ಬೆಂಗಳೂರು: ವಿಧಾನಸಭಯಲ್ಲಿ ಇಂದು ಬಿಬಿಎಂಪಿ ಅಧಿಕಾರಿಗಳಿಂದ ನಡೆಯುತ್ತಿದೆ ಎನ್ನಲಾದ ಬೇಜವಾಬ್ದಾರಿ ವರ್ತನೆ ವಿಷಯ ಸದ್ದು ಮಾಡಿತು. ಜಯನಗರ ಕ್ಷೇತ್ರದ ಬಿಬಿಎಂಪಿ ಕಂದಾಯ ಹಾಗೂ ಸಹಾಯಕ ಕಂದಾಯ ಅಧಿಕಾರಿಗಳು ಕಚೇರಿಯಲ್ಲಿ ಕೆಲಸ ಮಾಡದೆ ಬಿಜೆಪಿ ಕಾರ್ಯಕರ್ತರೊಬ್ಬರ ಮನೆಯಲ್ಲಿ ಮತದಾರರ ಪರಿಷ್ಕರಣೆ ಮಾಡುತ್ತಿರುವಾಗ ಪ್ರತ್ಯಕ್ಷವಾಗಿ ಸಿಕ್ಕಿಬಿದ್ದಿದ್ದಾರೆ. ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್ ಶಾಸಕಿ ಸೌಮ್ಯ ರೆಡ್ಡಿ ವಿಧಾನಸಭೆಯಲ್ಲಿ ಆರೋಪಿಸಿದ್ದಾರೆ.
ಇಂದು ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಬಿಬಿಎಂಪಿ ಕಚೇರಿ ಹೆಸರನ್ನು ‘ಬೃಹತ್ ಬಿಜೆಪಿ ಮಹಾನಗರ ಪಾಲಿಕೆ’ ಎಂದು ಮರುನಾಮಕರಣ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಬಿಜೆಪಿ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ಅಧಿಕಾರಿಗಳು ಸಿಕ್ಕಿಬಿದ್ದಿದ್ದು, ಒಂದೇ ಬಾರಿ ಅಲ್ಲವೇ ಎಂಬ ಬೇಜವಾಬ್ದಾರಿ ಹೇಳಿಕೆಯನ್ನು ಬಿಬಿಎಂಪಿ ಆಯುಕ್ತರು ನೀಡಿದ್ದಾರೆ. ಬಿಬಿಎಂಪಿಯ ಮುಖ್ಯ ಆಯುಕ್ತರು ಪಕ್ಷಾತೀತವಾಗಿ ಕೆಲಸ ಮಾಡದೆ ಬಿಜೆಪಿ ಕಾರ್ಯಕರ್ತರಂತೆ ಕೆಲಸ ಮಾಡುತ್ತಿದ್ದಾರೆ ಎಂದು ಸೌಮ್ಯಾ ರೆಡ್ಡಿ ಕಿಡಿಕಾರಿದರು.
ಬಿಬಿಎಂಪಿಯನ್ನು ಬೃಹತ್ ಬಿಜೆಪಿ ಮಹಾನಗರ ಪಾಲಿಕೆ ಎಂದು ಕರೆಯಿರಿ ಎಂದ ಸೌಮ್ಯ ರೆಡ್ಡಿ ಇದನ್ನೂ ಓದಿ:ಮೇಕೆದಾಟು ಯೋಜನೆ.. ತಮಿಳುನಾಡು ನಿರ್ಣಯ ಖಂಡಿಸಿ ಸದನದಲ್ಲಿ ಸರ್ವಾನುಮತದ ನಿರ್ಣಯ
ನನ್ನ ಜಯನಗರ ಕ್ಷೇತ್ರದ ಕಂದಾಯ ಹಾಗೂ ಸಹಾಯಕ ಕಂದಾಯ ಅಧಿಕಾರಿಗಳು ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡದೆ ಪಕ್ಕದ ಕ್ಷೇತ್ರದ ಬಿಜೆಪಿ ಕಾರ್ಯಕರ್ತರೊಬ್ಬರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರ ಮನೆಯಲ್ಲಿ ಕುಳಿತು ಮತದಾರರ ಗುರುತಿನ ಚೀಟಿ ಪರಿಷ್ಕರಣೆ, ವಾರ್ಡ್ ಪುನರ್‌ವಿಂಗಡಣೆ ಕಾರ್ಯ ಮಾಡುತ್ತಿದ್ದರು. ಈ ಬಗ್ಗೆ ಬಿಬಿಎಂಪಿ ಜಂಟಿ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ದೂರು ನೀಡಿದ್ದೆ. ಅಧಿಕಾರಿಗಳು ದಾಳಿ ನಡೆಸಿದ ವೇಳೆ ಪ್ರತ್ಯಕ್ಷವಾಗಿ ಸಿಕ್ಕಿಬಿದ್ದಿದ್ದರು. ಆದರೂ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಅವರನ್ನು ಕೂಡಲೇ ನಮ್ಮ ಕ್ಷೇತ್ರದಿಂದ ತೆಗೆಯಬೇಕು ಎಂದು ಬೇಡಿಕೆ ಇಟ್ಟರೂ ಸಹ ಬಿಬಿಎಂಪಿ ಆಯುಕ್ತರು ಬೇಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಈ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ಅವರ ಬಳಿ ಉತ್ತರ ಕೊಡಿಸಿ ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಬಿಬಿಎಂಪಿ ಕಂದಾಯ ಅಧಿಕಾರಿಗಳು ಬೆಂಗಳೂರು ನಗರಾಭಿವೃದ್ಧಿ ಖಾತೆ ಅಡಿ ಬರುತ್ತಾರೆ. ಹೀಗಾಗಿ ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸಲಾಗುವುದು ಎಂದು ಹೇಳಿ ಚರ್ಚೆಗೆ ತೆರೆ ಎಳೆದರು.