ಬೆಂಗಳೂರು: ರಾಜ್ಯದಲ್ಲಿ 6 ತಿಂಗಳಿನ ಅಧಿಕಾರ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಸಿಎಂ ಬಸವರಾಜಬೊಮ್ಮಾಯಿ ಸರ್ಕಾರವು 'ತಿಂಗಳು ಆರು ನಿರ್ಣಯ ನೂರು' ಸಮಾರಂಭ ನಡೆಸಿತು. ತನ್ನ ಆರು ತಿಂಗಳ ಆಡಳಿತದಲ್ಲಿನ ಸಾಧನೆಗಳ ಕಿರುಹೊತ್ತಿಗೆಯನ್ನೂ ಬಿಡುಗಡೆ ಮಾಡಿದೆ. ಆದರೆ ಬೊಮ್ಮಾಯಿ ಸರ್ಕಾರದ ಆಡಳಿತದಲ್ಲಿ ಕೆಲ ವೈಫಲ್ಯಗಳೂ ಕೂಡ ಎದ್ದು ಕಾಣುತ್ತವೆ.
ಸದ್ಯ ಬೊಮ್ಮಾಯಿ ಸರ್ಕಾರವು ಆರು ತಿಂಗಳ ಆಡಳಿತದ ಸಂಭ್ರಮದಲ್ಲಿದೆ. ಅದಕ್ಕಾಗಿ ವಿಧಾನಸೌಧದಲ್ಲಿ ವಿಶೇಷ ಸಮಾರಂಭ ನಡೆಸಿ, ಆರು ತಿಂಗಳ ಆಡಳಿತದ ಸಾಧನೆಯ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಿದೆ. ಸಾಧನೆಯ ಕಿರುಹೊತ್ತಿಗೆಯಲ್ಲಿ ಅತಿವೃಷ್ಟಿ ಪರಿಹಾರ, ಕೋವಿಡ್ ನಿರ್ವಹಣೆ, ಮಹಿಳೆಯರಿಗೆ, ರೈತರ ಪರ ತೆಗೆದು ಕೊಂಡಿರುವ ತೀರ್ಮಾನಗಳ ಬಗ್ಗೆ ವಿವರಿಸಲಾಗಿದೆ. ಬೊಮ್ಮಾಯಿ ಆಡಳಿತದಲ್ಲಿ ಸಾಧನೆಯ ಪ್ರಚಾರದ ಮಧ್ಯೆ ಕೆಲ ವೈಫಲ್ಯಗಳೂ ಇವೆ.
ಆಡಳಿತಕ್ಕೆ ಮುಟ್ಟದ ಚುರುಕು:ಆಡಳಿತಕ್ಕೆ ಚುರುಕು ಮುಟ್ಟಿಸುತ್ತೇನೆ ಎಂದೇ ಅಧಿಕಾರದ ಚುಕ್ಕಾಣಿ ಹಿಡಿದ ಬೊಮ್ಮಾಯಿ ಸರ್ಕಾರಕ್ಕೆ ಅದನ್ನು ಈಡೇರಿಸುವಲ್ಲಿ ಎಡವಿದೆ. ಆಡಳಿತಕ್ಕೆ ವೇಗ ಕೊಡುವಲ್ಲಿ ಸಿಎಂ ಬೊಮ್ಮಾಯಿ ವಿಫಲರಾಗಿದ್ದಾರೆ.
ಆಡಳಿತಕ್ಕೆ ಚುರುಕು ಮುಟ್ಟಿಸಿ ಜನಪರ ಆಡಳಿತವನ್ನು ಕೊಡುತ್ತೇನೆ ಎಂದು ಸಿಎಂ ಗದ್ದುಗೆ ಏರಿದಾಗಲೇ ಭರವಸೆ ನೀಡಿದ್ದರು. ಆದರೆ ಆಡಳಿತ ನಡೆಸಿ ಆರು ತಿಂಗಳು ಆದರೂ ನಿರೀಕ್ಷಿತ ಚುರುಕು ಮುಟ್ಟಿಸಲು ಸಾಧ್ಯವಾಗಿಲ್ಲ. ಕಡತ ವಿಲೇವಾರಿ ವಿಳಂಬವಾಗಿನೇ ಸಾಗುತ್ತಿದೆ. ಸಾವಿರಾರು ಕಡತಗಳು ವಿಲೇವಾರಿಯಾಗದೇ ವಿವಿಧ ಇಲಾಖೆಗಳಲ್ಲೇ ಹಾಗೆಯೇ ಉಳಿದುಕೊಂಡಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಕಡತ ವಿಲೇವಾರಿಯಾಗದೇ ಇರುವ ಬಗ್ಗೆ ಸಾರ್ವಜನಿಕರೂ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಸಾರ್ವಜನಿಕರು ಮಾತ್ರವಲ್ಲ, ಬಿಜೆಪಿ ಶಾಸಕರೇ ಬಹಿರಂಗವಾಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಆಡಳಿತಕ್ಕೆ ಚುರುಕು ಮುಟ್ಟಿಸುವಲ್ಲಿ ಬೊಮ್ಮಾಯಿ ಸರ್ಕಾರ ವಿಫಲವಾಗಿದೆ ಎಂಬುದು ವ್ಯಾಪಕವಾಗಿ ಕೇಳಿ ಬರುತ್ತಿರುವ ಆರೋಪವಾಗಿದೆ.
