ಬೆಂಗಳೂರು : ನೈಋತ್ಯ ರೈಲ್ವೆ ಸಿಬ್ಬಂದಿ ವಿಶೇಷ ತಪಾಸಣೆ ಕಾರ್ಯಾಚರಣೆಯನ್ನು ನಡೆಸುವ ಮೂಲಕ ಟಿಕೆಟ್ ಇಲ್ಲದೇ ಪ್ರಯಾಣಿಸುವವರಿಗೆ ದಂಡದ ಶಿಕ್ಷೆಯನ್ನು ನೀಡಿದೆ. ಈ ಬಗ್ಗೆ ಮಾಹಿತಿ ನೀಡಿರುವಂತಹ ನೈರುತ್ಯ ರೈಲ್ವೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ನಿಯಮಿತ ತಪಾಸಣೆಯ ಹೊರತಾಗಿ ವಿಶೇಷ ಟಿಕೆಟ್ ತಪಾಸಣೆ ಕಾರ್ಯಾಚರಣೆಗಳನ್ನು ಆಯೋಜಿಸುತ್ತದೆ ಎಂದು ಹೇಳಿದೆ. ವಿಶೇಷ ಟಿಕೆಟ್ ತಪಾಸಣೆ ಕಾರ್ಯಾಚರಣೆಯ ಭಾಗವಾಗಿ ಬೆಂಗಳೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ಯಾಮ್ ಸಿಂಗ್ ಮಾರ್ಗದರ್ಶನದಲ್ಲಿ ಬೆಂಗಳೂರು ಮೈಸೂರು ವಿಭಾಗದಲ್ಲಿ ಹೊಂಚುದಾಳಿ ತಪಾಸಣೆಯನ್ನು ಆಯೋಜಿಸಲಾಗಿತ್ತು ಎಂದಿದೆ.
ಬೆಂಗಳೂರು-ಮೈಸೂರು ಮಾರ್ಗದಲ್ಲಿ ತಪಾಸಣೆ : ರೈಲು ನಂ 12616 ಚಾಮುಂಡಿ ಎಕ್ಸ್‌ಪ್ರೆಸ್, ರೈಲು ನಂ 06255 ಬೆಂಗಳೂರು-ಮೈಸೂರು ಮೇಮು ಮತ್ತು 16592 ಹಂಪಿ ಎಕ್ಸ್ಪ್ರೆಸ್ಗಳಲ್ಲಿ ತಪಾಸಣೆ ನಡೆಸಲಾಯಿತು ಎಂದು ಹೇಳಿದೆ.
40,360 ರೂ ದಂಡ : ಈ ದಾಳಿ ಸಂದರ್ಭದಲ್ಲಿ 28 ಸಿಬ್ಬಂದಿಯನ್ನು ತಪಾಸಣೆಗಾಗಿ ನಿಯೋಜಿಸಲಾಗಿತ್ತು. ಅಧಿಕೃತ ಟಿಕೆಟ್‌ಗಳಿಲ್ಲದೇ ಮತ್ತು ಕಾಯ್ದಿರಿಸದ ಸಾಮಗ್ರಿಗಳೊಂದಿಗೆ ಪ್ರಯಾಣಿಸಿದ 137 ಪ್ರಯಾಣಿಕರನ್ನು ಗುರುತಿಸಿ ಅವರಿಂದ ರೂ. 40,360/- (ನಲವತ್ತು ಸಾವಿರದ ಮುನ್ನೂರ ಅರವತ್ತು ರೂಪಾಯಿಗಳು) ದಂಡವನ್ನು ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದೆ.
ಹುಬ್ಬಳ್ಳಿ- ಬನಾರಸ್ ನಡುವೆ ಬೇಸಿಗೆಯ ವಿಶೇಷ ರೈಲು: ಇನ್ನೊಂದೆಡೆ ಬೇಸಿಗೆ ರಜೆಯ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಕಡಿಮೆಗೊಳಿಸಲು ಒಂದು ಟ್ರಿಪ್ ಬೇಡಿಕೆಯ ಮೇರೆಗೆ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ಬನಾರಸ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು (07347 ಮತ್ತು 07348) ಓಡಿಸಲು ನೈಋತ್ಯ ರೈಲ್ವೆ ವಲಯವು ನಿರ್ಧರಿಸಿದೆ.