ಬೆಂಗಳೂರು: ಎಸ್.ಪಿ.ಬಾಲಸುಬ್ರಹ್ಮಣ್ಯಂ ಎದ್ದು ಬರುತ್ತಾರೆ ಎಂದು ಕಾಯ್ತಾ ಇದ್ದೆ. ನಿನ್ನೆ ಮೊನ್ನೆ ಮಾತನಾಡಲು ಸಾಧ್ಯವಾಗಲಿಲ್ಲ. ಇವತ್ತು ತುಂಬಾ ಸಮಾಧಾನ ಮಾಡಿಕೊಂಡು ಮಾತನಾಡುತ್ತಿದ್ದೇನೆ ಎಂದು ಹಿರಿಯ ಗಾಯಕಿ ಎಸ್.ಜಾನಕಿ ಎಸ್‌ಪಿಬಿ ನೆನೆದು ಕಣ್ಣೀರು ಹಾಕಿದ್ದಾರೆ.
ಎಸ್‌ಪಿಬಿ ನಿಧನಕ್ಕೆ ಕನ್ನಡದಲ್ಲಿ ಮಾತನಾಡಿ ಕಣ್ಣೀರು ಹಾಕಿದ ಹಿರಿಯ ಗಾಯಕಿ ಎಸ್.ಜಾನಕಿ
ಸಂಗೀತದ ದೊಡ್ಡ ಖಜಾನೆಯನ್ನು ಬಿಟ್ಟು ನಡೆದ ಸ್ವರ ಸಾಮ್ರಾಟ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರನ್ನು ನೆನೆದು ಹಿರಿಯ ಗಾಯಕಿ ಎಸ್.ಜಾನಕಿ ಕಣ್ಣೀರು ಹಾಕಿದ್ದಾರೆ.
ಕನ್ನಡದಲ್ಲಿಯೇ ಎಸ್‌ಪಿಬಿ ಅವರೊಂದಿಗಿನ ಬಾಂಧವ್ಯದ ಬಗ್ಗೆ ವಿವರಿಸಿರುವುದು ವಿಶೇಷ. ಎಂಜಿನಿಯರ್ ಆಗಬೇಕಿದ್ದ ಬಾಲು ಗಾಯಕರಾಗಿ ಸಂಗೀತ ಲೋಕವನ್ನು ಆಳಿದ್ದು ಜಾನಕಿಯವರ ಆ ಒಂದು ಮಾತಿನಿಂದ. 16 ವರ್ಷಕ್ಕೆ ಸಂಗೀತ ಅಭ್ಯಾಸ ಶುರು ಮಾಡಿದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಎಂಜಿನಿಯರ್ ಆಗಬೇಕಿತ್ತು. ಆದರೆ ಗಾಯಕಿ ಜಾನಕಿ ಅವರು ಹೇಳಿದ ಆ ಮಾತುಗಳಿಂದ ಎಸ್‌ಪಿಬಿ ಗಾಯನವನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡರು.
ಎಸ್‌ಪಿಬಿ ತಮಗೆ ಪರಿಚಯವಾದ ರೀತಿ ಜತೆಗೆ ಒಟ್ಟಿಗೆ ಸಾವಿರಾರು ಡುಯೆಟ್ ಹಾಡುಗಳನ್ನು ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿಯಲ್ಲಿ ಹಾಡುಗಳನ್ನು ಹಾಡಿದ್ದೇವೆ ಎಂದು ಎಸ್.ಜಾನಕಿ ವಿವರಿಸಿದ್ದಾರೆ. ನಾವಿಬ್ಬರು ಫ್ರೆಂಡ್ಸ್. ಜಗಳ ಆಡಿದ್ದೇವೆ. ಆದರೂ ನಾವಿಬ್ಬರು ಒಳ್ಳೆಯ ಸ್ನೇಹಿತರು. ಮೂರು ತಿಂಗಳ ಹಿಂದೆ ಮೈಸೂರಿನಲ್ಲಿ ಕಾರ್ಯಕ್ರಮ ನೀಡಿದ್ದರು. ಅದೇ ಅವರ ಕೊನೆಯ ಕಾರ್ಯಕ್ರಮ. ನಾನು ಮೈಸೂರಿನಲ್ಲೇ ಕೊನೆಯ ಕಾರ್ಯಕ್ರಮ ನೀಡಿದ್ದೇನೆ. ಈಗ ಅವರನ್ನು ಕಳೆದುಕೊಂಡು ತುಂಬಾ ಮನಸ್ಸಿಗೆ ನೋವಾಗುತ್ತಿದೆ ಎಂದು ಕಣ್ಣೀರಿಟ್ಟಿದ್ದಾರೆ.