ಬೆಂಗಳೂರು:ನೈರುತ್ಯ ಮುಂಗಾರು ಮಳೆ ವಿಳಂಬವಾಗಿದ್ದು ಜೂನ್ 2ನೇ ವಾರದಲ್ಲಿ ರಾಜ್ಯ ಪ್ರವೇಶಿಸುವ ನಿರೀಕ್ಷೆ ಇದೆ. ಇನ್ನೊಂದೆಡೆ, ಅನ್ನದಾತರು ಬಿತ್ತನೆಗೆ ಜಮೀನು ಸಿದ್ಧಪಡಿಸುವಲ್ಲಿ ನಿರತರಾಗಿದ್ದು, ಕೃಷಿ ಚಟುವಟಿಕೆಯೂ ಚುರುಕುಗೊಂಡಿದೆ.
ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ರಾಗಿ, ಹೆಸರು, ಸಜ್ಜೆ, ಮೆಕ್ಕೆಜೋಳ, ತೊಗರಿ, ಎಳ್ಳು, ಸೂರ್ಯಕಾಂತಿ, ಹೈಬ್ರೀಡ್ ಜೋಳದ ಬೀಜಗಳ ಬಿತ್ತನೆಯಾಗಲಿದ್ದು, ಒಣಬೇಸಾಯ ಹಾಗೂ ಮಳೆಯಾಶ್ರಿತ ಪ್ರದೇಶದ ರೈತರು ಮಳೆಗಾಗಿ ಕಾಯುತ್ತಿದ್ದಾರೆ. ಜೂನ್ ಮೊದಲ ವಾರದಲ್ಲಿ ಮಳೆ ಬರುವ ಮುನ್ಸೂಚನೆ ಬಂದಿದ್ದು ಬಿಸಿಲೂರು ಜಿಲ್ಲೆಗಳ ರೈತರು ಬಿತ್ತನೆಯ ಸಿದ್ಧತೆಯಲ್ಲಿದ್ದಾರೆ. ಮನೆಯ ಮೂಲೆಯಲ್ಲಿ, ಗುಡಿಸಿಲಿನೊಳಗೆ ಬಿದ್ದಿರುವ ನೇಗಿಲು ಮತ್ತು ಬಿತ್ತನೆಗೆ ಬಳಸುವ ಇತರೆ ಸಾಮಗ್ರಿಗಳನ್ನು ಹೊರ ತೆಗೆದು ಸ್ವಚ್ಛಗೊಳಿಸಿ, ಪೂಜೆ ಮಾಡುವುದರ ಜೊತೆಗೆ ಎತ್ತುಗಳನ್ನು ಸಹ ಶುಭ್ರವಾಗಿ ತೊಳೆದು ನಮಸ್ಕರಿಸಿ ಜಮೀನು ಹದಗೊಳಿಸುತ್ತಿದ್ದಾರೆ.
ಮಳೆ ವಿಳಂಬ ಆತಂಕ:ಮುಂಗಾರು ಹಂಗಾಮಿನ ವಿವಿಧ ಬೆಳೆಗಳ ಬಿತ್ತನೆಗೆ ರೈತರು ಭೂಮಿ ಹದ ಮಾಡುತ್ತಿದ್ದಾರೆ. ಆದರೆ ಮಳೆಯಾಟ ರೈತ ಸಮುದಾಯದಲ್ಲಿ ಆತಂಕ ಉಂಟುಮಾಡಿದೆ. ಇನ್ನೂ ಕೆಲವು ರೈತರು ಮುಂಗಾರು ಬೆಳೆಯ ಬಿತ್ತನೆಗಾಗಿ ಜಮೀನು ಸಿದ್ಧಗೊಳಿಸಲು ಮಳೆಯ ನಿರೀಕ್ಷೆಯಲ್ಲಿದ್ದಾರೆ. ಜೂನ್ ಮೊದಲ ವಾರದಲ್ಲೇ ಮಳೆ ರಾಜ್ಯಕ್ಕೆ ಆಗಮಿಸುವುದು ವಾಡಿಕೆ. ಆದರೆ, ಈ ಸಲ ಒಂದು ವಾರಕ್ಕೂ ಹೆಚ್ಚು ಕಾಲ ವಿಳಂಬವಾಗುವ ಸಾಧ್ಯತೆ ಗೋಚರಿಸಿದೆ.
