ಬೆಂಗಳೂರು: ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ್ದ ವೇಳೆ ಇಹಲೋಕ ತ್ಯಜಿಸಿದ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಪಾರ್ಥಿವ ಶರೀರದ ಅಂತಿಮ ದರ್ಶನ ನಡೆಯುತ್ತಿದೆ. ಮಲ್ಲೇಶ್ವರಂನಲ್ಲಿನ ಸ್ಪಂದನಾ ತಂದೆ ಬಿ.ಕೆ ಶಿವರಾಮ್ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಗಣ್ಯರು, ಸಾರ್ವಜನಿಕರು ಆಗಮಿಸುತ್ತಿದ್ದಾರೆ.
ದಿ.ಪುನೀತ್ ರಾಜ್ಕುಮಾರ್ ಪತ್ನಿ ಅಶ್ವಿನಿ ರಾಜ್ಕುಮಾರ್ ಹಾಗೂ ಕುಂಬಸ್ಥರು ಅಂತಿಮ ದರ್ಶನ ಪಡೆದರು. ಸ್ಪಂದನಾ ಮೃತದೇಹ ಕಂಡ ಅಶ್ವಿನಿ ಬಿಕ್ಕಿ ಬಿಕ್ಕಿ ಅತ್ತರು. ಹಿರಿಯ ನಟ ದೊಡ್ಡಣ, ನಿರ್ದೇಶಕ ತರುಣ್ ಸುಧೀರ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಅಂತಿಮ ದರ್ಶನ ಪಡೆದರು.
ಮಧ್ಯಾಹ್ನ ಒಂದೂವರೆ ಗಂಟೆಯ ನಂತರ ಹರಿಶ್ಚಂದ್ರ ಘಾಟ್ನಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ. 11 ದಿನಗಳ ಒಳಗೆ ವಿಧಿ ವಿಧಾನ ಪೂರ್ಣವಾಗಬೇಕು. ಗುರುಗಳು ಹೇಳಿದ ಹಾಗೇ ಕೆಲಸಗಳು ನಡೆಯಲಿವೆ ಎಂದು ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿ ಹೇಳಿದರು.
'ಬಹಳ ವರ್ಷ ಬದುಕಿ ಬಾಳಬೇಕಿತ್ತು. ಅವರ ಪತಿ ಖ್ಯಾತ ಸಿನಿಮಾ ನಟರು. ಬಹಳ ಸುಂದರ ಜೀವನ ನಡೆಸುತ್ತಿದ್ದರು. ಬಾಳಿನಲ್ಲಿ ಬೇಕಾದಷ್ಟು ನೋಡಬೇಕಿತ್ತು. ಥೈಲ್ಯಾಂಡ್ನಲ್ಲಿ ಮೃತಪಟ್ಟಿರುವುದು ಬಹಳ ನೋವು ತಂದಿದೆ. ಶಿವರಾಂ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ಕೊಡಲಿ, ಸ್ಪಂದನಾ ಆತ್ಮಕ್ಕೆ ಶಾಂತಿ ಸಿಗಲಿ' - ಮುಖ್ಯಮಂತ್ರಿ ಸಿದ್ದರಾಮಯ್ಯ.
'ಒಂದು ವಾರದ ಹಿಂದೆ ದಂಪತಿ ಬಂದು ನನ್ನನ್ನು ಭೇಟಿ ಮಾಡಿದ್ರು. ಅವರು ಅಭಿನಂದನೆ ಸಲ್ಲಿಸಲು ಬಂದಿದ್ರು. ಬಹಳ ಆರೋಗ್ಯಕರವಾಗಿಯೇ ಇದ್ದರು. ಅವರ ಕುಟುಂಬಸ್ಥರು ನಮಗೆ ಬಹಳ ಆತ್ಮೀಯರು. ಅಂತಿಮ ದರ್ಶನಕ್ಕೆ ಬರುತ್ತಿರುವ ಜನಸಾಗರ ನೋಡಿದ್ರೆ ಅವರನ್ನು ಜನ ಎಷ್ಟು ಇಷ್ಟಪಟ್ಟಿದ್ರು ಅನ್ನೋದು ಗೊತ್ತಾಗುತ್ತದೆ. ಇಷ್ಟು ಚಿಕ್ಕ ವಯಸ್ಸಿಗೇನೆ ಹೀಗಾಗಬಾರದಿತ್ತು. ವಿಜಯ್ ರಾಘವೇಂದ್ರ, ಕುಟುಂಬಸ್ಥರಿಗೆ ದೇವರು ದುಃಖ ಭರಿಸೋ ಶಕ್ತಿ ಕೊಡಲಿ. ಎಲ್ಲರೂ ಆರೋಗ್ಯದ ಬಗ್ಗೆ ಗಮನ ಕೊಡಿ' - ಡಿಸಿಎಂ ಡಿಕೆಶಿ.
'ಸ್ಪಂದನಾ ಕುಟುಂಬ ಎಲ್ಲರಿಗೂ ಪರಿಚಿತರಾಗಿದ್ದಾರೆ. ಆತ್ಮಿಯ ಸ್ನೇಹಿತರ ಸಹೋದರಿ ನಿಧನದಿಂದ ತುಂಬಾ ನೋವಾಗುತ್ತಿದೆ. ಅತ್ಯಂತ ಸಣ್ಣ ವಯಸ್ಸಿನಲ್ಲಿ ಅಕಾಲಿಕ ಮರಣ ಹೊಂದಿದ್ದಾರೆ. ಇದು ಅಕಾಲಿಕ ಸಾವು. ಚಿಕ್ಕ ವಯಸ್ಸಿನಲ್ಲಿ ಸಾವಾಗಿರುವುದು ತುಂಬಾ ಬೇಸರದ ಸಂಗತಿ. ಅವರ ಸಹೋದರ ಹಾಗೂ ತಂದೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡವರು. ಸ್ಪಂದನಾ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಬಂಧು ಬಳಗಕ್ಕು ದೇವರು ದುಖಃ ಭರಿಸುವ ಶಕ್ತಿ ನೀಡಲಿ"- ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್.
''ಬಿ.ಕೆ ಶಿವರಾಮ್ ಪೊಲೀಸ್ ಅಧಿಕಾರಿಯಾಗಿ ನಮ್ಮ ಜಯನಗರ ಕ್ಷೇತ್ರದಲ್ಲಿಯೂ ಸಹ ಕೆಲಸ ಮಾಡಿದ್ದಾರೆ. ಆಗಿನಿಂದಲು ಸಹ ನಮಗೆ ಆಪ್ತರು. ಶಿವರಾಮ್ ಅವರ ಮಗಳು ಚಿಕ್ಕ ವಯಸ್ಸಿನಲ್ಲಿಯೇ ಅಗಲಿದ್ದಾರೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ''- ಸಚಿವ ರಾಮಲಿಂಗಾರೆಡ್ಡಿ
ಸ್ಪಂದನಾ ಪಾರ್ಥಿವ ಶರೀರದ ಅಂತಿಮ ದರ್ಶನದ ಭಾವುಕ ಕ್ಷಣಗಳು