ಬೆಂಗಳೂರು: ಸೋಲಾರ್ ಪಾರ್ಕ್ ನಿರ್ಮಾಣದ ವೇಳೆ ಗುತ್ತಿಗೆ ನೀಡಿಕೆಯಲ್ಲಿ ಅವ್ಯವಹಾರ ನಡೆದಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಆರ್ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರದ ಅವಧಿಯಲ್ಲಿ ಖಾಸಗಿಯವರಿಗೆ ಸೋಲಾರ್ನಿಂದ ವಿದ್ಯುತ್ ಉತ್ಪಾದನೆಗೆ ನೀಡಿರುವ ಪರವಾನಗಿಯಲ್ಲಿ ಆಗಿರುವ ಅವ್ಯವಹಾರವನ್ನು ಮುಚ್ಚಿಹಾಕಲು ಪ್ರಯತ್ನ ಮಾಡುತ್ತಿದ್ದಾರೆ. ಕೇವಲ 7 ಸೆಕೆಂಡ್ನಲ್ಲಿ ಆನ್ಲೈನ್ ಮೂಲಕ ನೀಡಿರುವ ಪಟ್ಟಿಯನ್ನು ನೀಡಿದರೆ ಯಾವ ರೀತಿ ಆಗಿದೆ ಎಂದು ತಿಳಿಯುತ್ತದೆ. ಅದರ ಬಗ್ಗೆ ತನಿಖೆ ಸಮಗ್ರ ತನಿಖೆ ನಡೆಸಲಾಗುತ್ತದೆ ಎಂದರು.
ಚಂದ್ರಶೇಖರ್ ಸಾವಿನ ತನಿಖೆ: ಶಾಸಕ ರೇಣುಕಾಚಾರ್ಯ ಅವರ ಸಹೋದರನ ಮಗ ಚಂದ್ರಶೇಖರ್ ನಿಗೂಢ ಸಾವಿಗೆ ಸಂಬಂಧಿಸಿದಂತೆ ಶಾಸಕರೊಂದಿಗೆ ಮಾತನಾಡಿದ್ದೇನೆ. ಅವರ ಪ್ರಕಾರ ಏನು ನಡೆದಿದೆ ಎಂದು ಮಾಹಿತಿ ನೀಡಿ, ಸೂಕ್ತ ನಿರ್ದೇಶನವನ್ನು ಐ.ಜಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ನೀಡುವುದಾಗಿ ತಿಳಿಸಿದ್ದೇನೆ. ಮರಣೋತ್ತರ ಪರೀಕ್ಷೆಯಲ್ಲಿ ಬಹುತೇಕ ಸತ್ಯಾಂಶ ಹೊರಬರುತ್ತದೆ. ನಂತರ ತನಿಖೆಯನ್ನು ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಬೇಕೆಂದು ನಿರ್ಧರಿಸಲಾಗುತ್ತದೆ ಎಂದು ತಿಳಿಸಿದರು.
ಜನಸಂಕಲ್ಪ ಯಾತ್ರೆ: ನಾಳೆಯಿಂದ ಜನಸಂಕಲ್ಪ ಯಾತ್ರೆ ಪುನಾರಂಭವಾಗಲಿದೆ. ಉಡುಪಿ, ಗದಗ, ಹಾವೇರಿ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಮೂರು ದಿನಗಳು ಸತತ ವಾಗಿ ಕಾರ್ಯಕ್ರಮಗಳಿವೆ. ಡಿಸೆಂಬರ್ ವರೆಗೆ ಜನಸಂಕಲ್ಪ ಯಾತ್ರೆ ಮುಂದುವರೆಯಲಿದೆ. ಎಲ್ಲೆಡೆ ಅಭೂತಪೂರ್ವ ಬೆಂಬಲ ದೊರೆಯುತ್ತಿದೆ. ಈ ಬಾರಿ ಮುಂಬೈ ಕರ್ನಾಟಕದಲ್ಲಿ ಪ್ರವಾಸ ಮಾಡುತ್ತಿದ್ದು, ಇದು ನಮ್ಮ ಮುಂದಿನ ವಿಜಯಕ್ಕೆ ಪುಷ್ಟಿ ನೀಡುತ್ತಿದೆ.