ಬೆಂಗಳೂರು: ಕೊರೊನಾ, ಲಾಕ್ಡೌನ್ ನಡುವೆ ಶಾಲೆಗಳಲ್ಲಿ ಶುಲ್ಕ ಕಟ್ಟುವಂತೆ ಒತ್ತಾಯ ಮಾಡದೇ ಹಳೆ ವರ್ಷದ ಶುಲ್ಕವನ್ನೇ ಮುಂದುವರೆಸಬೇಕು ಎಂದು ಸಾರ್ವಜನಿಕ ಇಲಾಖೆ ಆದೇಶಿಸಿದೆ. ಆದರೆ, ಕೆಲವು ಶಾಲೆಗಳಲ್ಲಿ ಬೇಕಾಬಿಟ್ಟಿ ಶುಲ್ಕ ವಸೂಲಿ ಕೇಳುತ್ತಿವೆ ಎಂಬ ಆರೋಪ ಕೇಳಿ ಬಂದಿದೆ.
ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯೆ ಕೊರೊನಾ ಎಲ್ಲ ವಲಯಗಳ ಮೇಲೂ ಪ್ರಭಾವ ಬೀರಿದ್ದು, ಇದಕ್ಕೆ ಶಿಕ್ಷಣ ಇಲಾಖೆ ಹೊರತಾಗಿಲ್ಲ. ಇದನ್ನು ಮನಗಂಡು ಶಿಕ್ಷಣ ಇಲಾಖೆ ಹಳೇ ಶುಲ್ಕವನ್ನೇ ಮುಂದುವರೆಸಬೇಕು. ಯಾವುದೇ ಹೊಸ ಶುಲ್ಕವನ್ನು ವಸೂಲಿ ಮಾಡಬಾರದು. ಕಟ್ಟುವಂತೆ ಪೋಷಕರನ್ನು ಒತ್ತಾಯ ಮಾಡಬಾರದೆಂದು ಆದೇಶಿಸಿದೆ. ಆದರೆ, ನಗರದ ಬಿಷಪ್ ಕಾಟನ್ ಎಂಬ ಖಾಸಗಿ ಶಾಲೆಯಲ್ಲಿ ಬೇಕಾಬಿಟ್ಟಿಯಾಗಿ ಶುಲ್ಕ ಪಡೆಯುತ್ತಿದ್ದಾರಂತೆ.
ಇನ್ನು ಶಾಲೆಗಳು ಪ್ರಾರಂಭವಾಗಿಲ್ಲ. ಆದರೆ, ಈ ಶಾಲೆಯಲ್ಲಿ ಮಾತ್ರ ದಿನಪತ್ರಿಕೆಗೆ 1285 ರೂ, ಕ್ರೀಡೆಗೆ1635ರೂ, ಕ್ಲಾಸ್ ಪಿಕ್ನಿಕ್ಗೆ 800, ಬಿಲ್ಡಿಂಗ್ ಫಂಡ್ 14,365 ರೂ ಸೇರಿದಂತೆ ಹಲವು ಶುಲ್ಕವನ್ನು ವಸೂಲಿ ಮಾಡುತ್ತಿದ್ದಾರೆ. ಈ ಬಾರಿ ಪಿಕ್ನಿಕ್ ಮುಂತಾದ ಹೆಚ್ಚುವರಿ ಹಣ ಕಟ್ಟಬೇಕಿಲ್ಲ ಎಂದು ಕಣ್ಣೊರೆಸುವ ಪತ್ರ ಬರೆದಿದ್ದ ಆಡಳಿತ ಮಂಡಳಿ, ಈಗ ಮಾತ್ರ ಎಲ್ಲ ಸೇರಿಸಿ ಶುಲ್ಕ ಕಟ್ಟಿ ಅಂತ ಪೋಷಕರಿಗೆ ಮೆಸೇಜ್ ಕಳಿಸಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, ಕೊರೊನಾ ಸಂದರ್ಭದಲ್ಲಿ ಪಿಕ್ನಿಕ್- ಟ್ರಿಪ್ ಅನ್ನೋದೆ ಹಾಸ್ಯಾಸ್ಪದವಾಗಿದೆ. ಬೇಕಾಬಿಟ್ಟಿ ಶುಲ್ಕ ವಸೂಲಿ ಮಾಡುವ ಅನೇಕ ಶಾಲೆಗಳಿಗೆ ಈಗಾಗಲೇ ನೋಟಿನ್ ನೀಡಲಾಗಿದೆ. ಈಗ ಈ ಶಾಲೆಗೂ ನೋಟಿಸ್ ಕೊಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.