ಕರ್ನಾಟಕ

karnataka

ETV Bharat / state

ಮತ್ತೆ ಸಿಎಂ ಆದ್ರೆ ದಲಿತರ ಸಾಲ ಮನ್ನಾ: ಸಿದ್ದರಾಮಯ್ಯ - ಡಾ ಅಂಬೇಡ್ಕರ್ ಜಯಂತಿ ಆಚರಣೆ

ಸಮ-ಸಮಾಜದ ನಿರ್ಮಾಣ ಇನ್ನೂ ಕನಸಾಗಿದೆ. ವಿದ್ಯಾವಂತರಾದರೆ ಮಾತ್ರ ನಿಮ್ಮ ಗೌರವ ಹೆಚ್ಚಲಿದೆ. ಸಂವಿಧಾನ, ಕಾನೂನು ಬಾಹಿರ ಅಸ್ಪೃಶ್ಯತೆಯನ್ನು ಪಟ್ಟಭದ್ರ ಹಿತಾಸಕ್ತಿಗಳು ಜೀವಂತವಾಗಿರಿಸಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

Dr Ambedkar Jayanti celebration
ಡಾ ಅಂಬೇಡ್ಕರ್ ಜಯಂತಿ ಆಚರಣೆ

By

Published : May 18, 2022, 5:10 PM IST

ಬೆಂಗಳೂರು: ಅಸ್ಪೃಶ್ಯತೆ ಸಂವಿಧಾನ ಮತ್ತು ಕಾನೂನು ‌ಬಾಹಿರವಾಗಿದೆ. ಆದ್ರೆ ಪಟ್ಟಭದ್ರ ಹಿತಾಸಕ್ತಿಗಳು ಅದನ್ನು ಜೀವಂತವಾಗಿಟ್ಟಿವೆ. ಶೋಷಿತರು ಇದರ ವಿರುದ್ಧ ಹೋರಾಡಬೇಕು. ಇದು‌ ಹೋಗುವವರೆಗೆ ಹೋರಾಟ ಇರಲೇಬೇಕು. ಶೋಷಿತರು ಸಾಮಾಜಿಕ, ಆರ್ಥಿಕವಾಗಿ ಸಬಲರಾಗಬೇಕು. ವಿದ್ಯೆ ಎಲ್ಲರಿಗೂ ಸಿಗಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಪಾದಿಸಿದರು.

ಡಾ ಅಂಬೇಡ್ಕರ್ ಜಯಂತಿ ಆಚರಣೆ

ಬೆಂಗಳೂರಿನ ವಸಂತನಗರ ಬಳಿ ಇರುವ ಅಂಬೇಡ್ಕರ್ ಭವನದಲ್ಲಿ, ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಶೋಷಿತರ ಸ್ವಾಭಿಮಾನ ಸಮಾವೇಶದಲ್ಲಿ ಅವರು ಮಾತನಾಡಿದರು. ಸಮ-ಸಮಾಜದ ನಿರ್ಮಾಣ ಇನ್ನೂ ಕನಸಾಗಿದೆ. ವಿದ್ಯಾವಂತರಾದರೆ ಮಾತ್ರ ನಿಮ್ಮ ಗೌರವ ಹೆಚ್ಚಲಿದೆ. ವಿದ್ಯೆ ಇದ್ದರೆ ಗುಲಾಮಗಿರಿ ಕಿತ್ತು ಹಾಕಬಹುದು. ಈ ವ್ಯವಸ್ಥೆಯನ್ನ ನಾವು ಕಿತ್ತು ಹಾಕಬೇಕು. ಅದಕ್ಕೆ ನೀವೆಲ್ಲ ವಿದ್ಯಾವಂತರಾಗಬೇಕು. ಸ್ವಾಭಿಮಾನಿಗಳಾಗದ ಹೊರತು ವಿದ್ಯೆ ಸಾಧ್ಯವಿಲ್ಲ ಎಂದರು.

ಮತ್ತೆ ಸಿಎಂ ಆದ್ರೆ ದಲಿತರ ಸಾಲ ಮನ್ನಾ: ಮತ್ತೊಮ್ಮೆ ಸಿಎಂ ಆಗುವ ಅವಕಾಶ ಸಿಕ್ಕರೆ ನೋಡೋಣ. ದಲಿತರ ಸಾಲವನ್ನೇ ಮನ್ನಾ ಮಾಡ್ತೇನೆ ಎಂದು ಹೇಳುವ ಮೂಲಕ ಮತ್ತೊಮ್ಮೆ ಸಿಎಂ ಆಗುವ ಆಶಯವನ್ನು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದರು. ದಲಿತರಿಗೆ ಗುತ್ತಿಗೆ ಮೀಸಲಾತಿ ತಂದಿದ್ದು ನಾನು. 50 ಲಕ್ಷದಿಂದ 1 ಕೋಟಿ ರೂ. ಹೆಚ್ಚಳಕ್ಕೆ ಘೋಷಿಸಿದೆ. ಆದರೆ ನಂತರ ಅದನ್ನ ಯಾರೂ ಕ್ಯಾರಿ ಮಾಡಲಿಲ್ಲ. ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಮಾಡಲಿಲ್ಲ. ಯಡಿಯೂರಪ್ಪ, ಬೊಮ್ಮಾಯಿನೂ ಮಾಡಲಿಲ್ಲ ಎಂದು ಹೇಳಿದರು.

