ಬೆಂಗಳೂರು: 'ಮೌಢ್ಯ ಪ್ರತಿಬಂಧಕ ಕಾಯ್ದೆ’ ಜಾರಿಗೆ ತರಲು ಮುಂದಾಗಿದ್ದ ಕಾಂಗ್ರೆಸ್ ನಾಯಕರು ಅದ್ಯಾಕೋ ಸೂರ್ಯಗ್ರಹಣ ಸಂದರ್ಭದಲ್ಲಿ ಸ್ತಬ್ಧರಾಗಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.
ಮಾಜಿ ಸಿಎಂ ಸಿದ್ದರಾಮಯ್ಯನವರೇ ಸಾಕಷ್ಟು ಮುತುವರ್ಜಿವಹಿಸಿ ಖುದ್ದು ಕಾಯ್ದೆ ಜಾರಿಗೆ ಮುಂದಾಗಿದ್ದರು. ಸಮಾಜದಲ್ಲಿ ಮೂಢನಂಬಿಕೆ, ಕಂದಾಚಾರಗಳನ್ನು ಹೋಗಲಾಡಿಸಲು ಅವರು ಸಾಕಷ್ಟು ಆಸಕ್ತಿ ತೋರಿಸಿದ್ದರು. ಆದರೆ, ಅವರು ಇಂದು ಬೆಂಗಳೂರಿನ ತಮ್ಮ ನಿವಾಸ ಕಾವೇರಿಯಲ್ಲೇ ಇದ್ದರೂ ಯಾವುದೇ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿಲ್ಲ. ಯಾರನ್ನೂ ಭೇಟಿಯೂ ಆಗುತ್ತಿಲ್ಲ. ಮನೆಯಿಂದ ಆಚೆ ತೆರಳದೇ ಇರಲು ಮಾಜಿ ಸಿಎಂ ನಿರ್ಧರಿಸಿದ್ದಾರೆ ಎಂಬ ಮಾಹಿತಿ ಇದೆ.
ಇನ್ನೊಂದೆಡೆ ಕೆಪಿಸಿಸಿ ಕಚೇರಿಯಲ್ಲಿ ವಾರಕ್ಕೆ ಮೂರ್ನಾಲ್ಕು ಸುದ್ದಿಗೋಷ್ಠಿ ನಡೆಸುತ್ತಿದ್ದ ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಹಾಗೂ ಮಾಜಿ ಸಂಸದ ವಿ. ಎಸ್. ಉಗ್ರಪ್ಪ ಇಂದು ಸುದ್ದಿಯಲ್ಲಿಲ್ಲ. ಅಲ್ಲದೇ, ಕೆಪಿಸಿಸಿ ಅಧ್ಯಕ್ಷರು ತಮ್ಮ ರಾಜೀನಾಮೆ ಸಲ್ಲಿಸಿದ ನಂತರ ಕೆಪಿಸಿಸಿ ಕಚೇರಿಗೆ ಅವರು ಬಂದಿದ್ದೇ ಕಡಿಮೆ. ಇದುವರೆಗೂ ಅವರ ರಾಜೀನಾಮೆ ಅಂಗೀಕಾರವೂ ಆಗಿಲ್ಲ, ನಿರಾಕರಣೆಯೂ ಆಗಿಲ್ಲ. ಆದರೆ, ನಿನ್ನೆಯವರೆಗೆ ರಾಜ್ಯ ಪ್ರವಾಸದಲ್ಲಿದ್ದ ಅವರು, ಇಂದು ಬೆಂಗಳೂರಿನಲ್ಲಿದ್ದು, ಮಧ್ಯಾಹ್ನದ ನಂತರದವರೆಗೂ ಯಾವುದೇ ಕಾರ್ಯಕ್ರಮ ಇರಿಸಿಕೊಂಡಿಲ್ಲ.