ಬೆಂಗಳೂರು:ಕೊರೊನಾ ಸಂಕಷ್ಟದ ಈ ವೇಳೆಯಲ್ಲಿ ಮಾನವೀಯತೆ ಮರೆತು ಹಣ ವಸೂಲಿ ದಂಧೆ ಮಾಡಿಕೊಂಡಿರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮೇಲೆ ಹಲವು ಸಚಿವರು ಒತ್ತಡ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಖಾಸಗಿ ಆಸ್ಪತ್ರೆಗಳ ಮಾಲೀಕರ ನಡವಳಿಕೆ, ಹಣ ವಸೂಲಿ, ಸರ್ಕಾರದ ಜೊತೆ ಕೈ ಜೋಡಿಸದಿರುವುದು ಹಾಗೂ ಒಪ್ಪಂದದಂತೆ ನಡೆದುಕೊಳ್ಳದಿರುವುದಕ್ಕೆ ಸಚಿವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಸರ್ಕಾರದ ಜೊತೆ ಮಾಡಿಕೊಂಡಿರುವ ಒಪ್ಪಂದದಂತೆ ಖಾಸಗಿ ಆಸ್ಪತ್ರೆಗಳು ಬೆಡ್ಗಳನ್ನು ನೀಡಲೇಬೇಕು. ಯಾವ ಆಸ್ಪತ್ರೆಗಳು ಬೆಡ್ ನೀಡಲು ಹಿಂದೇಟು ಹಾಕುತ್ತವೆಯೋ ಅಂತಹ ಆಸ್ಪತ್ರೆಗಳಿಗೆ ನೀರು ಮತ್ತು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಸರ್ಕಾರವೇ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕೆಂಬ ಅಭಿಪ್ರಾಯವು ಸಹ ವ್ಯಕ್ತವಾಗಿದೆ. ಬೆಂಗಳೂರು ಸೇರಿದಂತೆ ಅನೇಕ ಕಡೆ ಕೊರೊನಾ ನಮ್ಮ ನಿರೀಕ್ಷೆ ಮೀರಿ ಹಬ್ಬುತ್ತಿದ್ದು, ಕಳೆದ ಎರಡು ವಾರಗಳಿಂದ ಪ್ರತಿದಿನ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳು ಮಾನವೀಯತೆ ತೋರಬೇಕಿತ್ತು. ಆದರೆ ಕೋವಿಡ್ ನೆಪದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ದುಪ್ಪಟ್ಟು ದರದಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ. ಹಾಗಾಗಿ ನಾವು ಆಸ್ಪತ್ರೆಗಳ ಮೇಲೆ ಏಕೆ ಕ್ರಮ ಕೈಗೊಳ್ಳಬಾರದೆಂದು ಸಚಿವರು ಸಭೆಯಲ್ಲಿ ಪ್ರಶ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ.