ಬೆಂಗಳೂರು: ನಿರೀಕ್ಷೆಯಂತೆ ರಾಜ್ಯಾಧ್ಯಕ್ಷ ಸ್ಥಾನ ವಂಚಿತರು ಮತ್ತು ಯಡಿಯೂರಪ್ಪ ಕುಟುಂಬದ ವಿರುದ್ಧ ಅಸಮಾಧಾನಗೊಂಡವರು ಹಾಗೂ ಪಕ್ಷ ತೊರೆಯಲು ಸಿದ್ಧರಾಗಿರುವವರು ನೂತನ ರಾಜ್ಯಾಧ್ಯಕ್ಷರ ಪದಗ್ರಹಣ ಸಮಾರಂಭದಿಂದ ದೂರ ಉಳಿದಿದ್ದಾರೆ. ಮತ್ತೊಂದೆಡೆ ಬಿಎಸ್ವೈ ಬೆಂಬಲಿಗರು, ಪಕ್ಷ ನಿಷ್ಠರು ಪದಗ್ರಹಣ ಸಮಾರಂಭದಲ್ಲಿ ಹಾಜರಾಗಿ ಬೆಂಬಲ ಸೂಚಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ನೂತನ ರಾಜ್ಯಾಧ್ಯಕ್ಷರ ಪದಗ್ರಹಣ ಸಮಾರಂಭದಿಂದ ಕೆಲ ನಾಯಕರು ದೂರ ಉಳಿದು ಅತೃಪ್ತಿ ಹೊರಹಾಕಿದ್ದಾರೆ. ಇತ್ತೀಚಿನ ಎರಡು ಮೂರು ವರ್ಷದಿಂದ ಯಡಿಯೂರಪ್ಪ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿಕೊಂಡು ಬಂದಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಧಾರವಾಡ ಶಾಸಕ ಅರವಿಂದ ಬೆಲ್ಲದ್ ನಿರೀಕ್ಷೆಯಂತೆ ಗೈರಾದರೆ, ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಹಿರಿಯ ನಾಯಕ ವಿ. ಸೋಮಣ್ಣ ಕಾರ್ಯಕ್ರಮದಿಂದ ದೂರ ಉಳಿದು ಬಹಿರಂಗವಾಗಿ ಅಸಮಾಧಾನ ತೋರ್ಪಡಿಸಿದ್ದಾರೆ.
ಇನ್ನು ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ಯಶವಂತಪುರ ಕ್ಷೇತ್ರದ ಶಾಸಕ ಎಸ್ ಟಿ ಸೋಮಶೇಖರ್ ಕ್ಷೇತ್ರದಲ್ಲಿಯೇ ಇದ್ದರೂ ಬಿಜೆಪಿ ಕಚೇರಿಯತ್ತ ಸುಳಿಯದೆ ಬಿಜೆಪಿ ತೊರೆಯುವ ವದಂತಿಗೆ ಮತ್ತಷ್ಟು ಪುಷ್ಠಿ ನೀಡಿದ್ದಾರೆ. ಇದರ ನಡುವೆ ಸಂಘದ ನಿಷ್ಠಾವಂತರಾದ ಅರವಿಂದ ಲಿಂಬಾವಳಿ ಕೂಡ ಗೈರಾಗಿ ಅಚ್ಚರಿ ಮೂಡಿಸಿದ್ದಾರೆ. ಸಿ ಟಿ ರವಿ ಮೊದಲೇ ಗೈರಾಗುವ ಮಾಹಿತಿ ನೀಡಿ ನೂತನ ಅಧ್ಯಕ್ಷರ ಭೇಟಿ ಮಾಡಿ ಶುಭ ಕೋರಿದ್ದರು.