ಯೋಜನೆಗಳ ಅನುಷ್ಠಾನದಲ್ಲೂ ಹಿನ್ನಡೆ:ಯೋಜನೆಗಳ ಅನುಷ್ಠಾನದಲ್ಲೂ ವಿಳಂಬವಾಗುತ್ತಿರುವುದು ಬೊಮ್ಮಾಯಿ ಸರ್ಕಾರದ ಮತ್ತೊಂದು ವೈಫಲ್ಯವಾಗಿದೆ. ಹಲವು ಯೋಜನೆಗಳ ಅನುಷ್ಠಾನ ಪರಿಣಾಮಕಾರಿಯಾಗಿ ಜಾರಿಯಾಗದೇ ಇರುವುದು ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆಯಲ್ಲೇ ಬಹಿರಂಗವಾಗಿದೆ.
ವಸತಿ ಯೋಜನೆಯಲ್ಲಿನ ಮನೆ ನಿರ್ಮಾಣ, ಮನೆ ಹಂಚಿಕೆಯಲ್ಲಿ ಬೊಮ್ಮಾಯಿ ಸರ್ಕಾರ ಕಳಪೆ ಪ್ರದರ್ಶನ ತೋರಿದೆ. ಪ್ರಮುಖವಾಗಿ ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ), ಜಲಜೀವನ್ ಮಿಷನ್, ಗ್ರಾಮೀಣ ಸಡಕ್ ಯೋಜನೆ, ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳು ಕಳಪೆ ಪ್ರಗತಿ ಸಾಧಿಸಿದೆ. ಈ ಯೋಜನೆಗಳ ಪೈಕಿ ಶೇ 30ಗಿಂತಲೂ ಕಡಿಮೆ ಪ್ರಗತಿ ಸಾಧಿಸಲಾಗಿದೆ. ಇತ್ತೀಚಿಗಿನ ಕೆಡಿಪಿ ಸಭೆಯಲ್ಲೇ ಈ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು.
ಪ್ರವಾಹ ಪರಿಹಾರ ವಿತರಣೆಯಲ್ಲೂ ಎಡವಿದ ಸರ್ಕಾರ:ಅತಿವೃಷ್ಟಿಗೆ ರಾಜ್ಯದಲ್ಲಿ ಸಾವಿರಾರು ಕೋಟಿ ಹಾನಿಯಾಗಿದೆ. ರೈತರ ಬೆಳೆ ಹಾನಿ ಬೃಹತ್ ಪ್ರಮಾಣದಲ್ಲಿ ಸಂಭವಿಸಿದೆ. ಸಾವಿರಾರು ಜನ ಮನೆಗಳನ್ನು ಕಳೆದುಕೊಂಡು ಸಂಕಷ್ಟಕ್ಕೊಳಗಾಗಿದ್ದರು. ಬೊಮ್ಮಾಯಿ ಸರ್ಕಾರ ದುಪ್ಪಟ್ಟು ಪರಿಹಾರ ಹಣವನ್ನೇನೋ ಘೋಷಿಸಿತು. ಆದರೆ, ಪರಿಹಾರ ವಿತರಣೆ ಮಾತ್ರ ಪರಿಣಾಮಕಾರಿಯಾಗಿ ಸಾಧ್ಯವಾಗಿಲ್ಲ.
ಆರ್ಥಿಕ ಸಂಕಷ್ಟದಿಂದ ಸೊರಗಿರುವ ಸರ್ಕಾರ ಎಲ್ಲ ರೈತರಿಗೆ, ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಇನ್ನೂ ಸಾಧ್ಯವಾಗಿಲ್ಲ. 2019ರಲ್ಲಾದ ಬಹುತೇಕ ಪ್ರವಾಹ ಸಂತ್ರಸ್ತರಿಗೆ ಇನ್ನೂ ಪರಿಹಾರ ಹಣ ಕೈಸೇರಿಲ್ಲ. ಇತ್ತ 2020, 2021ರಲ್ಲಾದ ಅನೇಕ ಪ್ರವಾಹ ಸಂತ್ರಸರ ಕೈಗೆ ಇನ್ನೂ ಪರಿಹಾರ ಹಣ ಸೇರಿಲ್ಲ ಎಂಬ ಕೂಗು ಕೇಳಿ ಬರುತ್ತಿದೆ.