿ ಬರುವ ಅವಕಾಶ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಕಲ್ಪಿಸಿಕೊಟ್ಟಿದೆ. ಇಲ್ಲಿ ವೈವಿಧ್ಯಮಯ ಹಿನ್ನೆಲೆಯ ಪ್ರತಿನಿಧಿಗಳು ಆಯ್ಕೆಯಾಗಿ ಬರುತ್ತಾರೆ. ಇಂತಹ ಪವಿತ್ರ ವಾತಾವರಣದಲ್ಲಿ ಜನರ ಬೇಕು-ಬೇಡಗಳ, ದುಃಖ-ದುಮ್ಮಾನಗಳನ್ನು ಆಲಿಸುವ, ಚರ್ಚಿಸುವ, ನಿರ್ವಹಿಸುವ ಔದಾರ್ಯ ತೋರಬೇಕಾಗಿದೆ.
ಪಕ್ಷಬೇಧ ಮರೆತು ಪರಸ್ಪರ ವಿಶ್ವಾಸಾರ್ಹತೆಯಿಂದ ವರ್ತಿಸಿ ಸದಸ್ಯರೆಲ್ಲರೂ ತಮ್ಮ ಅನುಭವ ಹಾಗೂ ಜ್ಞಾನಗಳನ್ನು ಧಾರೆಯೆರೆದು ನಿಸ್ವಾರ್ಥವಾದ ಜನಸೇವೆ ಮಾಡಬೇಕಾದುದು ಹಿಂದೆಗಿಂತಲೂ ಇಂದು ತುರ್ತು ಅಗತ್ಯ ಎಂಬುದನ್ನು ನಾವೆಲ್ಲರೂ ಮನವರಿಕೆ ಮಾಡಿಕೊಳ್ಳಬೇಕಿದೆ ಎಂದರು.