ಬೆಂಗಳೂರು: ಮದ್ಯ ಸೇವಿಸಲು ಹಣ ಕೊಡದಿದ್ದಕ್ಕೆ ತಂದೆಯನ್ನೇ ಪುತ್ರನೋರ್ವ ಹತ್ಯೆಗೈದ ಘಟನೆ ಗೋವಿಂದರಾಜ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಕೃತ್ಯ ನಡೆದ 15 ದಿನಗಳ ಬಳಿಕ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಇದೀಗ ಕೇಸ್ಗೆ ಸಂಬಂಧಿಸಿದಂತೆ ಪೊಲೀಸರು ಮಗನನ್ನ ಬಂಧಿಸಿದ್ದಾರೆ.
ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಾರೇನಹಳ್ಳಿಯ ಶೆಡ್ವೊಂದರಲ್ಲಿ ವಾಸವಾಗಿದ್ದ ಬಸವರಾಜ (60) ಕೊಲೆಯಾದ ವ್ಯಕ್ತಿ. ಕೊಲೆ ಆರೋಪದಡಿ ಮಗ ನೀಲಾಧರನನ್ನ ಬಂಧಿಸಲಾಗಿದೆ. ಸೆಕ್ಯೂರಿಟಿ ಗಾರ್ಡ್ ಆಗಿ ಬಸವರಾಜ ಕೆಲಸ ಮಾಡುತ್ತಿದ್ದರು. ಮಗ ಆಟೋ ಚಾಲಕನಾಗಿದ್ದ. ತಂದೆ-ಮಗ ಶೆಡ್ವೊಂದರಲ್ಲಿ ಒಟ್ಟಿಗೆ ವಾಸವಾಗಿದ್ದರು. ಕುಡಿತದ ಚಟ ಅಂಟಿಸಿಕೊಂಡಿದ್ದ ನೀಲಾಧರ್, ಸಂಪಾದನೆ ಮಾಡುತ್ತಿದ್ದ ಹಣವನ್ನೆಲ್ಲಾ ಮದ್ಯ ಕುಡಿಯಲು ಖರ್ಚು ಮಾಡುತ್ತಿದ್ದ.
ಕಳೆದ 15 ದಿನಗಳ ಹಿಂದೆ ತಂದೆ ಬಳಿ ಬಂದು ಕುಡಿಯಲು ಹಣ ಕೇಳಿದ್ದಾನೆ. ಬಳಿಕ ಹಣ ಕೊಡಲು ನಿರಾಕರಿಸಿದ ತಂದೆ ಮೇಲೆ ಅಕ್ರೋಶಗೊಂಡಿದ್ದಾನೆ. ಈ ವೇಳೆ ಗಲಾಟೆ ಅತಿರೇಕಕ್ಕೆ ತಲುಪಿದ್ದು, ಬಳಿಕ ಇಟ್ಟಿಗೆಯಿಂದ ಬಸವರಾಜ ತಲೆಗೆ ಹೊಡೆದು ಸಾಯಿಸಿದ್ದಾನೆ. ನಂತರ ಶವವನ್ನು ಮನೆ ಒಳಗೆ ಇಟ್ಟು ಬೀಗ ಹಾಕಿಕೊಂಡು ಪರಾರಿಯಾಗಿದ್ದ. 15 ದಿನದ ಬಳಿಕ ಶೇಡ್ನಲ್ಲಿ ದುರ್ವಾಸನೆ ಬಂದ ಹಿನ್ನೆಲೆಯಲ್ಲಿ ಅನುಮಾನಗೊಂಡು ಪೊಲೀಸರಿಗೆ ನೆರಹೊರೆಯವರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲಿಸಿದ ಪೊಲೀಸರು, ಮರಣೋತ್ತರ ಪರೀಕ್ಷೆಗಾಗಿ ಶವ ಕಳುಹಿಸಿದ್ದರು. ಶವದ ಮೇಲೆ ಗಾಯದ ಗುರುತು ಕಂಡುಬಂದಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನ ಸೆರೆ ಹಿಡಿದಿದ್ದಾರೆ.
ಇದನ್ನೂ ಓದಿ :ದಾವಣಗೆರೆ: ಚಾಕುವಿನಿಂದ ಇರಿದು ಗೃಹಿಣಿಯ ಹತ್ಯೆಗೈದ ಪಾಗಲ್ ಪ್ರೇಮಿ