ಬೆಂಗಳೂರು: ನಗರದಲ್ಲಿ ಕಳೆದ ಮೂರು ದಿನಗಳಿಂದ ಸಾಧಾರಣ ಮಳೆಯಾಗುತ್ತಿದ್ದು, ನಿನ್ನೆ ಸಹ ಮಳೆ ಮುಂದುವರಿದಿತ್ತು. ಆದರೆ ಮಧ್ಯಾಹ್ನ ಮತ್ತು ರಾತ್ರಿ ಸುರಿದ ಭಾರಿ ಮಳೆಗೆ ಬೆಂಗಳೂರಿನ ಜನ ತತ್ತರಿಸಿ ಹೋಗಿದ್ದಾರೆ. ಅಷ್ಟೇ ಅಲ್ಲ ಮೆಜೆಸ್ಟಿಕ್ ಬಳಿ ಮಳೆಯಿಂದಾಗಿ ಕೃತಕ ಜಲಪಾತ ಸೃಷ್ಟಿಯಾಗಿದ್ದು, ಮಳೆ ನೀರು ರಸ್ತೆಯಲ್ಲೆ ನಿಂತ ಪರಿಣಾಮ ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಭಾರೀ ಮಳೆಗೆ ಕೃತಕ ಜಲಪಾತ ಸೃಷ್ಟಿ, ರಸ್ತೆಯಲ್ಲೇ ನಿಂತ ನೀರು ಹೌದು, ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು, ರಾತ್ರಿ ವೇಳೆಗೆ ನಗರದಲ್ಲಿ ಮಧ್ಯಾಹ್ನ ಮತ್ತು ರಾತ್ರಿ ವೇಳೆ ಬಿಟ್ಟು ಬಿಡದೆ ಮಳೆ ಸುರಿದಿದೆ. ಪರಿಣಾಮ ಕೆಲವು ಬಡಾವಣೆಗಳು ಜಲಾವೃತಗೊಂಡಿದ್ದು, ಮೆಜೆಸ್ಟಿಕ್ ಬಳಿ ಗೋಡೆ ಕುಸಿದು ಸುಮಾರು ಏಳಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ. ಕಳಪೆ ಕಾಮಗಾರಿ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಈಗಾಗಲೇ ನಗರದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿತ್ತು. IMD ಪ್ರಕಾರ, ಮುಂದಿನ 5 ದಿನಗಳಲ್ಲಿ ಬೆಂಗಳೂರಿನಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ತಾಪಮಾನವು 27-29 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 15-17 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿರುತ್ತದೆ ಎಂದು ಹೇಳಿದೆ.
ಭಾರಿ ಮಳೆಯಿಂದಾಗಿ ಬೆಂಗಳೂರಿನ ಹಲವೆಡೆ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯದೇ ರಸ್ತೆಯಲ್ಲೇ ನಿಂತಿದೆ. ಬಿಳೇಕಹಳ್ಳಿ, ಬೊಮ್ಮನಹಳ್ಳಿ ಭಾಗದ ರಸ್ತೆಗಳು ಕೆರೆಗಳಾಗಿ ಮಾರ್ಪಟ್ಟಿದ್ದವು. ಬನ್ನೇರುಘಟ್ಟ ಮುಖ್ಯರಸ್ತೆ, ಮಹದೇವಪುರ ಹಾಗೂ ಬೆಳ್ಳಂದೂರಿನ ಕೆಲ ಬಡಾವಣೆಗಳು ಮಳೆ ನೀರಿನಲ್ಲಿ ಅರ್ಧಕ್ಕೆ ಮುಳುಗಿ ಹೋಗಿವೆ. ಕೆ.ಆರ್.ಮಾರ್ಕೆಟ್, ಮೆಜೆಸ್ಟಿಕ್, ಜಯನಗರ, ಗಾಂಧಿ ಬಜಾರ್, ಜೆಪಿ ನಗರ, ರಾಜಾಜಿನಗರ, ಮಲ್ಲೇಶ್ವರ, ಬಸವೇಶ್ವರ ನಗರ, ಕುರುಬರಹಳ್ಳಿ ಸೇರಿ ಹಲವು ಪ್ರದೇಶಗಳಲ್ಲಿ ಮಳೆಯಾಗಿದೆ. ರಸ್ತೆಗುಂಡಿಗಳಲ್ಲಿ ನೀರು ತುಂಬಿ ವಾಹನ ಸವಾರರಿಗೆ ಕಿರಿಕಿರಿ ಉಂಟಾಗಿತ್ತು.
175 ಮಿ.ಮೀಟರ್ಗಿಂತ ಹೆಚ್ಚು ಮಳೆ: ಈ ವರ್ಷ ಇಲ್ಲಿಯವರೆಗೆ ನಗರದಲ್ಲಿ 175 ಮಿ.ಮೀಟರ್ಗಿಂತ ಹೆಚ್ಚು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಳೆದ ತಿಂಗಳು, ನಿರಂತರ ಮಳೆಯಿಂದಾಗಿ ನಗರವು ತೀವ್ರ ಜಲಾವೃತಗೊಂಡ ನಂತರ ಬೆಂಗಳೂರು ಪ್ರವಾಹದಂತಹ ಪರಿಸ್ಥಿತಿಯನ್ನು ಅನುಭವಿಸಿತು, ಇದು ನಗರದ ಹಲವಾರು ಪ್ರದೇಶಗಳಲ್ಲಿ ಸಂಚಾರದ ಮೇಲೆ ಪರಿಣಾಮ ಬೀರಿತು. ಜುಲೈನಲ್ಲಿ ಕರ್ನಾಟಕದ ಹಲವಾರು ಜಿಲ್ಲೆಗಳು ಮಳೆಯಿಂದಾಗಿ ಭಾರಿ ಪ್ರವಾಹವನ್ನು ಅನುಭವಿಸಿತು, ನಂತರ ರಕ್ಷಣಾ ಕಾರ್ಯಾಚರಣೆಗಳು ಮತ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು.
ಓದಿ:ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ನಲುಗಿದ ಸಿಲಿಕಾನ್ ಸಿಟಿ: ಬಡಾವಣೆಗಳು ಜಲಾವೃತ