ಬೆಂಗಳೂರು: ಕೇರಳದ ಜ್ಯೋತಿಷ್ಯಗಳ ಸಲಹೆಯಂತೆ ಗ್ರಹಣ ಕಾಲದಲ್ಲಿ ಯಾರನ್ನೂ ಭೇಟಿಯಾಗದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿಯೇ ಕಾಲ ಕಳೆದರು. ಗ್ರಹಣ ಮುಕ್ತಾಯದ ನಂತರ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ಸೂರ್ಯ ಗ್ರಹಣದ ಹಿನ್ನಲೆ ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸ ಧವಳಗಿರಿಯಲ್ಲೇ ಸಿಎಂ ಕಾಲ ಕಳೆದರು. ಗ್ರಹಣ ಮುಕ್ತಾಯವರೆಗೂ ಕೊಠಡಿಯಿಂದ ಹೊರಗೆ ಬಾರದ ಸಿಎಂ, ಜ್ಯೋತಿಷಿಗಳ ಸಲಹೆಯಂತೆ ಗ್ರಹಣ ಮುಕ್ತಾಯದ ನಂತರವೇ ತಮ್ಮ ಕೊಠಡಿಯಿಂದ ಹೊರಬಂದರು. ನಂತರ ಪೂಜೆ ಸಲ್ಲಿಸಿ ಬಳಿಕ ಉಪಹಾರ ಸೇವನೆ ಮಾಡಿದರು.
ಕಂಕಣ ಸೂರ್ಯ ಗ್ರಹಣ ಹಿನ್ನೆಲೆ ಎರಡು ದಿನಗಳ ಹಿಂದಷ್ಟೇ ಕೇರಳಕ್ಕೆ ತೆರಳಿ ವಿಶೇಷ ಹೋಮ-ಹವನ ನೆರವೇರಿಸಿದ್ದ ಸಿಎಂ, ಇಂದು ಅದರ ಮುಂದುವರಿದ ಭಾಗವಾಗಿ ತಮ್ಮ ನಿವಾಸದಲ್ಲೇ ವಿಶೇಷ ಪೂಜೆ ಸಲ್ಲಿಸಿ ಗ್ರಹಣದ ದೋಷ ಪರಿಣಾಮ ಬೀರದಂತೆ ಪರಿಹಾರಾರ್ಥವಾಗಿ ಜ್ಯೋತಿಷಿಗಳು ನೀಡಿದ್ದ ಎಲ್ಲ ಸಲಹೆಗಳನ್ನು ಸಿಎಂ ಪಾಲಿಸಿದರು. ನಂತರ ತಮ್ಮ ಕೆಲಸ ಕಾರ್ಯಗಳತ್ತ ಗಮನ ಹರಿಸಿದರು.
ಗ್ರಹಣ ಮುಕ್ತಾಯ ಬಳಿಕ ಸಿಎಂ ಬಿಎಸ್ ವೈ ಹೊಸ ಕಾರಿಗೆ ಪೂಜೆ ಸಲ್ಲಿಕೆ ಮಾಡಲಾಯಿತು. ಹೊಸದಾಗಿ ಮಂಜೂರಾಗಿದ್ದ ಸರ್ಕಾರಿ ಕಾರಿಗೆ ಚಾಲಕ ಹಾಗೂ ಇತರ ಸಿಬ್ಬಂದಿ ಪೂಜೆ ಸಲ್ಲಿಸಿದರು. ನಂತರ ಸಂಖ್ಯಾಶಾಸ್ತ್ರದ ಪ್ರಕಾರ ಹೊಸ ಕಾರಿಗೆ ನಂಬರ್ ಪ್ಲೇಟ್ ಅಳವಡಿಸಲಾಯಿತು. ಬಿಎಸ್ ವೈ ಅದೃಷ್ಟದ ಸಂಖ್ಯೆಯನ್ನೇ ಹೊಸ ಕಾರಿಗೆ ಮಾಡಲಾಗಿದ್ದು, ಕೆಎ 03 ಜಿಎ 4545 ಸಂಖ್ಯೆಯ ಪ್ಲೇಟ್ ಅಳವಡಿಸಲಾಗಿದೆ.