ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್ಗೆ ದಿಲ್ಲಿಗೆ ಬರುವಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಬುಲಾವ್ ನೀಡಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯ ವಿಧಾನಸಭೆ 15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಎದುರಾದ ಸೋಲಿಗೆ ನೈತಿಕ ಹೊಣೆ ಹೊತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದು, ಇವರ ಮನವೊಲಿಸಿ ಅದೇ ಸ್ಥಾನದಲ್ಲಿ ಮುಂದುವರಿಯುವಂತೆ ಸೂಚಿಸಲು ಸೋನಿಯಾ ಬುಲಾವ್ ಕೊಟ್ಟಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇತ್ತೀಚೆಗೆ ವಿಧಾನಸಭೆ ಪ್ರತಿಪಕ್ಷದ ನಾಯಕ ಸ್ಥಾನ ವಹಿಸಿಕೊಳ್ಳುವ ಸಂದರ್ಭ ಸಿದ್ದರಾಮಯ್ಯ ಅವರು ಸೋನಿಯಾ ಗಾಂಧಿಗೆ ಹೆಚ್ಚು ಸ್ಥಾನ ಗೆಲ್ಲಿಸಿಕೊಡುವ ಭರವಸೆ ನೀಡಿದ್ದರು. ಆದರೆ ಮಾತು ಉಳಿಸಿಕೊಳ್ಳಲು ಸಾಧ್ಯವಾಗದ ಹಿನ್ನೆಲೆ ತಮ್ಮ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ರಾಜೀನಾಮೆ ಮೂಲಕ ಅವರು ತಮ್ಮ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಹಾಗೂ ಪ್ರತಿಪಕ್ಷದ ನಾಯಕ ಸ್ಥಾನ ಎರಡನ್ನು ತ್ಯಜಿಸಲು ಮುಂದಾಗಿದ್ದರು. ಆದರೆ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರ ತೀವ್ರ ಒತ್ತಡದ ಹಿನ್ನೆಲೆ ಅವರನ್ನು ಈ ಎರಡು ಸ್ಥಾನದಲ್ಲಿ ಮುಂದುವರಿಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದ್ದು, ಈ ಕುರಿತು ಮನದಟ್ಟು ಮಾಡಿಕೊಡಲು ದಿಲ್ಲಿಗೆ ಕರೆಸಿಕೊಳ್ಳಲಾಗುತ್ತಿದೆ ಎನ್ನಲಾಗುತ್ತಿದೆ.
ವರದಿಯೂ ಸಿದ್ದು ಪರ?
ಕಳೆದ ಗುರುವಾರ ರಾಜ್ಯಕ್ಕೆ ಎಐಸಿಸಿ ವೀಕ್ಷಕರಾಗಿ ಆಗಮಿಸಿದ್ದ ಮಧುಸೂದನ್ ಮಿಸ್ತ್ರಿ ಹಾಗೂ ಭಕ್ತ ಚರಣದಾಸ್ ದಿಲ್ಲಿಗೆ ಹಿಂತಿರುಗಿದ್ದು, ರಾಜ್ಯದ 50 ನಾಯಕರ ಜೊತೆ ನಡೆಸಿದ ಚರ್ಚೆಯ ವಿವರವನ್ನು ಸೋನಿಯಾ ಗಾಂಧಿಗೆ ವರದಿ ರೂಪದಲ್ಲಿ ಸಲ್ಲಿಕೆ ಮಾಡಿದ್ದಾರೆ. ಈ ವರದಿ ಕೂಡ ಸಿದ್ದರಾಮಯ್ಯ ಅವರ ಪರವಾಗಿಯೇ ಇದೆ ಎಂಬ ಮಾತು ಕೇಳಿಬರುತ್ತಿದೆ. ರಾಜ್ಯದಲ್ಲಿ ಪಕ್ಷಕ್ಕೆ ಕಾಯಕಲ್ಪ ಸಿಗಬೇಕಾದರೆ ಸಿದ್ದರಾಮಯ್ಯ ನೇತೃತ್ವದ ನಾಯಕತ್ವ ಅನಿವಾರ್ಯ ಎಂದು ವರದಿ ಸ್ಪಷ್ಟಪಡಿಸಿದೆ. ರಾಜ್ಯ ಕಾಂಗ್ರೆಸ್ ನಾಯಕರ ಅಭಿಪ್ರಾಯ ಕುರಿತ ವರದಿ ಆಧರಿಸಿ ಸೋನಿಯಾ ಗಾಂಧಿ ಸಿದ್ದರಾಮಯ್ಯಗೆ ಬುಲಾವ್ ಕೊಟ್ಟಿದ್ದಾರೆ.