ಕರ್ನಾಟಕ

karnataka

ETV Bharat / state

ಬೆಳಗಾವಿ ಅಧಿವೇಶನಕ್ಕೆ ಸಿಎಂ ಉತ್ಸುಕ: ಕೆಲ ಶಾಸಕರಲ್ಲಿ ಮೂಡಿದ ಅಸಮಾಧಾನ

ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಸಿದ್ಧತೆಗಳು ಪೂರ್ಣಗೊಂಡಿದ್ದು, ಆಡಳಿತಾರೂಢ ಬಿಜೆಪಿಯ ಕೆಲ ಶಾಸಕರಲ್ಲೇ ಇದಕ್ಕೆ ಅಸಮಾಧಾನವಿದೆ. ಆದರೆ ಮುಖ್ಯಮಂತ್ರಿ ಸೇರಿದಂತೆ ಉತ್ತರ ಕರ್ನಾಟಕದ ಶಾಸಕರು ಅಧಿವೇಶನಕ್ಕೆ ಉತ್ಸುಕರಾಗಿದ್ದಾರೆ.

Some MLAs upset over Belgaum session
ಕೆಲ ಶಾಸಕರಲ್ಲಿ ಮೂಡಿದ ಅಸಮಧಾನ

By

Published : Dec 7, 2021, 2:07 PM IST

ಬೆಂಗಳೂರು: ಕೋವಿಡ್ ರೂಪಾಂತರಿ ಒಮಿಕ್ರಾನ್ ಭೀತಿಯಲ್ಲಿ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸಲು ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದು, ಆಡಳಿತಾರೂಢ ಬಿಜೆಪಿಯ ಕೆಲ ಶಾಸಕರಲ್ಲೇ ಇದಕ್ಕೆ ಅಸಮಾಧಾನವಿದೆ. ಆದರೆ ಮುಖ್ಯಮಂತ್ರಿ ಸೇರಿದಂತೆ ಉತ್ತರ ಕರ್ನಾಟಕ ಶಾಸಕರು ಬೆಳಗಾವಿ ಅಧಿವೇಶನಕ್ಕೆ ಉತ್ಸುಕರಾಗಿದ್ದು, ಯಡಿಯೂರಪ್ಪ ಕೂಡ ಕುಂದಾನಗರಿಯಲ್ಲಿ ಅಧಿವೇಶನ ನಡೆಸುವ ನಿರ್ಧಾರಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.

ಡಿಸೆಂಬರ್ 13 ರಿಂದ 24 ರವರೆಗೆ ಬೆಳಗಾವಿಯಲ್ಲಿ ಚಳಿಗಾಲದ ವಿಧಾನ ಮಂಡಲ ಅಧಿವೇಶನ ನಡೆಯಲಿದೆ. ಇದಕ್ಕಾಗಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆದರೆ, ಈಗ ರಾಜ್ಯಕ್ಕೆ ಕೊರೊನಾ ಹೊಸ ಪ್ರಬೇಧದ ಒಮಿಕ್ರಾನ್‌ ಕಾಲಿಟ್ಟಿದ್ದು ಶಾಸಕರಲ್ಲಿ ಆತಂಕ ಮೂಡುವಂತೆ ಮಾಡಿದೆ.

ಬೆಳಗಾವಿ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದಲ್ಲಿಯೂ ಈಗ ಒಮಿಕ್ರಾನ್ ಕಾಣಿಸಿಕೊಂಡಿದ್ದು 7 ಕೇಸ್ ಪತ್ತೆಯಾಗಿದೆ ಇದು ಹೊಸ ಆತಂಕಕ್ಕೆ ಕಾರಣವಾಗಿದೆ. ರಾಜ್ಯದ ಮಲೆನಾಡು ಸೇರಿದಂತೆ ದಕ್ಷಿಣ ಕರ್ನಾಟಕ ಭಾಗದ ಕೆಲ ಶಾಸಕರು ಈ ಬಾರಿಯ ಅಧಿವೇಶನವನ್ನೂ ಬೆಳಗಾವಿ ಬದಲು ಬೆಂಗಳೂರಿನಲ್ಲಿಯೇ ಮಾಡಿದರೆ ಒಳ್ಳೆಯದು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮೂರನೇ ಅಲೆಯ ಭೀತಿ ಇದೆ. ಇದರ ನಡುವೆ ಒಮಿಕ್ರಾನ್ ಪ್ರಕರಣಗಳು ದೃಢಪಟ್ಟಿವೆ. ಹೀಗಾಗಿ ಬೆಳಗಾವಿ ಅಧಿವೇಶನ ಸೂಕ್ತವಲ್ಲ. ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ಹೆಚ್ಚಿದೆ. ಅಲ್ಲದೆ ಈಗ ಒಮಿಕ್ರಾನ್ ಪ್ರಕರಣ ಪತ್ತೆಯಾಗಿವೆ. ಗಡಿ ಜಿಲ್ಲೆಯಲ್ಲೇ ಅಧಿವೇಶನ ನಡೆಸುವುದರಿಂದ ಒಮಿಕ್ರಾನ್ ಸುಲಭವಾಗಿ ಹಬ್ಬಬಹುದು ಎನ್ನುವ ಆತಂಕವನ್ನು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ವ್ಯಕ್ತಪಡಿಸಿದ್ದಾರೆ. ಇದಕ್ಕೆ ದಕ್ಷಿಣ ಕರ್ನಾಟಕದ ಕೆಲ ಶಾಸಕರು ದನಿಗೂಡಿಸಿದ್ದಾರೆ. ಆದರೆ ಇವರೆಲ್ಲ ಬಹಿರಂಗವಾಗಿ ಬೆಳಗಾವಿ ಅಧಿವೇಶನ ಬೇಡ ಎನ್ನುವ ಹೇಳಿಕೆ ನೀಡುತ್ತಿಲ್ಲ.

