ಬೆಂಗಳೂರು:ರಾಜ್ಯದಲ್ಲಿ ನಿರೀಕ್ಷೆಗಿಂತ ಹೆಚ್ಚು ಹಿಂಗಾರು ಮಳೆಯಾಗುತ್ತಿದ್ದು, ಈಗಾಗಲೇ ಸುಮಾರು ಶೇ. 15ರಷ್ಟು ಹಿಂಗಾರು ಬಿತ್ತನೆ ಪೂರ್ಣಗೊಂಡಿದೆ. ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆ ಉತ್ತಮವಾಗಿರುವುದರಿಂದ ನಿಗದಿಗಿಂತ ಹೆಚ್ಚು ಪ್ರಮಾಣದಲ್ಲಿ ಬಿತ್ತನೆಯಾಗಿದೆ. ಒಟ್ಟು 77 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಸರ್ಕಾರ ಹೊಂದಿತ್ತು. ಆದರೆ, 78.20 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ.
ವಾರ್ಷಿಕ ಹಿಂಗಾರು ಬಿತ್ತನೆ ಗುರಿಯನ್ನು 28 ಲಕ್ಷ ಹೆಕ್ಟೇರ್ ಎಂದು ಅಂದಾಜಿಸಲಾಗಿದೆ. ದಕ್ಷಿಣ ಒಳನಾಡಿನ ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು ಹಾಗೂ ಕರಾವಳಿ ಪ್ರದೇಶದಲ್ಲಿ ಬಿತ್ತನೆ ಚಟುವಟಿಕೆ ಕಾರ್ಯ ಚುರುಕುಗೊಂಡಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮುಂಗಾರು ಬೆಳೆಗಳ ಕಟಾವು ಮತ್ತು ಒಕ್ಕಲು ಕಾರ್ಯ ಚುರುಕಾಗಿ ನಡೆಯುತ್ತಿದ್ದು, ಈ ತಿಂಗಳಾಂತ್ಯದ ವೇಳೆಗೆ ಬಿತ್ತನೆ ಚಟುವಟಿಕೆ ಕಾರ್ಯಕ್ಕೆ ವೇಗ ಸಿಗಲಿದೆ. ಹಿಂಗಾರು ಬಿತ್ತನೆ ಸರ್ಕಾರ ನಿಗದಿಪಡಿಸಿರುವುದಕ್ಕಿಂತ ಸುಮಾರು 5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಫಸಲು ಕೈಸೇರುವ ಹಂತದಲ್ಲಿ ಮಳೆ:
ಅಗತ್ಯಕ್ಕೆ ತಕ್ಕಂತೆ ಮಳೆ ಸುರಿದಿದ್ದರಿಂದ ನಿಗದಿತ ಗುರಿಗಿಂತ ಅಧಿಕ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಈಗ ಮುಂಗಾರಿನಲ್ಲಿ ಬಿತ್ತನೆಯಾಗಿದ್ದ ಭತ್ತ, ರಾಗಿ, ಜೋಳ ಕಟಾವಿಗೆ ಬಂದಿದ್ದು, ಕೆಲದಿನಗಳಲ್ಲೇ ಒಕ್ಕಣೆ ಕಾರ್ಯ ಪ್ರಾರಂಭವಾಗಬೇಕಿದೆ. ಇನ್ನೊಂದೆಡೆ ಅಕ್ಟೋಬರ್ ತಿಂಗಳ ದಾಖಲೆ ಮಳೆಯಿಂದಾಗಿ ಫಸಲು ಕೈಸೇರುವ ಹಂತದಲ್ಲಿ ರೈತರು ಕಂಗಾಲಾಗಿದ್ದಾರೆ. ಆದರೆ ಬಿತ್ತನೆ ಚಟುವಟಿಕೆಗಳಿಗೆ ಹಿಂಗಾರು ಮಳೆ ಪೂರಕವಾಗಿದ್ದು, ಬಿರುಸಿನಿಂದ ಕೃಷಿ ಚಟುವಟಿಕೆ ಕಾರ್ಯ ನಡೆಯುತ್ತಿದೆ.
ದಾವಣಗೆರೆ, ಬಾಗಲಕೋಟೆ, ವಿಜಾಪುರ, ಕಲಬುರಗಿ, ಕೊಪ್ಪಳ, ಹಾವೇರಿ, ಧಾರವಾಡ, ಬೀದರ್, ಗದಗ, ಬೆಳಗಾವಿ ಸೇರಿದಂತೆ ಬಹುತೇಕ ಉತ್ತರ ಕರ್ನಾಟಕ ಭಾಗದಲ್ಲಿ ಹತ್ತಿ, ಜೋಳ, ಮೆಕ್ಕೆಜೋಳ, ಗೋಧಿ, ಸೋಯಾಬೀನ್, ಶೇಂಗಾ, ಕಡಲೆ, ಹುರುಳಿ, ಅಲಸಂದಿ, ಈರುಳ್ಳಿ ಬೆಳೆಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಹಾಸನ, ಮೈಸೂರು, ಮಂಡ್ಯ, ತುಮಕೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಶುಂಠಿ, ಮೆಣಸು, ಅಡಿಕೆ, ಕಾಫಿ, ಭತ್ತ, ರಾಗಿ, ಕಬ್ಬು ಹೆಚ್ಚಾಗಿ ಬೆಳೆಯಲಾಗುತ್ತದೆ.