ಸಾಮಾನ್ಯವಾಗಿ ಜೂನ್ ಮೊದಲ ವಾರದ ವೇಳೆಗೆ ಮುಂಗಾರು ಕೇರಳ ಪ್ರವೇಶಿಸುತ್ತದೆ. ಆ ಮೂಲಕ ಕರ್ನಾಟಕದ ಮೂಲಕ ಮಹಾರಾಷ್ಟ್ರ, ರಾಜಸ್ಥಾನದ ಕಡೆಗೆ ಹಾದು ಹೋಗುತ್ತಿತ್ತು. ಆದರೆ, ಪ್ರಸ್ತುತ ವರ್ಷ ಇನ್ನೂ ಮಳೆ ಕೇರಳ ಪ್ರವೇಶ ಮಾಡಿರುವ ಬಗ್ಗೆ ದೃಢಪಟ್ಟಿಲ್ಲ. ಹಾಗಾಗಿ ಜೂನ್ 5ರ ವೇಳೆಗೆ ಪ್ರಾರಂಭವಾಗುತ್ತದೆ ಎಂದು ಹೇಳಲಾಗುತ್ತಿತ್ತು. ಇದುವರೆಗೂ ಕೇರಳವನ್ನು ನೈರುತ್ಯ ಮುಂಗಾರು ಪ್ರವೇಶಿಸಿಲ್ಲ. ಮುಂಗಾರು ಆಗಮನದ ಘೋಷಣೆ ಮಾಡುವಂತಹ ಮಳೆಯೂ ಆಗುತ್ತಿಲ್ಲ. ಹೀಗಾಗಿ ಆರಂಭದಲ್ಲೇ ದುರ್ಬಲಗೊಂಡಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ.
ಮಳೆ ಅಬ್ಬರ ಎಲ್ಲೂ ಕಂಡುಬರುತ್ತಿಲ್ಲ. ಜೂ. 10ರ ನಂತರ ಮುಂಗಾರು ರಾಜ್ಯದಲ್ಲಿ ಆರಂಭವಾಗುವ ಮುನ್ಸೂಚನೆಗಳಿವೆ. ಎರಡನೇ ವಾರದಲ್ಲಿ ಕರಾವಳಿ ಭಾಗದಲ್ಲಿ ಮಳೆ ಸುರಿಯಲಿದೆ. ರಾಜ್ಯದ ಒಳನಾಡಿನಲ್ಲಿ ಸಾಧಾರಣ ಮಳೆಯಾಗಲಿದೆ. ಹೀಗಾಗಿ ಮುಂಗಾರು ಆಗಮನವೇ ದುರ್ಬಲವಾಗುತ್ತಿದೆ ಎಂದು ಹಾವಾಮಾನ ತಜ್ಞರು ತಿಳಿಸಿದ್ದಾರೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ನಿರ್ಮಾಣವಾಗುತ್ತಿದ್ದು, ಅದು ತೇವಾಂಶವನ್ನು ಸೆಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಿದ್ದು ಮುಂಗಾರು ಚೇತರಿಕೆ ಲಕ್ಷಣಗಳು ವಿರಳ. ಇನ್ನೊಂದೆಡೆ, ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಅಲ್ಲಲ್ಲಿ ಚದುರಿದಂತೆ ಆಗುತ್ತಿದೆ. ಇದೇ ರೀತಿ ಮುಂದುವರೆಯುವ ಸಾಧ್ಯತೆಗಳಿದ್ದು, ಮಳೆಯಾದರೂ ಅತ್ಯಲ್ಪ ಪ್ರಮಾಣದ ಆಗಲಿದೆ. ನೈರುತ್ಯ ದಿಕ್ಕಿನಿಂದ ಗಾಳಿ ಬೀಸಲಾರಂಭಿಸಿದರೂ ನಿರೀಕ್ಷಿತ ಪ್ರಮಾಣದ ಮಳೆಯಾಗದಿರುವ ಹಿನ್ನೆಲೆಯಲ್ಲಿ ಮುಂಗಾರು ದುರ್ಬಲಗೊಂಡಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಇದನ್ನೂ ಓದಿ:ಡಿಸಿಎಂ ಡಿಕೆಶಿ ನೇತೃತ್ವದಲ್ಲಿ ಸರ್ವಪಕ್ಷ ಶಾಸಕರ ಸಭೆ: ಅಸಮಾಧಾನಿತ ಎಂ.ಕೃಷ್ಣಪ್ಪ, ಪ್ರಿಯಾ ಕೃಷ್ಣ ಗೈರು