ಬೆಂಗಳೂರು :ಒಂದೆಡೆ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಜೆಡಿಎಸ್ ವರಿಷ್ಠರು ಸಜ್ಜಾಗುತ್ತಿದ್ದರೆ, ಮತ್ತೊಂದೆಡೆ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಕೆಲ ನಾಯಕರ ನಿಗೂಢತೆ ಅಸ್ಪಷ್ಟವಾಗಿದೆ.
ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮಾರ್ಗದರ್ಶನದಲ್ಲಿ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಲು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ತೊಡಗಿದ್ದಾರೆ. ಅದಕ್ಕಾಗಿ ಜಿಲ್ಲಾ ಪ್ರವಾಸ ಮಾಡಲು ಸಿದ್ಧತೆ ಮಾಡುತ್ತಿದ್ದಾರೆ.
ಇನ್ನೊಂದೆಡೆ ಜೆಡಿಎಸ್ ನಾಯಕರು ಒಬ್ಬೊಬ್ಬರಾಗಿ ಪಕ್ಷದಿಂದ ಹೊರ ಬೀಳುತ್ತಿದ್ದಾರೆ. ಮುಖ್ಯವಾಗಿ ಉತ್ತರಕರ್ನಾಟಕ ಭಾಗದಿಂದ ಹಲವು ಮುಖಂಡರು ಪಕ್ಷದಿಂದ ಹಿಂದೆ ಸರಿಯುತ್ತಿದ್ದಾರೆ. ಅನಿರೀಕ್ಷಿತ ಬೆಳವಣಿಗೆಯಲ್ಲಿ ರಾಜ್ಯ ಉಪಾಧ್ಯಕ್ಷ ಪ್ರದೀಪ್ ಗೌಡ ಮಾಲಿ ಪಾಟೀಲ್ ಇತ್ತೀಚೆಗೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಜೆಡಿಎಸ್‌ಗೆ ಬಲ ತುಂಬಿದ್ದ ಎಂ ಸಿ ಮನಗೂಳಿ ನಿಧನರಾಗಿದ್ದು, ತಂದೆ ನಿಧನ ನಂತರ ಅಶೋಕ್ ಮನಗೂಳಿ ಪಕ್ಷಕ್ಕೆ ಗುಡ್ ಬೈ ಹೇಳಿ, ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಇನ್ನು, ಮಧು ಬಂಗಾರಪ್ಪ ಸಹ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ.
ಪ್ರಮುಖವಾಗಿ ಜೆಡಿಎಸ್ ನಾಯಕರ ಬಗ್ಗೆ ಮುನಿಸಿಕೊಂಡಿರುವ ಗುಬ್ಬಿ ಶಾಸಕ ಶ್ರೀನಿವಾಸ್ ಸಹ ತಟಸ್ಥರಾಗಿದ್ದು, ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ ಎಂಬ ಸುದ್ದಿ ಪಕ್ಷದ ವಲಯದಲ್ಲೇ ಹರಿದಾಡುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಕೆಲದಿನಗಳ ಹಿಂದೆ ತುಮಕೂರಿನಲ್ಲಿ ಶ್ರೀನಿವಾಸ್ ಮಾತನಾಡಿ, 'ಪಕ್ಷದ ನಡವಳಿಕೆಯಿಂದ ನನಗೆ ಬೇಜಾರಾಗಿರುವುದು ನಿಜ. ಮುಂದಿನ ದಿನಗಳಲ್ಲಿ ಎಲ್ಲವನ್ನು ಹೇಳುತ್ತೇನೆ. ತನ್ನ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೊಟ್ಟಿಲ್ಲ.
ಏಕೆ ಕೊಟ್ಟಿಲ್ಲ ಎಂದು ಕುಮಾರಸ್ವಾಮಿ ಅವರಿಗೆ ಗೊತ್ತು. ಮೈತ್ರಿ ಸರ್ಕಾರ ಉಳಿಸಿಕೊಳ್ಳಬಹುದಿತ್ತು. ಅಲ್ಲಿ ಅವರ ನಡವಳಿಕೆ ಮುಖ್ಯವಾಗಿತ್ತು. ಆ ಸಂದರ್ಭದಲ್ಲಿ ಅವರು ಸರಿಯಾಗಿ ನಡೆದುಕೊಂಡಿಲ್ಲ. ಆದರೆ, ದೇವೇಗೌಡರು ನಿರಂತರ ಪಕ್ಷ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಬಗ್ಗೆ ನಾನು ಏನು ಹೇಳುವುದಿಲ್ಲ. ಅವರು ದೊಡ್ಡ ನಾಯಕರು' ಎಂದು ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ. ನಾನು ಜೆಡಿಎಸ್‌ನಲ್ಲೇ ಇರುತ್ತೇನೆ. ಕಾಂಗ್ರೆಸ್‌ಗೆ ಹೋಗಲ್ಲ ಎಂದು ಕಳೆದ ತಿಂಗಳು ಮತ್ತೆ ಶ್ರೀನಿವಾಸ್ ಹೇಳಿದ್ದಾರೆ. ಆದರೂ ಸಹ ಸ್ಪಷ್ಟ ನಿಲುವುಗೆ ಇನ್ನೂ ಬಂದಿಲ್ಲ.
ಜಿ ಟಿ ದೇವೇಗೌಡರ ನಡೆ ನಿಗೂಢ: ಮಾಜಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ, ಮಾಜಿ ಸಚಿವ ಜಿ ಟಿ ದೇವೇಗೌಡ ಅವರ ನಡೆ ಇನ್ನೂ ನಿಗೂಢವಾಗಿಯೇ ಇದೆ. ಜೆಡಿಎಸ್ ನಾಯಕರ ವಿರುದ್ಧ ಮುನಿಸಿಕೊಂಡು ತಟಸ್ಥರಾಗಿರುವ ಅವರು, ಜೆಡಿಎಸ್‌ನಲ್ಲೇ ಉಳಿಯಬೇಕೋ, ಬಿಜೆಪಿ ಅಥವಾ ಕಾಂಗ್ರೆಸ್‌ಗೆ ಹೋಗಬೇಕೋ ಎಂಬ ಜಿಜ್ಞಾಸೆಯಲ್ಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜತೆ ಮುನಿಸಿಕೊಂಡು, ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿರುವ ಜಿ ಟಿ ದೇವೇಗೌಡ ಅವರೊಂದಿಗೆ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಮಾತನಾಡಿ ಮನವೊಲಿಕೆ ಮಾಡುವ ಪ್ರಯತ್ನ ಸಹ ಮಾಡಿದ್ದರು. ಎರಡು ವರ್ಷಗಳಿಂದ ಪಕ್ಷದ ಸಭೆ, ಸಮಾರಂಭಗಳಿಂದ ದೂರ ಉಳಿದಿರುವ ಶಾಸಕ ಜಿ ಟಿ ದೇವೇಗೌಡ, ಜೆಡಿಎಸ್ ತೊರೆಯುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.