ಸಿಎಂ,ಮಾಜಿ ಸಿಎಂ ಒಲವು:

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಭಾಪತಿ ಬಸವರಾಜ ಹೊರಟ್ಟಿ ಬೆಳಗಾವಿ ಅಧಿವೇಶನಕ್ಕೆ ಉತ್ಸುಕ್ತರಾಗಿದ್ದಾರೆ. ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ವಹಿಸಿ ಅಧಿವೇಶನ ನಡೆಸಲಾಗುತ್ತದೆ ಎಂದು ಸಿಎಂ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಉತ್ತರ ಕರ್ನಾಟಕದ ಬಿಜೆಪಿ ಶಾಸಕರು ಕೂಡ ಬೆಳಗಾವಿ ಅಧಿವೇಶನದ ನಿರೀಕ್ಷೆಯಲ್ಲಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಕೂಡ ಈಗ ಅಧಿವೇಶನಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಅಧಿವೇಶನದ ಕುರಿತು ಮುಖ್ಯಮಂತ್ರಿಗಳಿಗೆ ನೀಡಿರುವ ಆಂತರಿಕ ಅಭಿಪ್ರಾಯದಲ್ಲಿ ಒಮ್ಮೆ ನೆರೆ ಎಂದು ಮತ್ತೊಮ್ಮೆ ಕೋವಿಡ್ ಎಂದು ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಸಾಧ್ಯವಾಗಿಲ್ಲ. ಈ ಬಾರಿ ವಾತಾವರಣ ಅಧಿವೇಶನ ನಡೆಸಲು ಪೂರಕವಾಗಿದೆ. ಹಾಗಾಗಿ, ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಬೆಳಗಾವಿಯಲ್ಲೇ ಚಳಿಗಾಲದ ಅಧಿವೇಶನ ನಡೆಸುವುದು ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಉತ್ತರ ಕರ್ನಾಟಕ ಭಾಗದ ಶಾಸಕರು ಬೆಳಗಾವಿ ಅಧಿವೇಶನಕ್ಕೆ ಒಲವು ತೋರಿದ್ದು ದಕ್ಷಿಣ ಕರ್ನಾಟಕ ಭಾಗದ ಕೆಲವೇ ಕೆಲವು ಶಾಸಕರು ಮಾತ್ರ ಅಧಿವೇಶನ ಬೆಂಗಳೂರಿನಲ್ಲೇ ಮಾಡಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ಸುವರ್ಣಸೌಧ ಪ್ರವೇಶಕ್ಕೆ ಡಬಲ್ ಡೋಸ್ ಕಡ್ಡಾಯ:

ಬೆಳಗಾವಿ ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷಾ ಸಂಖ್ಯೆ ಹೆಚ್ಚು ಮಾಡಿ ವ್ಯಾಕ್ಸಿನೇಷನ್ ಡ್ರೈವ್‌ಗಳ ಚುರುಕಿಗೆ ಸರ್ಕಾರ ಆದೇಶಿಸಿದೆ. ಗಡಿ ಭಾಗದಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಿದ್ದು, ಜಿಲ್ಲಾ ಆರೋಗ್ಯ ಇಲಾಖೆಗೆ ಕೋವಿಡ್ ಸೋಂಕು ನಿಯಂತ್ರಣದಲ್ಲಿರಿಸುವ ಟಾರ್ಗೆಟ್ ನೀಡಿದೆ. ಬೆಳಗಾವಿ ಅಧಿವೇಶನಕ್ಕೆ ಆಗಮಿಸುವ ಎಲ್ಲರಿಗೂ ಕೊರೊನಾ ಲಸಿಕೆಯ ಎರಡೂ ಡೋಸ್ ಆಗಿರುವುದನ್ನು ಕಡ್ಡಾಯಗೊಳಿಸಲಾಗಿದೆ. ಸೋಂಕು ಹರಡದಂತೆ ಏನೆಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೋ ಎಲ್ಲವನ್ನೂ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ.

ಒಟ್ಟಿನಲ್ಲಿ ಬಿಜೆಪಿಯ ಕೆಲ ಶಾಸಕರ ಅಸಮಾಧಾನದ ನಡುವೆಯೂ ಕುಂದಾನಗರಿಯಲ್ಲಿ ಚಳಗಾಲದ ಅಧಿವೇಶನ ನಡೆಸಲು ಸರ್ಕಾರ ಸಜ್ಜಾಗಿದ್ದು, ಕೋವಿಡ್ ಸ್ಫೋಟದ ಆತಂಕದಲ್ಲೇ ಅಧಿವೇಶನ ನಡೆಸಲು ಮುಂದಾಗಿದೆ.

For All Latest Updates

ABOUT THE AUTHOR

...view details