ಬೆಂಗಳೂರು: ಎರಡು ದಿನದ ಹಸುಗೂಸು ಕಳ್ಳತನವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯಲ್ಲಿ ಭದ್ರತಾ ಲೋಪ ಕಂಡುಬಂದ ಹಿನ್ನೆಲೆ ದಕ್ಷಿಣ ವಿಭಾಗ ಡಿಸಿಪಿ ಹರೀಶ್ ಪಾಂಡೆ ಆಸ್ಪತ್ರೆ ವಿರುದ್ಧ ನೋಟಿಸ್ ಜಾರಿ ಮಾಡಿದ್ದಾರೆ.
ಆಸ್ಪತ್ರೆಯಲ್ಲಿ 12 ಸಿಸಿಟಿವಿಗಳಿವೆ. ಇದರಲ್ಲಿ 10 ಕಾರ್ಯ ನಿರ್ವಹಿಸುತ್ತಿಲ್ಲ, ಮಗು ನಾಪತ್ತೆಯಾದ ಸಂದರ್ಭದಲ್ಲಿ ಯಾರೆಲ್ಲ ಇದ್ದರು. ಮಗುವನ್ನು ಬಂದು ಕೇಳಿದಾಗ ಯಾವುದೇ ಮಾಹಿತಿ ಪಡೆಯದೇ ಹೇಗೆ ಅವರ ಕೈಗೆ ನೀಡಿದ್ದಾರೆ ಎಂಬ ಪ್ರಶ್ನೆಗಳಿಗೆ ಉತ್ತರಿಸುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
ಈ ಹಿಂದೆ ಕೂಡ ವಾಣಿ ವಿಲಾಸ್ ಆಸ್ಪತ್ರೆಯ ವ್ಯವಸ್ಥೆ ಬಗ್ಗೆ ಉತ್ತರ ನೀಡುವಂತೆ ಆಸ್ಪತ್ರೆಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಈ ವೇಳೆ, ಮೆಟ್ರೋ ಕಾಮಗಾರಿ ಹಿನ್ನೆಲೆ ಸಿಸಿಟಿವಿ ಕೆಲಸ ಮಾಡುತ್ತಿಲ್ಲ. ಚಿಕ್ಕ ಸಮಸ್ಯೆಗಳಿವೆ ಇವುಗಳನ್ನೆಲ್ಲ ಬಗೆಹರಿಸುವುದಾಗಿ ಉತ್ತರ ನೀಡಿದ್ದರು.
ಆದರೆ, ಕಳೆದೆರಡು ದಿನದ ಹಿಂದೆ ನಡೆದ ಘಟನೆ ವೇಳೆ ಸಿಸಿಟಿವಿಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಹೀಗಾಗಿ ಕೆಲವೊಂದು ಅಪರಾಧ ಚಟುವಟಿಕೆ ನಡೆಯುತ್ತಿದೆ. ಇದರ ಬಗ್ಗೆ ವಿಸ್ತೃತ ವರದಿ ನೀಡುವಂತೆ ಕೇಳಲಾಗಿದೆ. ಅಲ್ಲದೇ ಭದ್ರತೆ ದೃಷ್ಟಿಯಲ್ಲೂ ಲೋಪ ದೋಷ ಇದೆ. ಮಗು ಎತ್ತಿಕೊಂಡು ಹೋದ ಆಯಿಷಾಳನ್ನು ಯಾವೊಬ್ಬ ಸೆಕ್ಯೂರಿಟಿಯೂ ಕೇಳಿಲ್ಲ. ಕಾರ್ಯ ನಿರ್ವಹಿಸುತ್ತಿದ್ದ ಸಿಸಿಟಿವಿ ಮುಂದೆ ಆಕೆ ತೆರಳಿದ್ದ ಹಿನ್ನೆಲೆ ಆಕೆಯನ್ನು ಹಿಡಿಯುವಲ್ಲಿ ಸಹಕಾರಿಯಾಯಿತು. ಸದ್ಯ ಇದೆಲ್ಲ ಕಾರಣಗಳ ಕುರಿತು ಉತ್ತರ ನೀಡುವಂತೆ ನೋಟಿಸ್ನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ವಾಣಿವಿಲಾಸ್ ಆಸ್ಪತ್ರೆಯಲ್ಲಿ ಹಸುಗೂಸು ಕಿಡ್ನಾಪ್: ಮಿಂಚಿನ ಕಾರ್ಯಾಚರಣೆಯಿಂದ ಮಗು ಪತ್ತೆ ಹಚ್ಚಿದ ಪೊಲೀಸ್