ಬೆಂಗಳೂರು :ಅಳಿಯ ಮನೆ ತೊಳಿಯ ಎಂಬ ಮಾತಿಗೆ ತಾಜಾ ಉದಾಹರಣೆ ಈ ಪ್ರಕರಣ. ಯುವತಿಯೊಬ್ಬಳನ್ನು ಪ್ರೀತಿಸಿ, ಆಕೆಯ ಮನೆಯವರನ್ನು ಯಾಮಾರಿಸಿ ಕರೆದುಕೊಂಡು ಹೋಗಿದ್ದ ವ್ಯಕ್ತಿಯೊಬ್ಬ ಒಂದೂವರೆ ವರ್ಷದ ನಂತರ ಅತ್ತೆ ಮನೆಯಲ್ಲಿ ಕಳ್ಳತನ ಮಾಡಿರುವ ಘಟನೆ ಹಲಸೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಪ್ರಕರಣ ಸಂಬಂಧ ಆರೋಪಿ ಪ್ರದೀಪ್ ಕುಮಾರ್ ಎಂಬಾತನನ್ನು ಹಲಸೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ರೆಜಿನಾ ಎಂಬುವವರ ಮಗಳನ್ನು ಪ್ರೀತಿಸುತ್ತಿದ್ದ ಆರೋಪಿ, ಒಂದೂವರೆ ವರ್ಷದ ಹಿಂದೆ ಆಕೆಯನ್ನು ಕರೆದುಕೊಂಡು ಹೋಗಿದ್ದ. ಈ ಬಗ್ಗೆ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಕ್ಟೋಬರ್ 30ರಂದು ರೆಜಿನಾ ಕನ್ಯಾಕುಮಾರಿಗೆ ಹೋಗಿದ್ದ ಸಂದರ್ಭದಲ್ಲಿ ಅವರ ಮನೆ ಬಳಿ ಬಂದಿದ್ದ ಪ್ರದೀಪ್ ಕುಮಾರ್, ಚಿನ್ನಾಭರಣ ಸೇರಿದಂತೆ ಮನೆಯ ವಸ್ತುಗಳನ್ನು ಸಾಗಿಸಲಾರಂಭಿಸಿದ್ದ.
ಈ ವೇಳೆ ರೆಜಿನಾರ ಮನೆಯ ಅಕ್ಕ ಪಕ್ಕದ ನಿವಾಸಿಗಳು ನೋಡಿ ಪ್ರಶ್ನಿಸಿದಾಗ 'ನಾನು ಅವರ ಸಂಬಂಧಿ' ಎಂದು ಹೇಳಿದ್ದ. ಆದರೂ ಸಹ ಅನುಮಾನಗೊಂಡ ಸ್ಥಳೀಯರು ಮೊಬೈಲ್ ನಲ್ಲಿ ಫೋಟೋ ತೆಗೆದು ರೆಜಿನಾಗೆ ಕರೆ ಮಾಡಿದ್ದರು. ಆದರೆ ಅವರನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ನಂತರ ಕನ್ಯಾಕುಮಾರಿಯಿಂದ ರೆಜಿನಾ ವಾಪಸ್ ಬಂದಾಗ ಮನೆಯ ಬಾಗಿಲು ಒಡೆದು ಚಿನ್ನಾಭರಣ ನಗದು ಸೇರಿ ಒಟ್ಟು 40 ಲಕ್ಷ ಮೌಲ್ಯದ ವಸ್ತುಗಳ ಕಳ್ಳತನವಾಗಿರುವುದು ಗೊತ್ತಾಗಿತ್ತು.
ಕಳ್ಳತನವಾಗಿರುವುದನ್ನು ತಿಳಿದ ಕೂಡಲೇ ಅಕ್ಕ-ಪಕ್ಕದ ನಿವಾಸಿಗಳು ತಾವು ನೋಡಿರುವುದಾಗಿ ಫೊಟೋ ತೋರಿಸಿದಾಗ ಇದು ತನ್ನ ಅಳಿಯನಿಂದ ನಡೆದಿರುವ ಕೃತ್ಯ ಎಂಬುದು ಬಯಲಾಗಿತ್ತು. ತಕ್ಷಣ ತನ್ನ ಅಳಿಯ ಪ್ರದೀಪ್ ಕುಮಾರ್ ವಿರುದ್ಧ ರೆಜಿನಾ ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ಸದ್ಯ ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಪ್ರತ್ಯೇಕ ಪ್ರಕರಣ- ರೌಡಿಶೀಟರ್ ಬಂಧನ : ಮತ್ತೊಂದೆಡೆ ಬೆಂಗಳೂರಿನ ಕುಖ್ಯಾತ ರೌಡಿ ಕಾಡುಬೀಸನಹಳ್ಳಿ ಸೋಮನ ಕಾರು ಚಾಲಕನ ಹತ್ಯೆ ಹಾಗು ರಾಜಾನುಕುಂಟೆ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣಗಳಲ್ಲಿ ಪೊಲೀಸರಿಗೆ ಸಿಗದೆ ಮೃತಪಟ್ಟಿರುವುದಾಗಿ ಬಿಂಬಿಸಿಕೊಂಡು ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ರೌಡಿ ಆಸಾಮಿಯೊಬ್ಬ ಸಿಸಿಬಿ ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ವೈಟ್ ಫೀಲ್ಡ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿ ಬಂಧಿತ ಆರೋಪಿ.
ಮನೆ ಬಳಿ ಹೋಗಿದ್ದ ಪೊಲೀಸರು ಕುಟುಂಬಸ್ಥರು, ಗೆಳೆಯರು, ಪರಿಚಿತರನ್ನು ವಿಚಾರಿಸಿದಾಗ ಆತ ಮೃತಪಟ್ಟಿದ್ದಾನೆ ಎಂದಿದ್ದರು. ಅಲ್ಲದೇ ಮಲ್ಲಿಕಾರ್ಜುನ ಮೃತಪಟ್ಟಿರುವ ದಾಖಲೆಗಳನ್ನು ಕುಟುಂಬಸ್ಥರು ತೋರಿಸಿದ್ದರು. ಅದರೂ ಸಹ ಅನುಮಾನಗೊಂಡ ಸಿಸಿಬಿ ಪೊಲೀಸರು ತಲಾಶ್ ನಡೆಸಿ ಊರೂರು ಸುತ್ತುತ್ತ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ :ಬೆಂಗಳೂರು: ಸತ್ತಂತೆ ಬಿಂಬಿಸಿಕೊಂಡು ತಲೆಮರೆಸಿಕೊಂಡಿದ್ದ ರೌಡಿ ಕೊನೆಗೂ ಅರೆಸ್ಟ್