ಬೆಂಗಳೂರು:ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಹಿನ್ನೆಲೆಯಲ್ಲಿ ಸಿಎಬಿ ಸಂಬಂಧ ಜನರಿಗೆ ಇರುವ ತಪ್ಪು ಮಾಹಿತಿಯನ್ನು ಹೋಗಲಾಡಿಸುವ ಕುರಿತು ಬಿಜೆಪಿ ಹೈಕಮಾಂಡ್ ನಿರ್ದೇಶನದ ಮೇರೆಗೆ ಬೆಂಗಳೂರಿನಲ್ಲಿ ಬಿಜೆಪಿ ದಕ್ಷಿಣ ಭಾರತ ಮಟ್ಟದ ಕಾರ್ಯಾಗಾರ ನಡೆಸಲಾಯಿತು.
ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಪಾಂಡಿಚೇರಿ, ಲಕ್ಷದ್ವೀಪಗಳ ಬಿಜೆಪಿ ಮುಖಂಡರು ಭಾಗಿಯಾಗಿದ್ದರು.
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ರಾಷ್ಟ್ರೀಯ ಉಪಾಧ್ಯಕ್ಷ ವಿನಯ್ ಸಹಸ್ರಬುದ್ದೆ, ರಾಷ್ಟ್ರೀಯ ವಕ್ತಾರ ಜಿವಿಎಲ್ ನರಸಿಂಹರಾವ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳು, ಸಂಘಟನಾ ಪ್ರಧಾನ ಕಾರ್ಯದರ್ಶಿಗಳು, ಆಯ್ದ ಸಂಸದರು ಸೇರಿದಂತೆ 60 ಮುಖಂಡರು ಭಾಗಿಯಾಗಿದ್ದರು.
ಸಿಎಬಿ ಬಗ್ಗೆ ಜನಾಭಿಪ್ರಾಯ ಮೂಡಿಸುವ ಹಿನ್ನೆಲೆಯಲ್ಲಿ ಕಾರ್ಯಾಗಾರ ನಡೆಸಿದ್ದು ಜನರಲ್ಲಿನ ತಪ್ಪು ಕಲ್ಪನೆ ಸರಿಪಡಿಸಲು ಯಾವೆಲ್ಲಾ ಹೆಜ್ಜೆ ಇಡಬೇಕು ಎನ್ನುವ ಕುರಿತು ಸಭೆಯಲ್ಲಿ ಮಾಹಿತಿ ನೀಡಲಾಯಿತು.
ಸಭೆ ನಂತರ ಮಾತನಾಡಿದ ರಾಷ್ಟ್ರೀಯ ಉಪಾಧ್ಯಕ್ಷ ವಿನಯ್ ಸಹಸ್ರಬುದ್ದೆ, ಪೌರತ್ವ ಕಾಯ್ದೆ ವಿಷಯದಲ್ಲಿ ಕೆಲವು ಸಮಾಜಘಾತುಕ ಶಕ್ತಿಗಳು ಅನಗತ್ಯ ವದಂತಿ ಹರಡುತ್ತಿದ್ದು ಹಿಂಸಾಚಾರಕ್ಕೆ ಕಾರಣವಾಗಿದೆ. ಹಾಗಾಗಿಯೇ ನಾವು ಮುಂದಿನ ಕೆಲವು ತಿಂಗಳ ಕಾಲ ಈ ಗೊಂದಲ ನಿವಾರಣೆಯ ಪ್ರಯತ್ನ ಮಾಡುತ್ತಿದ್ದೇವೆ. ರಾಷ್ಟ್ರವ್ಯಾಪಿ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ರಾಷ್ಟ್ರೀಯ ಪೌರತ್ವ ಕಾಯ್ದೆ ಸ್ವಾತಂತ್ರ್ಯ ಸಂಗ್ರಾಮದೊಂದಿಗೆ ಸೇರಿರುವಂತಹದ್ದು. ನೆಹರು-ಲಿಯಾಕತ್ ಒಪ್ಪಂದದಲ್ಲೇ ಇದು ಉಲ್ಲೇಖಿತವಾಗಿತ್ತು. ಭಾರತ ಒಪ್ಪಂದದಂತೆ ನಡೆದುಕೊಂಡರೆ, ಪಾಕಿಸ್ತಾನ ವಚನ ಭ್ರಷ್ಟವಾಯ್ತು. ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಲಿಲ್ಲ. ಆಗ ಸಾಧ್ಯವಾಗದ ಹಲವು ಅಂಶಗಳನ್ನು ಸೇರಿಸಿಕೊಂಡು ಈಗ ರಾಷ್ಡ್ರೀಯ ಪೌರತ್ವ ಕಾಯ್ದೆಯ ಮೂಲಕ ಪೂರ್ಣಗೊಳಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.