ಬೆಂಗಳೂರು:ರಾಜ್ಯ ರಾಜಕಾರಣದಲ್ಲಿ ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮೈತ್ರಿಕೂಟಗಳ ಮಧ್ಯೆ ನೇರ ಹಣಾಹಣಿ ನಡೆಯುವ ಲಕ್ಷಣಗಳು ಗೋಚರಿಸುತ್ತಿವೆ.
ಬಿಜೆಪಿ ಮಿತ್ರಕೂಟ ಹಾಗೂ ಕಾಂಗ್ರೆಸ್ ಮಿತ್ರಕೂಟಗಳು ಮುಂದಿನ ಸಮರಕ್ಕೆ ಸಜ್ಜಾಗುತ್ತಿದ್ದು, ಇದಕ್ಕೆ ಪೂರಕವಾದ ಘಟನೆಗಳು ಜರುಗುತ್ತಿವೆ. ಕಳೆದ ಕೆಲ ದಶಕಗಳಿಂದ ಮೂರು ಪ್ರಮುಖ ರಾಜಕೀಯ ಶಕ್ತಿಗಳು ಕರ್ನಾಟಕದ ಚುನಾವಣಾ ಅಖಾಡದಲ್ಲಿ ಪರಸ್ಪರ ಹೋರಾಟ ನಡೆಸುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್, ಜನತಾದಳ ಹಾಗೂ ಬಿಜೆಪಿ ನಡುವೆ ನೇರ ಕದನಗಳು ನಡೆಯುತ್ತಿವೆ.
ಆದರೆ 1999 ರಲ್ಲಿ ಜನತಾದಳ ಇಬ್ಬಾಗವಾಗಿ ಜಾತ್ಯತೀತ ಜನತಾದಳ ಮತ್ತು ಸಂಯುಕ್ತ ಜನತಾದಳ ರಚನೆಯಾದ ನಂತರ, ಒಂದು ಬಣ ಬಿಜೆಪಿಯ ಜತೆ ಕೈ ಜೋಡಿಸಿತು. ಅಂದು ಬಿಜೆಪಿಯ ಜತೆ ಕೈ ಜೋಡಿಸಿದ ಸಂಯುಕ್ತ ಜನತಾದಳದ ಬಹುತೇಕ ನಾಯಕರು ಬಿಜೆಪಿಯಲ್ಲೇ ಅಸ್ತಿತ್ವ ಕಂಡುಕೊಂಡರು. ಕಾಲಕ್ರಮೇಣ ಜೆಡಿಎಸ್ ಒಡೆದು ಒಂದು ಬಣ ಸಿದ್ದರಾಮಯ್ಯ ಅವರ ಜತೆ ಕಾಂಗ್ರೆಸ್ನಲ್ಲಿ ನೆಲೆ ಕಂಡುಕೊಂಡಿತು. ಇದರ ಪರಿಣಾಮವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪ್ರಬಲ ಹಣಾಹಣಿ ಆರಂಭವಾದರೂ, ಹಲವು ಬಾರಿ ಜೆಡಿಎಸ್ ಬೆಂಬಲದೊಂದಿಗೆ ಸರ್ಕಾರ ರಚಿಸುವ ಅನಿವಾರ್ಯತೆಗೆ ಒಳಗಾದವು.