ಬೆಂಗಳೂರು: ಕಳೆದ ಒಂದು ವರ್ಷದ ಅವಧಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ. ಡಿಸಿಎಂ ಗೋವಿಂದ ಕಾರಜೋಳ ಅವರ ಬಳಿ ಇದ್ದ ಈ ಖಾತೆಯನ್ನು ಈಗ ಶ್ರೀರಾಮುಲು ಅವರಿಗೆ ವರ್ಗಾಯಿಸಲಾಗಿದೆ. ಕಳೆದ ಒಂದು ವರ್ಷದಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ಸರ್ಕಾರ ಈ ಒಂದು ವರ್ಷದಲ್ಲಿ ಎಷ್ಟು ಅನುದಾನ ವಿನಿಯೋಗಿಸಿದೆ ಅನ್ನೋ ಮಾಹಿತಿ ಇಲ್ಲಿದೆ.
ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯಡಿ 2019-20ನೇ ಸಾಲಿನಲ್ಲಿ 27,558 ಕೋಟಿ ರೂ. ಒದಗಿಸಲಾಗಿತ್ತು. ವಿವಿಧ ಇಲಾಖೆಗಳು ವಿವಿಧ ಕಾರ್ಯಕ್ರಮಗಳಿಗೆ ಮಾರ್ಚ್ ಅಂತ್ಯದ ವೇಳೆಗೆ 25,387 ಕೋಟಿ ರೂ.ನಷ್ಟು (ಶೇ. 92 ) ವೆಚ್ಚ ಮಾಡಲಾಗಿದೆ. ಪರಿಶಿಷ್ಟ ಜಾತಿಯವರ ಅಭಿವೃದ್ಧಿಗಾಗಿ 18,228 ಕೋಟಿ ರೂ. ಹಾಗೂ ಪರಿಶಿಷ್ಟ ಪಂಗಡದವರ ಏಳಿಗೆಗಾಗಿ 7,159 ಕೋಟಿ ರೂ. ವಿನಿಯೋಗಿಸಲಾಗಿದೆ. 2020-21ನೇ ಸಾಲಿನಲ್ಲಿ 27,699 ಕೋಟಿ ರೂ. ಮೀಸಲಿಡಲಾಗಿದೆ. ಕೊರೊನಾ ಹಿನ್ನೆಲೆ 5603 ಕೋಟಿ ರೂ. (ಶೇ. 20)ರಷ್ಟು ವೆಚ್ಚ ಮಾಡಲಾಗಿದೆ. ಸಮಾಜ ಕಲ್ಯಾಣ ಇಲಾಖೆಯು 2019-20ನೇ ಸಾಲಿನಲ್ಲಿ 4139 ಕೋಟಿ (ಶೇ. 98) ರೂ. ವೆಚ್ಚ ಮಾಡಲಾಗಿದೆ. 2020-21ನೇ ಸಾಲಿನಲ್ಲಿ 3821 ಕೋಟಿ ರೂ. ಮೀಸಲಿಡಲಾಗಿದ್ದು, 722 ಕೋಟಿ ರೂ. (ಶೇ. 20) ವೆಚ್ಚ ಮಾಡಲಾಗಿದೆ. ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕಾಗಿ 2019-20ನೇ ಸಾಲಿನಲ್ಲಿ 1281 ಕೋಟಿ ರೂ. (ಶೇ. 97) ವಿನಿಯೋಗಿಸಲಾಗಿದೆ.
2020-21 ನೇ ಸಾಲಿನಲ್ಲಿ 1461 ಕೋಟಿ ರೂ. ಹಂಚಿಕೆಯಾಗಿದ್ದು, 2019-20ನೇ ಸಾಲಿನಲ್ಲಿ 303 ಕೋಟಿ ರೂ. ವೆಚ್ಚ ಮಾಡಲಾಗಿದೆ. 1,69,374 ಪರಿಶಿಷ್ಟ ಜಾತಿ ಹಾಗೂ 36548 ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ವಸತಿ ನಿಲಯ ಪ್ರವೇಶಾವಕಾಶ ಕಲ್ಪಿಸಲಾಗಿದೆ. 9.11 ಲಕ್ಷ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ 134 ಕೋಟಿ ರೂ. ಹಾಗೂ ಪರಿಶಿಷ್ಟ ಪಂಗಡದ 3.99 ಲಕ್ಷ ವಿದ್ಯಾರ್ಥಿಗಳಿಗೆ 51.97 ಕೋಟಿ ರೂ. ವಿದ್ಯಾರ್ಥಿ ವೇತನ ನೀಡಲಾಗಿದೆ. ಇನ್ನು ಗಂಗಾ ಕಲ್ಯಾಣ ಯೋಜನೆಯಡಿ 8270 ಕೊಳವೆ ಬಾವಿಗಳನ್ನು ಕೊರೆಯಿಸಲಾಗಿದ್ದು, ಹಿಂದೆ ಕೊರೆದಿರುವ 9125 ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.