ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಾಲೀಕತ್ವದ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಲಿಮಿಟೆಡ್ನಲ್ಲಿ 819 ಕೋಟಿ ರೂಪಾಯಿ ಮೊತ್ತದ ಅಕ್ರಮ ನಡೆದಿದೆ. ಈ ಅಕ್ರಮದಲ್ಲಿ ದೊಡ್ಡ ವ್ಯಕ್ತಿಗಳು ಭಾಗಿಯಾಗಿದ್ದಾರೆ. ಈ ವಿಚಾರವಾಗಿ ಹೈಕೋರ್ಟ್ ಮಧ್ಯ ಪ್ರವೇಶ ಮಾಡಿ ಸೂಕ್ತ ತನಿಖೆ ನಡೆಸ ಬೇಕು ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಆಗ್ರಹಿಸಿದ್ದಾರೆ.
ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರವನ್ನು ಬೀಳಿಸಿ ಬಿಜೆಪಿ ಸರ್ಕಾರ ತಂದ ರೂವಾರಿ ರಮೇಶ್ ಜಾರಕಿಹೊಳಿ. ಇವರು ಸುಮಾರು 819 ಕೋಟಿ ಸಾರ್ವಜನಿಕ ಹಣವನ್ನು ಲೂಟಿ ಮಾಡಿದ್ದಾರೆ. ಇದು ಗಂಭೀರವಾದ ವಿಚಾರವಾಗಿದ್ದು, ಇದರಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದವರು ಭಾಗಿಯಾಗಿದ್ದಾರೆ. ಕೇಂದ್ರ ಸಚಿವ ಅಮಿತ್ ಶಾ, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಕರ್ನಾಟಕ ರಾಜ್ಯದ ಹಾಲಿ ಮುಖ್ಯಮಂತ್ರಿಗಳು ಇದರಲ್ಲಿ ನೇರವಾಗಿ ಭಾಗಿದಾರರು ಎಂದು ಆರೋಪಿಸಿದರು.
ಬ್ಯಾಂಕ್ಗಳಿಂದ ಪಡೆದ ಸಾಲ: ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಲಿಮಿಟೆಡ್ಗೆ 6 ಮಂದಿ ಬೋರ್ಡ್ ಆಫ್ ಡೈರೆಕ್ಟರ್ನಲ್ಲಿ 4 ಜನ ಜಾರಕಿಹೊಳಿ ಅವರ ಕುಟುಂಬದವರು, ಉಳಿದವರು ಇವರ ಬೇನಾಮಿಗಳು. ಈ ಕಂಪನಿ ಯಾವ ಬ್ಯಾಂಕಿಗೆ ಎಷ್ಟು ಸಾಲ ನೀಡಬೇಕು ಎಂದು ಲಿಖಿತ ರೂಪದಲ್ಲಿ ತಿಳಿಸಿದೆ. ಅದರ ಪ್ರಕಾರ, ಕರ್ನಾಟಕ ಸ್ಟೇಟ್ ಕೋ ಆಪರೇಟಿವ್ ಅಪೆಕ್ಸ್ ಬ್ಯಾಂಕ್ ಲಿ. ಗೆ 180 ಕೋಟಿ ರೂ., ಐಕೆಮೆಸ್ಟ್ ಆಸೆಟ್ ರಿಕನ್ಸ್ಟ್ರಕ್ಷನ್ ಲಿ. 128.96 ಕೋಟಿ ರೂ., ವಿಜಯಪುರ ಡಿಸಿಸಿ ಬ್ಯಾಂಕ್ ಲಿ. 57 ಕೋಟಿ ರೂ., ಸೌಥ್ ಕೆನರಾ ಡಿಸಿಸಿಗೆ 44 ಕೋಟಿ ರೂ., ತುಮಕೂರು ಡಿಸಿಸಿಗೆ 44.33 ಕೋಟಿ ರೂ., ಕರ್ನಾಟಕ ಡಿಸಿಸಿ ಬ್ಯಾಂಕ್ ಗೆ 51 ಕೋಟಿ, ಶ್ರೀ ಅರಿಹಂತ್ ಕ್ರೆಡಿಟ್ ಸಹಕಾರ ಲಿಮಿಟೆಡ್ 42.22 ಕೋಟಿ ರೂ. ನೀಡಬೇಕಿದೆ. ಯೂನಿಯನ್ ಬ್ಯಾಂಕ್ ನಲ್ಲಿ 22.66 ಕೋಟಿ, ಶ್ರೀ ಬೀರವೇಶ್ವರ ಸೌಹಾರ್ದ್ ಕ್ರೆಡಿಟ್ ಸಹಕಾರ ಲಿಮಿಟೆಡ್ ನಿಂದ 6.87 ಕೋಟಿ ಸೇರಿದಂತೆ ಒಟ್ಟು 578.39 ಕೋಟಿ ಸಾಲ ಪಡೆದಿದ್ದಾರೆ ಎಂದು ದೂರಿದರು.
ಬಾಕಿ ಉಳಿಸಿಕೊಂಡಿರುವ ಹಣ: ಅರಿಹಂತ್ ಕ್ರೆಡಿಟ್ ಸಹಕಾರ ಲಿಮಿಟೆಡ್ ನಡೆಸುತ್ತಿರುವ ಅಭಿನಂದನ್ ಪಾಟೀಲ್ ಅವರು ರಮೇಶ್ ಜಾರಕಿಹೊಳಿ ಅವರ ಬೇನಾಮಿ ಆಗಿದ್ದಾರೆ. ರಮೇಶ್ ಜಾರಕಿಹೋಳಿ ಅವರು ಇವರಿಂದಲೇ 42.24 ಕೋಟಿ ಸಾಲ ಪಡೆದಿದ್ದಾರೆ. ಈ ಸಾಲ ಪಡೆದಿರುವುದರ ಜತೆಗೆ ಕಬ್ಬು ಬೆಳೆದ ರೈತರಿಗೆ 50 ಕೋಟಿ ರೂ. ಬಾಕಿ, ಗುತ್ತಿಗೆದಾರರಿಗೆ 5 ಕೋಟಿ, ಸರಬರಾಜುದಾರರಿಗೆ 50 ಕೋಟಿ ಬಾಕಿ ಉಳಿಸಿಕೊಂಡಿದೆ ಎಂದು ಮಾಹಿತಿ ನೀಡಿದರು. ಶ್ರೀ ಕೊಂಡಿಶೆಟ್ಟಿ ಕುಮಾರ ದುಶ್ಯಂತ ಎಂಬ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಂಪನಿಯ ಆರ್ಬಿಟ್ರೇಟರ್ ಅವರು ಆದಾಯ ತೆರಿಗೆಗೆ 19-5-2020 ರಂದು ಬರೆದ ಪತ್ರದಲ್ಲಿ 2011ರಿಂದ 156.64 ಕೋಟಿ ರೂ. ಆದಾಯ ತೆರಿಗೆ ಬಾಕಿ ಇದೆ ಎಂದು ತಿಳಿಸಿದ್ದಾರೆ ಎಂದರು.