ಬೆಂಗಳೂರು:ಕಾಂಗ್ರೆಸ್ ನಾಯಕರನ್ನು ಸೆಳೆದು ಬಿಜೆಪಿ ಆಪರೇಷನ್ ಕಮಲಕ್ಕೆ ಯತ್ನಿಸುತ್ತಿದ್ದು, ಇದರ ಹಿಂದೆ ಭ್ರಷ್ಟಾಚಾರದ ವಾಸನೆ ಅಡಗಿದೆ. ಈ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿ ನಗರ ಪೊಲೀಸ್ ಆಯುಕ್ತರಿಗೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಎಂಬವರು ದೂರು ಸಲ್ಲಿಸಿದರು. ಕಾಂಗ್ರೆಸ್ ಸರ್ಕಾರವನ್ನು ಅಸ್ತಿರಗೊಳಿಸಲು ಬಿಜೆಪಿ ನಾಯಕರು ಆಪರೇಷನ್ ಕಮಲ ಹೆಸರಿನಲ್ಲಿ ಸುಮಾರು 20 ಜನ ಶಾಸಕರನ್ನು ಸಂಪರ್ಕಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕರನ್ನು ಖರೀದಿ ಮಾಡಿ ಸರ್ಕಾರ ರಚಿಸಿರುವ ಉದಾಹರಣೆ ನಮ್ಮ ಮುಂದಿದೆ. ನಗರ ಖಾಸಗಿ ಹೋಟೆಲ್ ಶಾಸಕರನ್ನು ಸಂಪರ್ಕಿಸಿ ಕಾಂಗ್ರೆಸ್ನಿಂದ ರಾಜೀನಾಮೆ ನೀಡಿ ಕೋಟ್ಯಂತರ ರೂಪಾಯಿ ನೀಡುವ ಆಮಿಷವೊಡ್ಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಬಗ್ಗೆ ಮಂಡ್ಯ ಶಾಸಕ ರವಿಕುಮಾರ್ ಗಾಣಿಗ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದಾರೆ. ಖಾಸಗಿ ಹೊಟೇಲ್ನಲ್ಲಿ ಕೆಲ ಶಾಸಕರು ಭೇಟಿಯಾಗಿದ್ದಾರೆ. ಸಂದರ್ಭ ಬಂದಾಗ ವಿಡಿಯೊ, ಆಡಿಯೊ ಕರೆ ಸಮೇತ ಬಹಿರಂಗಪಡಿಸಲಾಗುವುದು ಎಂದು ರವಿಕುಮಾರ್ ಹೇಳಿದ್ದಾರೆ. ಶಾಸಕರನ್ನು ಸೆಳೆದು ಹಣ ನೀಡುವ ಆಮಿಷವೊಡ್ಡುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಹೀಗಾಗಿ ಶಾಸಕರನ್ನು ಸೆಳೆದು ಹಣದ ವ್ಯವಹಾರ ನಡೆಸುತ್ತಿರುವ ವ್ಯಕ್ತಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988ರ ಸೆಕ್ಷನ್ 8 ಹಾಗೂ ಐಪಿಸಿ 171-ಬಿ ಮತ್ತು 120-ಬಿ ಅಡಿಯಲ್ಲಿ ಕಾನೂನಿನಡಿ ಕ್ರಮ ಕೈಗೊಳ್ಳಬೇಕೆಂದು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ.