ಆನೇಕಲ್: ಚಂದಾಪುರದ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಎಸ್ಪಿ ಆನೇಕಲ್(ಬೆಂಗಳೂರು): ಚಂದಾಪುರ ಭಾಗದಲ್ಲಿ ಸಂಚಾರ ದಟ್ಟಣೆ, ಅಂಗಡಿ ಮುಂಗಟ್ಟುಗಳಿಂದ ಪಾದಚಾರಿ ಮಾರ್ಗ ಒತ್ತುವರಿ, ವ್ಯಾಪಾರ ವಹಿವಾಟು ನಿರ್ವಹಣೆ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಪೊಲೀಸರು ಮಂಗಳವಾರ ಪರಿಶೀಲನೆ ನಡೆಸಿದ್ದಾರೆ.
ರಾತ್ರಿ ಚಂದಾಪುರ ಹೆದ್ದಾರಿ ವೃತ್ತ ಹಾಗು ರಾಮಸಾಗರ-ಅತ್ತಿಬೆಲೆ-ಹೆಬ್ಬಗೋಡಿ ಮತ್ತು ಆನೇಕಲ್ ರಸ್ತೆಗಳಲ್ಲಿನ ವಿವಿಧ ಅಂಗಡಿಗಳಿಗೆ ತೆರಳಿ ಖುದ್ದು ಪರಿಶೀಲಿಸಿದರು. ಮೊಬೈಲ್ ಶಾಪ್, ಮಾರ್ವಾಡಿಗಳ ಜ್ಯುವೆಲ್ಲರಿ ಶಾಪ್ಗಳು, ಲಾಡ್ಜ್‌ಗಳಿಗೆ ಭೇಟಿ ಕೊಟ್ಟರು. ರಸ್ತೆಬದಿ ಅಂಗಡಿ ಮುಂದೆ ಕಡ್ಡಾಯ ಸಿಸಿ ಕ್ಯಾಮೆರಾ ಅಳವಡಿಸಬೇಕೆಂದು ಸೂಚಿಸಿದರು. ರಸ್ತೆ ಬದಿ ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಚಂದಾಪುರದಲ್ಲಿ ವಾಹನ ಸಂಚಾರ ದಟ್ಟಣೆ, ಅಕ್ರಮ ಜಾಹಿರಾತು ಫಲಕ ಸೇರಿದಂತೆ ಹಲವು ಸಮಸ್ಯೆಗಳಿವೆ. ಇವುಗಳನ್ನು ಸಂಬಂಧಪಟ್ಟ ಇಲಾಖೆಗಳ ಸಹಕಾರದಲ್ಲಿ ಪರಿಹಾರ ಕಲ್ಪಿಸಲಾಗುವುದು. ಈ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆಗಳಾಗಬೇಕಿದೆ. ಬೀದಿಬದಿ ವ್ಯಾಪಾರಿಗಳು ರಸ್ತೆಯನ್ನು ಒತ್ತುವರಿ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಈ ಕುರಿತು ನಿಗಾ ವಹಿಸಲಾಗುವುದು ಎಂದರು.
ವಾಹನ ನಿಲುಗಡೆಗೆ ಸಮರ್ಪಕ ಸ್ಥಳವಿಲ್ಲದೆ ರಸ್ತೆಬದಿ ಎಲ್ಲೆಂದರಲ್ಲಿ ನಿಲ್ಲಿಸಲಾಗುತ್ತಿದೆ. ಇದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಪೇ ಆ್ಯಂಡ್ ಪಾರ್ಕ್ ವ್ಯವಸ್ಥೆಗೆ ಯೋಜನೆ ರೂಪಿಸಲಾಗುವುದು. ಚಂದಾಪುರದಲ್ಲಿ ಸಂಚಾರ ದಟ್ಟನೆ ನಿವಾರಣೆ ಸಂಬಂಧ ಸಂಚಾರಿ ಪೊಲೀಸ್ ಠಾಣೆ ಅತ್ಯವಶ್ಯಕ. ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಠಾಣೆ ಬಿಟ್ಟರೆ ಅತ್ತಿಬೆಲೆವರೆಗೂ ಸಂಚಾರಿ ಠಾಣೆಯಿಲ್ಲ. ಈ ಬಗ್ಗೆ ನಮ್ಮ ಇಲಾಖೆಗೆ ಪ್ರಸ್ತಾವನೆ ಕಳುಹಿಸಿದ್ದೇವೆ ಎಂದು ತಿಳಿಸಿದರು.
ಸಾರ್ವಜನಿಕ ರಕ್ಷಣಾ ಕಾಯಿದೆಯಡಿ ಸಿಸಿ ಕ್ಯಾಮೆರಾ ಅಳವಡಿಸಲು ಆಯಾ ಇನ್ಸ್ಪೆಕ್ಟರ್ ಹಾಗು ಡಿವೈಎಸ್ಪಿಗೆ ಅಧಿಕಾರವಿದೆ. ಪುರಸಭೆಯನ್ನು ಸಂಪರ್ಕಿಸಿ ಸಂಬಂಧಪಟ್ಟವರಿಗೆ ನೋಟಿಸ್ ನೀಡಲು ಕ್ರಮ ವಹಿಸಲಾಗುವುದು. ಪ್ರತಿ ಅಂಗಡಿಗಳ ಒಳಗೆ ಹಾಗು ಹೊರಗೆ, ರಸ್ತೆ ಜನನಿಬಿಡ ಪ್ರದೇಶಗಳು ಜನ ಸೇರುವ ಜಾಗದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು. ಈಗಾಗಲೇ ಮೇಲ್ದರ್ಜೆಗೇರಿಸಿರುವ ಠಾಣೆಗಳ ಪೈಕಿ 17 ಠಾಣೆಗಳಲ್ಲಿ ಸಿಬ್ಬಂದಿ ಕೊರತೆ ಸಂಬಂಧ ಕ್ರಮ ವಹಿಸಲು ಶಿಫಾರಸು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ಚಿಕ್ಕಮಗಳೂರು: ಲಾರಿ-ಬೈಕ್ ಅಪಘಾತ, ಸವಾರ ಸ್ಥಳದಲ್ಲೇ ಸಾವು