ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಬಿ ಎಸ್ ಯಡಿಯೂರಪ್ಪ ರಾಜೀನಾಮೆ ಕೊಡ್ತಾರೆ, ಬಿಜೆಪಿ ಹೈಕಮಾಂಡ್ ಅವರಿಂದ ರಾಜೀನಾಮೆ ಪಡೆಯುತ್ತಿದೆ ಎಂಬ ವದಂತಿಗಳು ಹರಿದಾಡುತ್ತಿರುವ ಮಧ್ಯೆ ಸಿಎಂ ಪರ ರಾಜ್ಯದ ಅನೇಕ ಸ್ವಾಮೀಜಿಗಳು ಅವರ ಪರ ಬ್ಯಾಟಿಂಗ್ ಬೀಸುತ್ತಿದ್ದಾರೆ.
ಬಿಎಸ್ವೈ ರಾಜೀನಾಮೆ ಕೊಡಲ್ಲ, ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ: ಸೋಮಶೇಖರ್ ಸ್ವಾಮೀಜಿ - ಪುಷ್ಪಗಿರಿ ಮಠ
ಸಿಎಂ ಬದಲಾವಣೆಯಾಗುತ್ತಾರೆ ಎಂಬ ವದಂತಿಯ ನಡುವೆ ಸಾಲು ಸಾಲು ಮಠಾಧೀಶರು ಹಾಗೂ ಸ್ವಾಮೀಜಿಗಳು ಬಿಎಸ್ವೈ ಪರವಾಗಿ ಬ್ಯಾಟ್ ಬೀಸುತ್ತಿದ್ದಾರೆ. ಇದೀಗ ಪುಷ್ಪಗಿರಿ ಮಠದ ಸೋಮಶೇಖರ್ ಶಿವಾಚಾರ್ಯ ಸ್ವಾಮೀಜಿ ಸಹ ಬಿಎಸ್ವೈ ಸಿಎಂ ಆಗಿ ಮುಂದುವರಿಯಲಿ ಎಂದಿದ್ದಾರೆ.
ಹೌದು, ಕಳೆದ ಮೂರ್ನಾಲ್ಕು ದಿನಗಳಿಂದ ಸಿಎಂ ಅಧಿಕೃತ ನಿವಾಸ ಕಾವೇರಿಗೆ ಮಠಾಧೀಶರ ದಂಡೇ ಹರಿದುಬರುತ್ತಿದೆ. ಇಂದು ಸಹ ಕಲೆ ಸ್ವಾಮೀಜಿಗಳು ಬಿಎಸ್ವೈ ನಿವಾಸಕ್ಕೆ ಆಗಮಿಸಿ ಬೆಂಬಲ ಸೂಚಿಸಿದ್ದಾರೆ. ಬಿಎಸ್ವೈ ರಾಜೀನಾಮೆ ಕೊಡಲ್ಲ. ಉಳಿದ ಅವಧಿವರೆಗೆ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಪುಷ್ಪಗಿರಿ ಮಠದ ಸೋಮಶೇಖರ್ ಶಿವಾಚಾರ್ಯ ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾವೇರಿ ನಿವಾಸದಲ್ಲಿ ಬಿಎಸ್ವೈ ಭೇಟಿ ಬಳಿಕ ಮಾತನಾಡಿದ ಅವರು, ಬಿಎಸ್ವೈ ಮುಖ್ಯಮಂತ್ರಿಯಾಗಿ ಮುಂದುವರೆಯಲಿ ಎಂಬುದು ರಾಜ್ಯದ ಜನತೆಯ ಆಶಯ. ರಾಜೀನಾಮೆ ಕೇವಲ ವದಂತಿ ಅಷ್ಟೇ. ಅವರು ರಾಜೀನಾಮೆ ಕೊಡಲ್ಲ. 25 ಸಂಸದರನ್ನು ಕೊಟ್ಟಿದ್ದೇವೆ ಅಂದ್ರೆ ಕೇಂದ್ರದ ನಾಯಕರು ಅರ್ಥ ಮಾಡಿಕೊಳ್ಳಬೇಕು. ಆ ಕೊಡುಗೆ ಯಡಿಯೂರಪ್ಪ ಅವರದ್ದು. ಅವರನ್ನ ಸಿಎಂ ಸ್ಥಾನದಿಂದ ಇಳಿಸಬಾರದು ಎಂಬ ಸಂದೇಶವನ್ನು ಹೈಕಮಾಂಡ್ಗೆ ರವಾನಿಸಿದ್ದಾರೆ.