ಡೈವರ್ಟ್​ ಮಾಡಲಾಗಿದೆ ಎಸ್ಸಿಪಿ, ಟಿಎಸ್ಪಿ ಹಣ:ಎಸ್ಸಿಪಿ, ಟಿಎಸ್ಪಿ 7,950 ಕೋಟಿ ಹಣ ಡೈವರ್ಟ್ ಮಾಡಿದ್ದಾರೆ. ದಲಿತರಿಗೆ ಸರ್ಕಾರ ಮಾಡಿದ ಮೋಸ ಅಲ್ವೇ? ದಲಿತ ಸಂಘಟನೆಗಳು ಏನು ಮಾಡ್ತಿವೆ? ಸಮುದಾಯದ ಪರ ಧ್ವನಿ ಎತ್ತಬೇಕಲ್ವೇ? ನಿಮ್ಮ ಹಣವನ್ನ ಬೇರೆಯವರಿಗೆ ಖರ್ಚು ಮಾಡಿದ್ದಾರೆ. ಇದರ ಬಗ್ಗೆ ಯಾಕೆ ಧ್ವನಿ ಎತ್ತುತ್ತಿಲ್ಲ. ಇದು ನಿಮ್ಮ ಸಮುದಾಯಕ್ಕೆ ಮಾಡೋ ಮೋಸ ಅಲ್ವೇ? ಎಂದು ದಲಿತ ಸಂಘಟನೆಗಳ ವಿರುದ್ಧ ಸಿದ್ದರಾಮಯ್ಯ ಗರಂ ಆದರು.

ಡಾ ಅಂಬೇಡ್ಕರ್ ಜಯಂತಿ ಆಚರಣೆ

ನ್ಯಾ.ಹೆಚ್.ಎನ್.ನಾಗಮೋಹನ್ ದಾಸ್ ಮಾತನಾಡಿ, ಸಂವಿಧಾನ ಇವತ್ತು ಗಂಡಾಂತರದಲ್ಲಿದೆ. ಸಂವಿಧಾನ ಬದಲಾವಣೆಗೆ ಹೊರಟಿದ್ದಾರೆ. ಕೋಮುವಾದದ ಪ್ರಯೋಗಶಾಲೆ ಶುರುವಾಗಿದೆ. ಕೋಮುವಾದಕ್ಕೆ ರಾಜ್ಯ ಪ್ರಯೋಗ ಶಾಲೆಯಾಗಿದೆ. ಇಂತಹ ವೇಳೆ ಸಂವಿಧಾನ ಉಳಿಸಬೇಕಿದೆ. ಆ ನಿಟ್ಟಿನಲ್ಲಿ ನಾವು ಮುನ್ನುಗ್ಗಬೇಕಿದೆ. ಆ ಮೂಲಕ ಅಂಬೇಡ್ಕರ್ ಜಯಂತಿ ಅರ್ಥಕಲ್ಪಿಸೋಣ ಎಂದು ಕರೆ ನೀಡಿದರು.

ಇದನ್ನೂ ಓದಿ:ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮಠಾಧೀಶರು ರಾಜಕೀಯ ಪ್ರವೇಶ ಮಾಡುತ್ತೇವೆ: ರುದ್ರಮುನಿ ಸ್ವಾಮಿ

ಮಾಜಿ ಸಚಿವ ಹೆಚ್. ಆಂಜನೇಯ ಮಾತನಾಡಿ, ಹಿಂದೆ ಹೋಬಳಿಗೊಂದು ಹೆಂಡದಂಗಡಿ ಇದ್ವು. ಸಿದ್ದರಾಮಯ್ಯ ಅದನ್ನ ಬದಲಾಯಿಸಿದ್ರು. ಹೋಬಳಿಗೊಂದು ವಸತಿ ಶಾಲೆಗಳನ್ನ ತೆರೆದ್ರು. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನ ಕೊಟ್ರು. ಇವತ್ತು ದಲಿತ ಸಂಘಟನೆಗಳು ಒಂದಾಗಬೇಕಿದೆ. ಬಿಜೆಪಿ ಸರ್ಕಾರ ನಕಲಿ ಸರ್ಟಿಪಿಕೆಟ್ ಕೊಡ್ತಿದೆ. ಸುಳ್ಳು ಜಾತಿ ಪ್ರಮಾಣ ಪತ್ರ ಎಲ್ಲ ಕಡೆ ಸಿಗ್ತಿದೆ. ನಮ್ಮ ದಲಿತರ ಹಣ ದುರುಪಯೋಗವಾಗ್ತಿದೆ. ನಾವು 86 ಸಾವಿರ ಕೋಟಿ ರೂ. ಖರ್ಚು ಮಾಡಿದ್ದೆವು. ಅಧಿಕಾರ ಹೋದಾಗ 26 ಸಾವಿರ ಕೋಟಿ ಇತ್ತು. ಈಗ ಅದು 40 ಸಾವಿರ ಕೋಟಿ ಆಗಬೇಕಿತ್ತು. ಎಸ್ಸಿಪಿ, ಟಿಎಸ್ಪಿ ಹಣವನ್ನು ಯಾವುದಕ್ಕೂ ಬಳಸಬಾರದು. ನಮ್ಮ ಸರ್ಕಾರ ಬಂದ್ರೆ 25 ಲಕ್ಷ ಕೊಟ್ಟುಬಿಡಿ. ದಲಿತರು ಮನೆ ಕಟ್ಟಿಕೊಳ್ಳಲಿ. ದಲಿತರು ಅಂಗಡಿ ಮಾಡಿಕೊಳ್ಳಲಿ. ದಲಿತರು ವ್ಯಾಪಾರ ಮಾಡಲಿ ನೀವು ಕೊಟ್ಬಿಡಿ ಎಂದು ಸಿದ್ದರಾಮಯ್ಯಗೆ ಸಲಹೆ ನೀಡಿದರು.

ABOUT THE AUTHOR

...view details